ಎಫ್ಐಆರ್ ರೆಡಿ ; ರಾಗಿಣಿ ಆಪ್ತ ರವಿಶಂಕರ್ ಹೆಸರು ನಾಪತ್ತೆ ! 

05-09-20 05:23 pm       Bangalore Correspondent   ಕ್ರೈಂ

12 ಮಂದಿ ವಿರುದ್ಧ ಕಾಟನ್​ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಇದರಲ್ಲಿ ಸೆನೆಗಲ್ ದೇಶದ ಪ್ರಜೆ ಲೂಮ್ ಪೆಪ್ಪರ್ ಕೂಡ ಇದ್ದಾರೆ. ವಿಶೇಷ ಅಂದ್ರೆ ರಾಗಿಣಿ ಸಿಕ್ಕಿಬೀಳಲು ಕಾರಣನಾಗಿದ್ದ ರವಿಶಂಕರ್ ಹೆಸರೇ ಎಫ್ಐಆರ್ ನಲ್ಲಿ ಇಲ್ಲ. 

ಬೆಂಗಳೂರು, ಸೆ. 05: ಡ್ರಗ್ಸ್ ನಂಟಿನ ಹಿಂದೆ ಬಿದ್ದಿರುವ ಪೊಲೀಸರು ಈವರೆಗೆ ಸಿಕ್ಕಿಬಿದ್ದಿರುವ ಪ್ರಮುಖ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ನಟಿ ರಾಗಿಣಿ ದ್ವಿವೇದಿ ಸೇರಿದಂತೆ 12 ಮಂದಿ ವಿರುದ್ಧ ಕಾಟನ್​ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಇದರಲ್ಲಿ ಸೆನೆಗಲ್ ದೇಶದ ಪ್ರಜೆ ಲೂಮ್ ಪೆಪ್ಪರ್ ಕೂಡ ಇದ್ದಾರೆ. ವಿಶೇಷ ಅಂದ್ರೆ ರಾಗಿಣಿ ಸಿಕ್ಕಿಬೀಳಲು ಕಾರಣನಾಗಿದ್ದ ರವಿಶಂಕರ್ ಹೆಸರೇ ಎಫ್ಐಆರ್ ನಲ್ಲಿ ಇಲ್ಲ. 

ಶಿವಪ್ರಕಾಶ್ ಎಂಬವರನ್ನು ಎ1 ಆರೋಪಿ ಎಂದು ಹೆಸರಿಸಲಾಗಿದೆ. ನಟಿ ರಾಗಿಣಿ ದ್ವಿವೇದಿ ಎ2 ಆರೋಪಿಯಾದರೆ, ಫ್ಯಾಷನ್ ಲೋಕದ ಸೆಲಬ್ರಿಟಿ ವೀರೇನ್ ಖನ್ನಾ ಎ3 ಆರೋಪಿಯಾಗಿದ್ಧಾರೆ. ಪ್ರಶಾಂತ್ ರಾಂಕಾ, ವೈಭವ್ ಜೈನ್, ಆದಿತ್ಯ ಆಳ್ವ, ಲೂಮ್ ಪೆಪ್ಪರ್, ಸೈಮನ್, ಪ್ರಶಾಂತ್ ಬಾಬು, ಅಶ್ವಿನ್ ಅಲಿಯಾಸ್ ಬೂಗಿ, ರಾಹುಲ್ ತೋನ್ಸೆ, ವಿನಯ್ ಹಾಗೂ ಇತರರನ್ನು ಕ್ರಮ ಪ್ರಕಾರ ಇತರೇ ಆರೋಪಿಗಳನ್ನಾಗಿ ಎಫ್​ಐಆರ್​ನಲ್ಲಿ ದಾಖಲಿಸಲಾಗಿದೆ. ಸೆಕ್ಷನ್ 120 ಬಿ ಹಾಗೂ ಎನ್​ಡಿಪಿಎಸ್ ಕಾಯ್ದೆಯ 21, 21ಸಿ, 27ಎ, 27ಬಿ, 29 ಸೆಕ್ಷನ್ ಅಡಿ ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿದೆ. ಎನ್​ಡಿಪಿಎಸ್ ಸೆಕ್ಷನ್ 21ಸಿ ಅಡಿ ಆರೋಪ ಸಾಬೀತಾದರೆ 10 ವರ್ಷಗಳಿಗೂ ಮೇಲ್ಪಟ್ಟು ಜೈಲು ಶಿಕ್ಷೆ ವಿಧಿಸುವ ಅವಕಾಶ ಇದೆ. 

ವಿಶೇಷ ಅಂದ್ರೆ, ರಾಗಿಣಿ ದ್ವಿವೇದಿ ಸಿಕ್ಕಿಬೀಳಲು ಕಾರಣವಾದ ಆರ್​ಟಿಒ ಅಧಿಕಾರಿ ರವಿಶಂಕರ್ ಹೆಸರು ಎಫ್​ಐಆರ್​ನಲ್ಲಿ ಇಲ್ಲ. 

ಪ್ರಕರಣದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದ ಮೊದಲ ಆರೋಪಿಗಳ ಪೈಕಿ ರವಿಶಂಕರ್ ಕೂಡ ಒಬ್ಬರು. ವಿಚಾರಣೆಯಲ್ಲಿ ಡ್ರಗ್ ಸಪ್ಲೈ, ಪಾರ್ಟಿ ಆಯೋಜನೆ ಮಾಡುತ್ತಿದ್ದ ಮಾಹಿತಿಯನ್ನು ಇವರು ನೀಡಿದ್ದರೆನ್ನಲಾಗಿದೆ. ನಟಿ ರಾಗಿಣಿ ದ್ವಿವೇದಿ ಮತ್ತು ವಿರೇನ್ ಖನ್ನಾ ಬಗ್ಗೆಯೂ ಮಾಹಿತಿ ನೀಡಿದ್ದು ಇದೇ ರವಿಶಂಕರ್. ಸಿಸಿಬಿ ಮೂಲಗಳ ಪ್ರಕಾರ, ರವಿಶಂಕರ್ ಅವರನ್ನು ಅಪ್ರೂವರ್ ಆಗಿ ಮಾಡಲಾಗಿದೆ. ಹೀಗಾಗಿ ಎಫ್​ಐಆರ್​ನಲ್ಲಿ ಅವರ ಹೆಸರು ದಾಖಲಾಗಿಲ್ಲ ಎನ್ನಲಾಗಿದೆ. 

ಎ7 ಆರೋಪಿ ಸೆನೆಗಲ್ ದೇಶದ ಪ್ರಜೆ ಲೂಮ್ ಪೆಪ್ಪರ್ ಅಲಿಯಾಸ್ ಸೈಮನ್ ವಿದೇಶದಿಂದ ಬರುತ್ತಿದ್ದ ಡ್ರಗ್ಸ್ ಅನ್ನು ಬೆಂಗಳೂರಿನಲ್ಲಿ ಸರಬರಾಜು ಮಾಡುತ್ತಿದ್ದ ವ್ಯಕ್ತಿ ಎನ್ನಲಾಗಿದೆ. ಸಿಸಿಬಿ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಇನ್ನೊಂದೆಡೆ, ಆರೋಪಿ ರಾಹುಲ್​ ವಿಚಾರಣೆ ಕೂಡ ನಡೆಯುತ್ತಿದೆ. ಸಂಜನಾ ಗಲ್​ರಾಣಿ ಆಪ್ತನಾಗಿರುವ ರಾಹುಲ್ ವಿಚಾರಣೆ ವೇಳೆ ನೀಡುವ ಮಾಹಿತಿ ಆಧರಿಸಿ, ಸಂಜನಾ ವಿಚಾರಣೆ ನಡೆಸುವ ಸಾಧ್ಯತೆ ಇದೆ.

Join our WhatsApp group for latest news updates