ಬ್ರೇಕಿಂಗ್ ನ್ಯೂಸ್
11-10-21 10:40 pm Headline Karnataka News Network ಕ್ರೈಂ
ಕೊಲ್ಲಂ, ಅ.11 : ತಮಗೆ ಆಗದವರನ್ನು ತಲವಾರಿನಿಂದ ಕಡಿದು, ಕತ್ತು ಹಿಸುಕಿ ಅಥವಾ ವಿಷ ಕೊಟ್ಟು ಕೊಲ್ಲುವುದನ್ನು ಕಂಡಿದ್ದೇವೆ. ಒಂದು ಕ್ಷಣದ ಸಿಟ್ಟು, ತೀವ್ರ ಸೇಡು, ಅನುಮಾನ, ಕುಟುಂಬ ದ್ವೇಷ ಹೀಗೆ ಇಂಥ ಅಪರಾಧ ಕೃತ್ಯಗಳಿಗೆಲ್ಲ ಹತ್ತಾರು ಕಾರಣಗಳಿರುತ್ತವೆ. ಆದರೆ, ಕೃತ್ಯಗಳಿಗೂ ಮುನ್ನ ಹೆಚ್ಚಿನ ಮಂದಿ ತಮ್ಮನ್ನು ಬಚಾವ್ ಮಾಡಿಕೊಳ್ಳಲು ಉಪಾಯವನ್ನೂ ಹೂಡುತ್ತಾರೆ. ಕೊಂದ ಬಳಿಕ ಶವವನ್ನು ಹೂತಿಟ್ಟು ಅಥವಾ ಇನ್ನಾವುದೋ ರೀತಿಯಲ್ಲಿ ತಮ್ಮ ಕೃತ್ಯವನ್ನು ಮುಚ್ಚಿ ಹಾಕಲು ಯತ್ನಿಸುತ್ತಾರೆ. ಇಂಥ ನೂರಾರು ಪ್ರಕರಣ ನೋಡಿದ್ದರೂ, ಇಲ್ಲೊಬ್ಬ ಹಂತಕ ನಾವ್ಯಾರೂ ನಂಬಲಾಗದ ರೀತಿ ತನ್ನ ಹೆಂಡ್ತಿಯನ್ನೇ ಕೊಂದಿದ್ದಾನೆ. ಪೊಲೀಸರು, ಕುಟುಂಬಸ್ಥರಿಗೆ ಒಂದಿನಿತೂ ಸಂಶಯ ಬಾರದ ರೀತಿ ಕೊಂದು ಮುಗಿಸಿದ್ದರೂ, ಅದೇ ಪೊಲೀಸರ ಜಾಣ್ಮೆಯಿಂದ ಒಂದೇ ವರ್ಷದಲ್ಲಿ ಪಾತಕಿ ಕಂಬಿ ಎಣಿಸಿದ್ದಾನೆ.
ಕೇರಳದಲ್ಲಿ ಭಾರೀ ಸದ್ದು ಮಾಡಿದ ಕೊಲ್ಲಂ ಜಿಲ್ಲೆಯ ಉತ್ತರಾ ಎಂಬ 25ರ ಹರೆಯದ ಯುವತಿಯ ಕೊಲೆ ಪ್ರಕರಣ ಅದು ಸೃಷ್ಟಿಸಿದ ಕುತೂಹಲಕ್ಕಿಂತಲೂ ಹೆಚ್ಚು ಸುದ್ದಿಯಾಗಿದ್ದು ಆಕೆಯ ಗಂಡನ ವೃತ್ತಾಂತಕ್ಕಾಗಿ. ಯಾಕಂದ್ರೆ, ಸೂರಜ್ ಅನ್ನೋ ಸ್ಫುರದ್ರೂಪಿ ಯುವಕ, ಕೇಜಿಗಟ್ಟಲೆ ಬಂಗಾರವನ್ನೇ ವರದಕ್ಷಿಣೆಯಾಗಿ ಪಡೆದು ಮದುವೆಯಾಗಿದ್ದಾತನೇ ಈ ಪ್ರಕರಣದ ಪಾತಕಿ ವಿಲನ್. ಮಲಯಾಳಂ ಸಿನಿಮಾದಲ್ಲಿ ಇರುವಂತೆ ಪ್ರತಿ ಕ್ಷಣಕ್ಕೂ ಕುತೂಹಲ ಹುಟ್ಟಿಸುತ್ತಾ ಸಾಗಿದ ಪ್ರಕರಣದಲ್ಲಿ ಪೊಲೀಸರು ಕಡೆಗೂ ಏನೆಲ್ಲ ಆಗಬೇಕಾಗಿತ್ತೋ ಅದೆಲ್ಲವನ್ನೂ ಕಲೆಹಾಕಿ, ಸೂರಜ್ ಅನ್ನೋ ಅಪ್ಪಟ ಸುಂದರನೊಬ್ಬ ಯಾರೂ ನಂಬಲಾಗದ ರೀತಿ ತನ್ನ ಹೆಂಡ್ತಿಯನ್ನು ಕೊಂದಿದ್ದನ್ನು ರಿವೀಲ್ ಮಾಡಿದ್ದರು. ಆತ ಕಟ್ಟಿದ್ದ ಸುಳ್ಳಿನ ಗೋಪುರವನ್ನು ಒಂದೇ ತಿಂಗಳಲ್ಲಿ ಕೆಡವಿ ಹಾಕಿದ್ದರು.
ಸೋಮವಾರ ಬೆಳಗ್ಗೆ ಕೊಲ್ಲಂ ಎಡಿಶನಲ್ ಸೆಶನ್ಸ್ ಕೋರ್ಟಿನಲ್ಲಿ ಕಿಕ್ಕಿರಿದು ಜನರು ತುಂಬಿದ್ದರು. ಅತ್ತ ಉತ್ತರಾ ಕುಟುಂಬಸ್ಥರು, ಸೂರಜ್ ಸ್ನೇಹಿತರು, ಆತನ ಮನೆಯವರು, ಮತ್ತೊಂದು ಕಡೆ ಪ್ರಕರಣದ ಬಗ್ಗೆ ಕುತೂಹಲದಿಂದ ಬಂದಿದ್ದವರು, ಪೊಲೀಸರು ಹೀಗೆ ಕೋರ್ಟ್ ಹಾಲ್ ಮತ್ತು ಅದರ ಆವರಣದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು. ಆರೋಪಿ ಸೂರಜ್ ನನ್ನು ಪೊಲೀಸರು ಬಿಗಿ ಭದ್ರತೆಯಲ್ಲಿ ತಂದು ನ್ಯಾಯಾಧೀಶರ ಮುಂದೆ ನಿಲ್ಲಿಸಿದರು. ನಿಂಗೇನಾದ್ರೂ ಕೇಳೋಕೆ ಅಥವಾ ಹೇಳೋಕೆ ಇದ್ಯಾ ಎಂದು ನ್ಯಾಯಾಧೀಶರು ಸೂರಜ್ ಬಳಿ ಕೇಳಿದರು. ಆತ, ನಂಗೇನೂ ಹೇಳೋಕಿಲ್ಲ ಅಂತಾ ತಲೆಯನ್ನು ಅಲ್ಲಾಡಿಸಿದ. ಪ್ರಾಸಿಕ್ಯೂಟರ್ ಜಿ.ಮೋಹನರಾಜ್, ಅತ್ಯಂತ ಅಪರೂಪದ ಮತ್ತು ಅತ್ಯಂತ ಹೇಯ ಕೃತ್ಯ ಎಸಗಿದ ಪ್ರಕರಣ. ಆರೋಪಿಗೆ ಗಲ್ಲು ಶಿಕ್ಷೆಯನ್ನೇ ಜಾರಿಗೊಳಿಸಬೇಕೆಂದು ಜಡ್ಜ್ ಬಳಿ ಕೇಳಿಕೊಂಡರು. ಕೆಲವು ನಿಮಿಷಗಳ ಕೋರಿಕೆ ಆಲಿಸಿದ ನ್ಯಾಯಾಧೀಶರು, ಆರೋಪಿ ಸೂರಜ್ ನನ್ನು ಪ್ರಕರಣದಲ್ಲಿ ದೋಷಿ ಎಂದು ತೀರ್ಪಿತ್ತರಲ್ಲದೆ, ಶಿಕ್ಷೆಯ ಪ್ರಮಾಣವನ್ನು ಅ.13ರಂದು ನೀಡುವುದಾಗಿ ಘೋಷಿಸಿದರು.
ಸರ್ಪ ಕೋಪಂ ಎಂದು ಬೆಚ್ಚಿದ್ದ ಜನರು !
25 ವರ್ಷದ ಉತ್ತರಾ ಎಂಬ ಯುವತಿ ಕೊಲ್ಲಂ ಜಿಲ್ಲೆಯ ಅಂಚಲಾ ಎಂಬಲ್ಲಿ ಗಂಡನ ಮನೆಯಲ್ಲಿ ಮಲಗಿದ್ದಲ್ಲೇ 2020ರ ಮೇ 7ರಂದು ನಾಗರ ಹಾವು ಕಚ್ಚಿ ಸತ್ತಿದ್ದಾಗಿ ಸುದ್ದಿಯಾಗಿತ್ತು. ಅಷ್ಟೇ ಅಲ್ಲಾ, ಈ ಹಿಂದೆಯೂ ಆಕೆಗೆ ಹಾವು ಕಚ್ಚಿದ್ದರಿಂದ ಸರ್ಪ ಕೋಪದ ಬಗ್ಗೆ ಜನರು ಮಾತನಾಡಿಕೊಂಡಿದ್ದರು. ಈಕೆ ಏನೋ ಮಾಡಿರಬೇಕು, ಅಲ್ಲಾ ಕುಟುಂಬಸ್ಥರ ಮೇಲಿನ ಸಿಟ್ಟನ್ನು ಹಾವು ತೀರಿಸಿಕೊಂಡಿದೆ ಎಂದು ಹೇಳಿಕೊಂಡಿದ್ದರು. ಯಾಕಂದ್ರೆ, ಹಾವು ಆಕೆ ಮಲಗುತ್ತಿದ್ದ ಕೊಠಡಿಯ ಬೆಡ್ಡಿಗೇ ಬಂದು ಕಚ್ಚಿತ್ತು. ಮಲಗಿದಲ್ಲೇ ಉತ್ತರಾ, ಉತ್ತರ ಸಿಗದ ಪ್ರಶ್ನೆಗಳನ್ನು ಉಳಿಸಿಟ್ಟು ಶವ ಆಗಿದ್ದಳು. ಜೊತೆಗಿದ್ದ ಒಂದೂವರೆ ವರ್ಷದ ಮಗು ಮಾತ್ರ ಹಾವಿನಿಂದ ಬಚಾವ್ ಆಗಿದ್ದುದು ಜನರ ಕುತೂಹಲಕ್ಕೂ ಕಾರಣವಾಗಿತ್ತು.
ಆದರೆ, ಪುತ್ರಿಯ ಸಾವು ಆಕೆಯ ಮನೆಯವರಿಗೆ ಏನೋ ಸಂಶಯಕ್ಕೀಡು ಮಾಡಿತ್ತು. ಯಾಕಂದ್ರೆ, ಆಕೆಗೆ ಎರಡು ತಿಂಗಳ ಹಿಂದಷ್ಟೇ ಅದೇ ರೀತಿಯಲ್ಲಿ ಕನ್ನಡಿ ಹಾವು ಕಚ್ಚಿತ್ತು. ಮೈಯ ಸುತ್ತ ವರ್ತುಲಗಳನ್ನು ಹೊಂದಿರುವ ಅತ್ಯಂತ ವಿಷಕಾರಿ ಎನಿಸಿರುವ ಕನ್ನಡಿ ಹಾವು ಕಚ್ಚಿದ್ದೂ ಅದೇ ರೀತಿಯಾಗಿತ್ತು. ಈ ಬಗ್ಗೆ ಏನೋ ಸಂಶಯ ಬಂದು ಉತ್ತರಾ ಹೆತ್ತವರು ಪೊಲೀಸರಿಗೆ ದೂರು ನೀಡಿದ್ದರು. ಅಲ್ಲದೆ, ವರದಕ್ಷಿಣೆಯ ಕಿರುಕುಳದ ಬಗ್ಗೆಯೂ ಹೇಳಿಕೊಂಡಿದ್ದರು. ಪೊಲೀಸರು ತನಿಖೆ ನಡೆಸಿದಾಗ, ಹಾವು ಕಚ್ಚಿದ ಮೇಲೆ ಅದರಲ್ಲೇನಿದೆ, ಸಹಜವೇ ಆಗಿರಬಹುದು ಅಂದ್ಕೊಂಡಿದ್ದರು. ಆದರೆ, ಹುಡುಗಿ ಹೆತ್ತವರು ಮತ್ತು ಸ್ಥಳೀಯರು ನೀಡಿದ್ದ ಕೆಲವು ಮಾಹಿತಿಗಳು ಸೂರಜ್ ಬಗ್ಗೆ ಸಂಶಯದ ಸುಳಿಯನ್ನು ಪೊಲೀಸರ ತಲೆಹೊಕ್ಕಿಸಿತ್ತು.
ಪೊಲೀಸರು ಸೂರಜ್ ಮೊಬೈಲ್ ಕರೆ ಆಧರಿಸಿ, ತನಿಖೆ ಶುರು ಹಚ್ಚಿದ್ದರು. ಈ ವೇಳೆ, ಸೂರಜ್ ಹಾವುಗಳನ್ನು ಹಿಡಿಯುವ ಸುರೇಶ್ ಕಲುವಾತುಕ್ಕಲ್ ಎಂಬಾತನ ಜೊತೆಗೆ ಹೆಚ್ಚು ಸಂಪರ್ಕದಲ್ಲಿದ್ದುದು ಪತ್ತೆಯಾಗಿತ್ತು. ಸುರೇಶ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತ ಮಾರ್ಚ್ ಮತ್ತು ಮೇ ತಿಂಗಳಲ್ಲಿ ಎರಡು ಬಾರಿ ಹಾವನ್ನು ಹಣಕ್ಕಾಗಿ ಬಾಡಿಗೆ ಕೊಟ್ಟಿದ್ದನ್ನು ತಿಳಿಸಿದ್ದಾನೆ. ಹಾವುಗಳಲ್ಲೇ ಅತ್ಯಂತ ವಿಷಕಾರಿಯಾಗಿರುವ ನಾಗರನನ್ನು ಮೇ ಮೊದಲ ವಾರದಲ್ಲಿ ಹತ್ತು ಸಾವಿರ ರೂ.ಗೆ ಸೂರಜ್ ಗೆ ನೀಡಿದ್ದ. ಆದರೆ, ಆತ ಯಾವ ಉದ್ದೇಶಕ್ಕಾಗಿ ಪಡೆದಿದ್ದಾನೆ ಎನ್ನೋದು ಗೊತ್ತಿಲ್ಲ ಎಂದಿದ್ದ. ಈತನ ಹೇಳಿಕೆಯನ್ನೇ ಆಧರಿಸಿ, ಪೊಲೀಸರು ಸೂರಜ್ ನನ್ನು ಬಂಧಿಸಿ ಬಾಯಿ ಬಿಡಿಸಿದಾಗ ಕೊಲೆ ವಿಚಾರ ಹೊರಬಂದಿತ್ತು.
ಹಾವನ್ನು ಬಾಡಿಗೆ ಪಡೆದು ಕೊಲ್ಲಲು ಪ್ಲಾನ್
ಹಾವುಗಳನ್ನು ಮಾರುವುದು, ಹಣದ ಉದ್ದೇಶಕ್ಕೆ ಬಾಡಿಗೆ ಕೊಡುವುದು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಅಪರಾಧವಾಗಿದ್ದು, ಸುರೇಶ್ ನನ್ನೂ ಪೊಲೀಸರು ಬಂಧಿಸಿದ್ದಾರೆ. ಮೊದಲ ಬಾರಿಗೆ ಮಾರ್ಚ್ ತಿಂಗಳಲ್ಲಿ ಕನ್ನಡಿ ಹಾವನ್ನು ಒಯ್ದಿದ್ದ ಸೂರಜ್, ಅದನ್ನು ಪತ್ನಿ ಮಲಗಿದ್ದ ಬೆಡ್ಡಿನಲ್ಲಿ ಬಿಟ್ಟು ಕಚ್ಚುವಂತೆ ಮಾಡಿದ್ದ. ಕನ್ನಡಿ ಹಾವು ಕಚ್ಚಿದರೆ ಆ ಜಾಗ ಕೊಳೆಯುತ್ತಾ ಹೋಗುತ್ತದೆ. ತೀವ್ರ ವಿಷಕಾರಿಯಾಗಿದ್ದರಿಂದ ಕಚ್ಚಿದ ಭಾಗ ಬಲಹೀನವಾಗುತ್ತದೆ. ಹಾವು ಕಚ್ಚಿ ತೀವ್ರ ಅಸ್ವಸ್ಥಳಾಗಿದ್ದ ಉತ್ತರಾಳನ್ನು ಆನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಅಲ್ಲದೆ, ಕಚ್ಚಿದ ಜಾಗಕ್ಕೆ ಪ್ಲಾಸ್ಟಿಕ್ ಸರ್ಜರಿಯನ್ನೂ ಮಾಡಲಾಗಿತ್ತು. ಆದರೂ ಒಂದೂವರೆ ವರ್ಷದ ಮಗುವಿನ ಜೊತೆ ಗಂಡನ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ, ಉತ್ತರಾ ಸಾಯದೆ ಬದುಕಿದ್ದನ್ನು ಕಂಡು ಒಳಗಿಂದೊಳಗೆ ಕುದಿಯುತ್ತಿದ್ದ ಸೂರಜ್, ಮತ್ತೊಂದು ಹಾವನ್ನು ಪಡೆಯಲು ಮುಂದಾಗಿದ್ದ. ಈ ಸಲ, ಒಂದೇ ಸಲಕ್ಕೆ ಸಾವನ್ನಪ್ಪಬೇಕೆಂದು ನಾಗರ ಹಾವನ್ನೇ ಹತ್ತು ಸಾವಿರ ರೂ. ಕೊಟ್ಟು ಬಾಡಿಗೆಗೆ ಪಡೆದಿದ್ದ. ನಾಗರ ಹಾವು ಕಚ್ಚಿದರೆ, ಒಮ್ಮೆಗೆ ವಿಷ ಕಕ್ಕುತ್ತದೆ. ಆನಂತರ, ಅದನ್ನು ಹಿಡಿದರೂ ವಿಷ ಇರುವುದಿಲ್ಲ. ಇದೇ ವಿದ್ಯೆಯನ್ನು ಆಧರಿಸಿ, ಒಮ್ಮೆಗೆ ಕಚ್ಚಿಸಿ ಆನಂತರ ಅದನ್ನು ಹಿಡಿದು ಜೋಪಾನವಾಗಿ ಹಾವಾಡಿಗನ ಬಳಿಯೇ ತಂದು ಬಿಟ್ಟಿದ್ದ.
ಅದೇ ತಿಂಗಳ ಮೇ ಕೊನೆಯಲ್ಲಿ ಆರೋಪಿ ಸೂರಜ್ ನನ್ನು ಪೊಲೀಸರು ಬಂಧಿಸಿದರೆ, ಆನಂತರ ಒಂದು ವಾರದ ಬಳಿಕ ಆತನ ತಂದೆ, ತಾಯಿ ಮತ್ತು ಸೋದರಿಯನ್ನೂ ಬಂಧಿಸಿದ್ದಾರೆ. ಸೊಸೆಯನ್ನು ಕೊಲ್ಲುವುದಕ್ಕೆ ಅವರು ಕೂಡ ಸಾಥ್ ನೀಡಿದ್ದು ವಿಚಾರಣೆಯಲ್ಲಿ ತಿಳಿದುಬಂದಿತ್ತು. ವರದಕ್ಷಿಣೆಗಾಗಿ ಕಿರುಕುಳ ಮತ್ತು ಸಾಕ್ಷ್ಯ ನಾಶ ಮಾಡಿದ ಆರೋಪದಲ್ಲಿ ಅವರನ್ನು ಪೊಲೀಸರು ಬಂಧಿಸಿದ್ದರು. 2018ರಲ್ಲಿ ಉತ್ತರಾಳನ್ನು ಮದುವೆ ಮಾಡಿಕೊಟ್ಟ ಸಂದರ್ಭದಲ್ಲಿ ಕೇಜಿಗಟ್ಟಲೆ ಬಂಗಾರ ನೀಡಿದ್ದರು. ಆನಂತರ, ಅದನ್ನು ಮುಚ್ಚಿಡುವ ಸಲುವಾಗಿ ತಮ್ಮ ಮನೆಯ ಹಿಂಭಾಗದಲ್ಲಿ ಮಣ್ಣಿನಡಿ ಹೂತಿಟ್ಟಿದ್ದನ್ನು ಪೊಲೀಸರು ಕುಟುಂಬಸ್ಥರಿಂದಲೇ ತೆಗೆಸಿದ್ದರು. ಜುಲೈ 23ರಂದು ಪೊಲೀಸರು ಸೂರಜ್ ನನ್ನು ಸ್ಥಳಕ್ಕೆ ಕೊಂಡೊಯ್ದು ಪರಿಶೀಲನೆ ನಡೆಸಿದಾಗ, ಆತ ಪೊಲೀಸರಿಗೆ ಹೇಳುತ್ತಿದ್ದ ಮಾಹಿತಿಯನ್ನು ಕೇಳಿ ಸ್ಥಳೀಯರು ಹೌಹಾರಿದ್ದರು.
ಆದರೆ, ಆರೋಪಿ ಕೃತ್ಯ ನಡೆಸಿದ್ದಾನೆ ಅನ್ನುವುದಕ್ಕೆ ಯಾವುದೇ ಪ್ರತ್ಯಕ್ಷ ಸಾಕ್ಷ್ಯ ಇರಲಿಲ್ಲ. ಇದಕ್ಕಾಗಿ ಹಾವಿನ ಡಿಎನ್ಎಯನ್ನೂ ವನ್ಯಜೀವಿ ತಜ್ಞರ ಮೂಲಕ ಮಾಡಿಸಿದ್ದರು. ಅಲ್ಲದೆ, ಕಳೆದ ಸೆಪ್ಟಂಬರ್ ತಿಂಗಳಲ್ಲಿ ಆರೋಪಿ ಸೂರಜ್ ನೀಡಿದ ಮಾಹಿತಿ ಅನುಸರಿಸಿ, ಅದೇ ಜಾಗದಲ್ಲಿ ಡಮ್ಮಿಯಾಗಿ ನಾಗರ ಹಾವು ಹೇಗೆ ಕೊಠಡಿಯೊಳಗೆ ಬಂದು ಕಚ್ಚಿತ್ತು ಅನ್ನೋದನ್ನು ರೀ ಕ್ರಿಯೇಟ್ ಮಾಡಿದ್ದರು. ಪ್ರಕರಣದ ತನಿಖೆ ನಡೆಸಿದ್ದ ಕ್ರೈಂ ಬ್ರಾಂಚ್ ಡಿವೈಎಸ್ಪಿ ಎ.ಅಶೋಕನ್, ಸಾಂದರ್ಭಿಕ ಸಾಕ್ಷ್ಯಗಳು ಮತ್ತು ಹಾವಾಡಿಗ ಸುರೇಶ್ ನೀಡಿದ್ದ ಹೇಳಿಕೆ ಆಧರಿಸಿ ಒಂದು ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದರು.
ನಿದ್ದೆ ಮಾತ್ರೆಗಳನ್ನು ಕೊಟ್ಟು ಹಾವು ಬಿಡುತ್ತಿದ್ದ
ಅತ್ಯಂತ ಅಪರೂಪದ ಪ್ರಕರಣ ಆಗಿತ್ತು. ಸಾಮಾನ್ಯವಾಗಿ ಯಾರನ್ನಾದರೂ ಕೊಲ್ಲುವುದಕ್ಕೆ ಆಯುಧಗಳನ್ನು ಬಳಸುತ್ತಾರೆ. ಅಥವಾ ವಿಷ ಇನ್ನಿತರ ವಸ್ತುಗಳನ್ನು ಬಳಸುತ್ತಾರೆ. ಇಲ್ಲಿ ಆರೋಪಿ ಯೂಟ್ಯೂಬಲ್ಲಿ ಸರ್ಚ್ ಮಾಡಿ, ಹಾವುಗಳ ಬಗ್ಗೆ ಅಧ್ಯಯನ ಮಾಡಿದ್ದ. ಹಾವನ್ನು ಕಚ್ಚಿಸಿ ಕೊಂದರೆ, ಯಾವುದೇ ಸಂಶಯ ಬರುವುದಿಲ್ಲ ಎಂದು ಸಂಚು ನಡೆಸಿದ್ದ. ಹಾವನ್ನು ಬಿಡುವುದಕ್ಕೂ ಮುನ್ನ ಆಕೆಗೆ ನಿದ್ದೆ ಮಾತ್ರೆಗಳನ್ನು ಕೊಡುತ್ತಿದ್ದ. ಕನ್ನಡಿ ಹಾವು ಕಚ್ಚಿದ ಬಳಿಕ ಆಕೆಗೆ ನಡೆದಾಡಲು ಸಾಧ್ಯವಾಗಿರಲಿಲ್ಲ. 52 ದಿನಗಳ ಕಾಲ ಬೆಡ್ಡಿನಲ್ಲೇ ಇದ್ದಳು. ಇದೇ ಸಂದರ್ಭದಲ್ಲಿ ಮತ್ತೊಂದು ಹಾವನ್ನು ತಂದು ಅತ್ಯಂತ ಹೇಯ ರೀತಿಯಲ್ಲಿ ಕೊಲ್ಲಿಸಿದ್ದಾನೆ ಎಂದು ಕೊಲ್ಲಂ ಎಸ್ಪಿ ಹರಿಹರನ್ ಅಂದು ಹೇಳಿದ್ದರು.
ಉತ್ತರಾ ಜೊತೆಗೆ ಮದುವೆಯ ಬಳಿಕ ನಿರಂತರ ಹಣಕ್ಕಾಗಿ ಆಕೆಯ ಮನೆಯವರನ್ನು ಪೀಡಿಸುತ್ತಿದ್ದ. ಪ್ರತೀ ಬಾರಿಯೂ ಆಕೆ ಹೆತ್ತವರು ಹಣ ಕೊಡುತ್ತಿದ್ದರು. ಯಾವಾಗ ಹಣ ಕೊಡುವುದನ್ನು ನಿಲ್ಲಿಸಿದರೋ, ಈಕೆಯನ್ನು ಕೊಲ್ಲಲು ಪತಿಯೇ ಪ್ಲಾನ್ ಹಾಕಿದ್ದ. ಹಾವನ್ನು ಕಚ್ಚಿ ಕೊಂದರೆ, ಸಹಜ ಸಾವು ಎನ್ನುವಂತೆ ಬಿಂಬಿಸಲು ಪ್ಲಾನ್ ಮಾಡಿದ್ದ. ಇದಕ್ಕಾಗಿ ಕೆಲವು ತಿಂಗಳ ಹಿಂದಿನಿಂದಲೇ ಇಂಟರ್ನೆಟ್ಟಿನಲ್ಲಿ ಹುಡುಕಾಡಿದ್ದ ಎಂದು ತನಿಖೆ ನಡೆಸಿದ ಡಿವೈಎಸ್ಪಿ ಅಶೋಕ್ ಹೇಳಿದ್ದರು. ಆತನ ವಿರುದ್ಧ ಐಪಿಸಿ ಸೆಕ್ಷನ್ 302(ಕೊಲೆ), 307 (ಕೊಲೆ ಪ್ರಯತ್ನ), 328 ( ವಿಷ ಉಣಿಸಿದ್ದು) ಮತ್ತು 201 (ಸಾಕ್ಷ್ಯ ನಾಶ) ಅಡಿ ಪ್ರಕರಣ ದಾಖಲಿಸಿ, ಕೋರ್ಟಿನಲ್ಲಿ ಅಪರಾಧ ಸಾಬೀತು ಮಾಡಿದ್ದೇ ರೋಚಕ.
ಹಳೆ ಕೇಸ್ ಸ್ಟಡಿ ಮಾಡಿದ್ದ ಕೊಲ್ಲಂ ಪೊಲೀಸರು
ಪ್ರತ್ಯಕ್ಷ ಸಾಕ್ಷಿ ಇಲ್ಲದ ಇಂತಹ ಪ್ರಕರಣಗಳಲ್ಲಿ ಅಪರಾಧ ಸಾಬೀತು ಪಡಿಸುವುದು ಪೊಲೀಸರಿಗೆ ಕಷ್ಟವಾಗಿರುತ್ತದೆ. ಹೀಗಾಗಿ ಈ ಮಾದರಿಯಲ್ಲಿ ನಡೆದಿರುವ ಪ್ರಕರಣಗಳನ್ನು ಕೊಲ್ಲಂ ಪೊಲೀಸರು ಅಧ್ಯಯನ ನಡೆಸಿದ್ದರು. ಮಧ್ಯಪ್ರದೇಶದ ಇಂದೋರ್ ಮತ್ತು ಮಹಾರಾಷ್ಟ್ರದ ನಾಗಪುರದಲ್ಲಿ ಇದೇ ರೀತಿ ಹಾವನ್ನು ಕಚ್ಚಿಸಿ ಕೊಂದಿದ್ದ ಪ್ರಕರಣ ನಡೆದಿತ್ತು. 2011ರಲ್ಲಿ ನಾಗಪುರದಲ್ಲಿ ಯುವಕನೊಬ್ಬ ತನ್ನ ತಂದೆ ಮತ್ತು ಮಲತಾಯಿಯನ್ನು ಹಾವನ್ನು ಕಚ್ಚಿಸಿ ಕೊಂದ ಪ್ರಕರಣ ಮತ್ತು 2019ರಲ್ಲಿ ಪತಿಯೇ ಪತ್ನಿಯನ್ನು ನಿದ್ದೆ ಮಾತ್ರೆ ಕೊಟ್ಟು ಹಾವನ್ನು ಕಚ್ಚಿಸಿದ ಪ್ರಕರಣ. ಎರಡು ಪ್ರಕರಣದಲ್ಲಿಯೂ ಪೊಲೀಸರ ತಪ್ಪಿನಿಂದಾಗಿ ಕೋರ್ಟಿನಲ್ಲಿ ಕೇಸ್ ಪ್ರೂವ್ ಆಗಿರಲಿಲ್ಲ. ಇವೆರಡು ಪ್ರಕರಣಗಳಲ್ಲಿ ಆಗಿರುವ ಪ್ರಮಾದಗಳ ಬಗ್ಗೆ ಸ್ಟಡಿ ಮಾಡಿ, ಉತ್ತರಾ ಕೊಲೆ ಪ್ರಕರಣದಲ್ಲಿ ಹೇಗೆ ಕೃತ್ಯ ನಡೆದಿತ್ತು ಅನ್ನೋದನ್ನು ಡಮ್ಮಿ ಪೀಸ್ ಇಟ್ಟು ಹಾವಿನಿಂದ ಕಚ್ಚಿಸಿ, ವಿಡಿಯೋ ಚಿತ್ರೀಕರಣ ಮಾಡಿದ್ದರು. ಅದನ್ನೂ ಕೋರ್ಟಿನಲ್ಲಿ ಸಾಕ್ಷ್ಯವಾಗಿ ತೋರಿಸಿದ್ದು ಪೊಲೀಸರ ಹೆಚ್ಚುಗಾರಿಕೆ.
A Kerala court on Monday pronounced its verdict in the Uthra murder case and held one Sooraj guilty of the murder of his wife. Twenty-five-year-old Uthra had died of a snake bite in May 2020, following which her family had filed a police complaint alleging foul play and dowry harassment. The verdict in the matter was pronounced by the additional sessions court, Kollam.
27-12-24 04:07 pm
HK News Desk
Manmohan Singh, Mangalore beach festival: ಮನಮ...
27-12-24 11:24 am
ಹೊಸ ವರ್ಷಕ್ಕೆ ಮತ್ತೆ ಜನರಿಗೆ ಗ್ಯಾರಂಟಿ ಶಾಕ್ ? ಲೀಟ...
26-12-24 11:39 pm
Bidar Contractor Suicide, Priyank Kharge: ಪ್ರ...
26-12-24 08:03 pm
ಹೆಚ್ಚು ಮೊಬೈಲ್ ನೋಡ್ಬೇಡ ಎಂದು ಬುದ್ಧಿ ಹೇಳಿದ್ದ ತಾಯ...
26-12-24 05:11 pm
27-12-24 10:38 am
Yatish Kumar, Headline Karnataka
Manmohan Singh Death; ಆರ್ಥಿಕ ಕ್ರಾಂತಿಯ ಹರಿಕಾರ...
27-12-24 10:15 am
Dr Manmohan Singh, passes away: ಮಾಜಿ ಪ್ರಧಾನಿ,...
26-12-24 11:15 pm
Ajay Bhalla, Arif Khan: ಗಲಭೆ ಪೀಡಿತ ಮಣಿಪುರಕ್ಕೆ...
25-12-24 04:21 pm
Mohan Bhagwat: ಮೋಹನ್ ಭಾಗವತ್ ಸಂಘವನ್ನು ನಡೆಸುತ್ತ...
24-12-24 09:17 pm
27-12-24 11:02 pm
Mangalore Correspondent
Mangalore, MCC Bank, Anil Lobo arrest, Police...
27-12-24 09:26 pm
Harish Poonja, Mangalore, kabaddi association...
27-12-24 08:41 pm
Mangalore DJ Sajanka party canceled, Beach fe...
27-12-24 06:55 pm
Mangalore Gas cylinder blast, Manjanady: ಮಂಜ...
26-12-24 11:18 pm
26-12-24 07:41 pm
Bangalore Correspondent
Fake Gold Loan, Mangalore Samaja seva sahakar...
25-12-24 02:41 pm
ಸೈಬರ್ ವಂಚಕರ ನಕಲಿ ಷೇರು ಮಾರುಕಟ್ಟೆ ಜಾಲ ; ಕೇರಳದಲ್...
24-12-24 11:05 pm
Bangalore cyber fraud, Crime: ಬೆಂಗಳೂರಿನ ಸಾಫ್ಟ...
22-12-24 07:23 pm
Mangalore Police, Cyber Fraud: ಕಮಿಷನ್ ಆಸೆಗೆ ಬ...
22-12-24 04:44 pm