ಬಿಬಿಎಂಪಿ ಕಾರ್ಪೊರೇಟರ್ ಮಗನಿಗೂ ಮುಂಬೈ ಡ್ರಗ್ ನಂಟು ; ಎನ್ ಸಿಬಿ ನೋಟಿಸ್ 

06-09-20 02:17 pm       Bangalore Correspondant   ಕ್ರೈಂ

ರಾಜಾಜಿನಗರದ ಕಾರ್ಪೋರೇಟರ್ ಕೇಶವ ಮೂರ್ತಿ ಮಗ ಯಶಸ್​ ಮತ್ತು ಮುಂಬೈನಲ್ಲಿ ಬಂಧಿಯಾಗಿರುವ ಡ್ರಗ್ ಪೆಡ್ಲರ್ ಮಹಮ್ಮದ್ ರೆಹಮಾನ್ ನಡುವೆ ಸಂಪರ್ಕ ಎನ್ ಸಿಬಿ ಅಧಿಕಾರಿಗಳಿಂದ ನೋಟಿಸ್​

ಬೆಂಗಳೂರು, ಸೆಪ್ಟೆಂಬರ್ 6: ಬಿಬಿಎಂಪಿ ಕಾರ್ಪೋರೇಟರ್ ಒಬ್ಬರ ಮಗನಿಗೆ ಡ್ರಗ್ ನಂಟಿನ ಬಗ್ಗೆ ತನಿಖೆ ನಡೆಸುತ್ತಿರುವ ಎನ್ ಸಿಬಿ ಅಧಿಕಾರಿಗಳು ನೋಟಿಸ್​ ನೀಡಿದ್ದಾರೆ. 

ರಾಜಾಜಿನಗರದ ಕಾರ್ಪೋರೇಟರ್ ಕೇಶವ ಮೂರ್ತಿ ಮಗ ಯಶಸ್​ ಮತ್ತು ಮುಂಬೈನಲ್ಲಿ ಬಂಧಿಯಾಗಿರುವ ಡ್ರಗ್ ಪೆಡ್ಲರ್ ಮಹಮ್ಮದ್ ರೆಹಮಾನ್ ನಡುವೆ ಸಂಪರ್ಕ ಇದ್ದುದು ಪತ್ತೆಯಾಗಿತ್ತು. ಹೀಗಾಗಿ ಬೆಂಗಳೂರಿಗೆ ಆಗಮಿಸಿದ್ದ ಎನ್​ಸಿಬಿ ಅಧಿಕಾರಿಗಳು ಕಾರ್ಪೋರೇಟರ್ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಆದರೆ ಈ ವೇಳೆ ಯಾವುದೇ ಮಾದಕ ವಸ್ತುಗಳು ಪತ್ತೆಯಾಗಿಲ್ಲ. ಸದ್ಯ ವಿಚಾರಣೆಗೆ ಹಾಜರಾಗಲು ಕಾರ್ಪೋರೇಟರ್ ಮಗನಿಗೆ ಎನ್​ಸಿಬಿ ನೋಟಿಸ್ ನೀಡಿದೆ. ಮುಂಬೈ ಡ್ರಗ್ಸ್ ಪೆಡ್ಲರ್ ಮಹಮದ್ ರೆಹಮಾನ್ ಜತೆ ಸೇರಿ ಡ್ರಗ್ಸ್ ಖರೀದಿ ಮತ್ತು ಡ್ರಗ್ಸ್ ಮಾರಾಟ ಮಾಡಿರುವ ಅನುಮಾನದ ಮೇಲೆ ನೋಟಿಸ್ ನೀಡಿ, ವಿಚಾರಣೆಗೆ ಕರೆದಿದ್ದಾರೆ. ಮುಂಬೈನ ಎನ್​ಸಿಬಿ ಕಚೇರಿಗೆ ಆಗಮಿಸಿ ವಿವರಣೆ ನೀಡುವಂತೆ ನೋಟಿಸ್​ನಲ್ಲಿ ಉಲ್ಲೇಖಿಸಲಾಗಿದೆ. 
ಡ್ರಗ್ಸ್ ಪೆಡ್ಲಿಂಗ್ ಜೊತೆಗೆ ಈ ನಿಕಟವರ್ತಿಗಳಿಗೆ ಯಶಸ್ ಹಲವು ಬಾರಿ ಹಣ ವರ್ಗಾವಣೆ ಮಾಡಿರುವುದೂ ಪತ್ತೆಯಾಗಿದೆ. ಸದ್ಯ ಕೇಶವ ಮೂರ್ತಿ ಮಗ ಯಶಸ್ ನಾಪತ್ತೆಯಾಗಿದ್ದು, ಆತನಿಗಾಗಿ ಎನ್​ಸಿಬಿ ಹುಡುಕಾಟ ನಡೆಸುತ್ತಿದೆ. 

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾರ್ಪೊರೇಟರ್ ಕೇಶವಮೂರ್ತಿ, ಮಗನಿಗೆ ಧೈರ್ಯವಾಗಿರಲು ಹೇಳಿದ್ದೇನೆ. ಮಗ ತಪ್ಪು ಮಾಡಿಲ್ಲ. ಎರಡು ಬಾರಿ ಗೋವಾಗೆ ಹೋಗಿ ಬಂದಿದ್ದ. ಬಂಧಿತರ ಮೊಬೈಲ್ ನಲ್ಲಿ ಮಗನ ನಂಬರ್ ಇದ್ದ ಕಾರಣಕ್ಕೆ ವಿಚಾರಣೆಗೆ ಕರೆದಿದ್ದಾರೆ ಅಷ್ಟೇ ಎಂದು ಹೇಳಿದ್ದಾರೆ.

Join our WhatsApp group for latest news updates