ಪೊಲೀಸ್ ಇನ್ಸ್ ಪೆಕ್ಟರ್ ಮನೆಗೇ ಕನ್ನ ! ಸೈಕಲ್ ಎಗರಿಸಿ ಪರಾರಿಯಾದ ಕಳ್ಳ !!

28-08-21 10:37 pm       Mangaluru Correspondent   ಕ್ರೈಂ

ಇಲ್ಲೊಬ್ಬ ಪೊಲೀಸರಿಗೇ ಮೇಷ್ಟ್ರು ಆಗಿರುವ ಇನ್ ಸ್ಪೆಕ್ಟರ್ ಒಬ್ಬರ ಮನೆಗೆ ಕನ್ನ ಹಾಕಿದ್ದಾನೆ.

ಮಂಗಳೂರು, ಆಗಸ್ಟ್ 28: ಪೊಲೀಸರು ಕಳ್ಳರನ್ನು ಹಿಡಿಯೋರು ಅಂತಾರೆ. ಹಾಗಾಗಿ, ಕಳ್ಳ ಏನಿದ್ದರೂ ಪೊಲೀಸರ ಮನೆಗಂತೂ ಕನ್ನ ಹಾಕಲು ಹೋಗಲ್ಲ. ಸಿಕ್ಕಿಬಿದ್ದರೆ ಬೆನ್ನು ಚಪ್ಪಡಿ ಮಾಡಿಕೊಳ್ಳಬೇಕು ಅಂತ ಪೊಲೀಸರ ಉಸಾಬರಿ ಬೇಡವೆಂದು ದೂರ ನಿಲ್ಲುತ್ತಾರೆ. ಆದರೆ, ಇಲ್ಲೊಬ್ಬ ಪೊಲೀಸರಿಗೇ ಮೇಷ್ಟ್ರು ಆಗಿರುವ ಇನ್ ಸ್ಪೆಕ್ಟರ್ ಒಬ್ಬರ ಮನೆಗೆ ಕನ್ನ ಹಾಕಿದ್ದಾನೆ.

ಹೌದು.. ಮಂಗಳೂರಿನಲ್ಲಿ ಈ ಹಿಂದೆ ಉರ್ವಾ ಠಾಣೆಯಲ್ಲಿ ಇನ್ ಸ್ಪೆಕ್ಟರ್ ಆಗಿದ್ದ, ಸದ್ಯಕ್ಕೆ ಸಂಚಾರ ವಿಭಾಗದಲ್ಲಿ ಕರ್ತವ್ಯದಲ್ಲಿರುವ ಮಹಮ್ಮದ್ ಶರೀಫ್ ಅವರ ಮನೆಯ ಹೊರಗೆ ನಿಲ್ಲಿಸಿದ್ದ ಸೈಕಲನ್ನು ಕಳ್ಳ ಎಗರಿಸಿದ್ದಾನೆ. ಉರ್ವಾ ಮೈದಾನದ ಬಳಿಯ ಚೈತನ್ಯ ಅಪಾರ್ಟ್ಮೆಂಟ್ ನಲ್ಲಿ ಒಂದನೇ ಮಹಡಿಯಲ್ಲಿ ಇನ್ ಸ್ಪೆಕ್ಟರ್ ಶರೀಫ್ ಮನೆಯಿದೆ.

ಕೆಳಗೆ ಪಾರ್ಕಿಂಗ್ ಏರಿಯಾದಲ್ಲಿ ನಿಲ್ಲಿಸಿದ್ದ ಶರೀಫ್ ಪುತ್ರನಿಗೆ ಸೇರಿದ 25 ಸಾವಿರ ಮೌಲ್ಯದ ಸೈಕಲನ್ನು ವ್ಯಕ್ತಿಯೊಬ್ಬ ಎಗರಿಸಿದ್ದಾನೆ. ಸೈಕಲನ್ನು ಎತ್ತಿಕೊಂಡು ಹೋಗುತ್ತಿರುವ ದೃಶ್ಯ ಫ್ಲಾಟಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆಗಸ್ಟ್ 26ರಂದು ಮಧ್ಯಾಹ್ನ ಘಟನೆ ನಡೆದಿದ್ದು, ಈ ಬಗ್ಗೆ ಇನ್ ಸ್ಪೆಕ್ಟರ್ ಶರೀಫ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಲ್ಲ. ಕಳವು ಪೊಲೀಸರ ಮನೆಯಿಂದಲೇ ಆಗಿದ್ದರೂ, ಆ ಬಗ್ಗೆ ದೂರು ದಾಖಲು ಮಾಡಬೇಕಾದ್ದು ಪೊಲೀಸ್ ಠಾಣೆಯಲ್ಲೇ ತಾನೆ.

ಆದರೆ, ಇಲ್ಲಿ ಠಾಣೆಯ ಮುಖ್ಯಸ್ಥ ಆಗಿರುವ ಇನ್ ಸ್ಪೆಕ್ಟರ್ ಮನೆಯಿಂದಲೇ ಕಳವಾಗಿದ್ದು, ಚಾಣಾಕ್ಷ ಕಳ್ಳ ಸೈಕಲನ್ನು ಎಗರಿಸಿ ಪೊಲೀಸನಿಗೇ ಚಳ್ಳೆಹಣ್ಣು ತಿನ್ನಿಸಿದ್ದಾನೆ. ಸದ್ಯಕ್ಕೆ ಸೈಕಲ್ ಕದ್ಕೊಂಡು ತೆರಳಿರುವ ಕಳ್ಳನ ಸಿಸಿಟಿವಿ ಫೋಟೋವನ್ನು ಪೊಲೀಸರು ವಾಟ್ಸಪ್ ಗ್ರೂಪಿನಲ್ಲಿ ಹಾಕಿದ್ದಾರೆ. ಸೈಕಲಿಗೆ ಸೀರಿಯಲ್ ನಂಬರ್ ಅಂತೂ ಇಲ್ಲ. ಕಳ್ಳನ ಮುಖ ನೋಡಿಯೇ ಸೈಕಲ್ ಹುಡುಕಬೇಕಷ್ಟೆ. 

Man steals bicycle worth 25 thousand from Traffic Police inspectors Shariff's house in Urwa, Mangalore