Mangalore Yettinahole project, netravathi river project: 23 ಸಾವಿರ ಕೋಟಿ ಸುರಿದರೂ ‘ಎತ್ತಿನಹೊಳೆ’ಯಿಂದ ನೀರು ಎತ್ತಲಾಗಿಲ್ಲ ; ಶರಾವತಿ, ನೇತ್ರಾವತಿಯಿಂದ ನೀರೆತ್ತಲು ಕಾರ್ಯಸಾಧ್ಯತೆ ವರದಿ ಕೇಳಿದ ರಾಜ್ಯ ಸರಕಾರ ! ಪಶ್ಚಿಮಘಟ್ಟಕ್ಕೆ ಮತ್ತೆ ಪ್ರಹಾರಕ್ಕೆ ಆಳುವ ವರ್ಗ ರೆಡಿ

13-08-24 10:16 pm       Bangalore Correspondent   ಕರ್ನಾಟಕ

ರಾಜ್ಯ ಸರಕಾರ ಮತ್ತೆ ಪಶ್ಚಿಮಾಭಿಮುಖ ಹರಿಯುವ ನದಿಗಳ ಮೇಲೆ ಕೆಂಗಣ್ಣು ಬೀರಿದೆ. ಪಶ್ಚಿಮಕ್ಕೆ ಹರಿದು ಸಮುದ್ರ ಸೇರುವ ಶರಾವತಿ ಮತ್ತು ನೇತ್ರಾವತಿ ನದಿಯ ನೀರನ್ನು ಬೆಂಗಳೂರಿಗೆ ಒಯ್ಯಲು ಕಾರ್ಯಸಾಧ್ಯತೆ ವರದಿ ಪಡೆಯಲು ಮುಂದಾಗಿದೆ.

ಬೆಂಗಳೂರು, ಆಗಸ್ಟ್.13: ರಾಜ್ಯ ಸರಕಾರ ಮತ್ತೆ ಪಶ್ಚಿಮಾಭಿಮುಖ ಹರಿಯುವ ನದಿಗಳ ಮೇಲೆ ಕೆಂಗಣ್ಣು ಬೀರಿದೆ. ಪಶ್ಚಿಮಕ್ಕೆ ಹರಿದು ಸಮುದ್ರ ಸೇರುವ ಶರಾವತಿ ಮತ್ತು ನೇತ್ರಾವತಿ ನದಿಯ ನೀರನ್ನು ಬೆಂಗಳೂರಿಗೆ ಒಯ್ಯಲು ಕಾರ್ಯಸಾಧ್ಯತೆ ವರದಿ ಪಡೆಯಲು ಮುಂದಾಗಿದೆ. ಈಗಾಗಲೇ ನೇತ್ರಾವತಿ ನದಿಗೆ ಅಡ್ಡಲಾಗಿ ಎತ್ತಿನಹೊಳೆ ಯೋಜನೆ ಮಾಡಿ, 23 ಸಾವಿರ ಕೋಟಿ ಸುರಿದರೂ ನೀರೆತ್ತಲಾಗದೆ ಕೈಸುಟ್ಟುಕೊಂಡಿರುವ ರಾಜ್ಯ ಸರಕಾರ ಮತ್ತೊಂದು ಯೋಜನೆ ತಯಾರಿಸಿ ಪಶ್ಚಿಮ ಘಟ್ಟಕ್ಕೆ ಹಾನಿ ಮಾಡಲು ಅಧಿಕಾರಿಗಳನ್ನು ಛೂಬಿಟ್ಟಿದೆ.

ವಿಶ್ವೇಶ್ವರಯ್ಯ ಜಲ ನಿಗಮವು ತನ್ನ ವ್ಯಾಪ್ತಿಗೆ ಬರುವ ಶರಾವತಿ, ನೇತ್ರಾವತಿ ನದಿಗಳಿಂದ ಬೆಂಗಳೂರಿಗೆ ನೀರು ತರುವ ಸಾಧ್ಯತಾ ವರದಿ ಪಡೆಯಲು ಟೆಂಡರ್‌ ಆಹ್ವಾನಿಸಿದೆ. ಶರಾವತಿ ನದಿಯಿಂದ ನೀರು ತರುವ ಬಗ್ಗೆ ಬೆಂಗಳೂರಿನ ಈಐ ಟೆಕ್ನಾಲಾಜೀಸ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆ ಟೆಂಡರ್‌ ಪಡೆದಿದ್ದು, ಮೂರ್‍ನಾಲ್ಕು ತಿಂಗಳಲ್ಲಿ ವರದಿ ನೀಡುವ ಸಾಧ್ಯತೆ ಇದೆ. ನೇತ್ರಾವತಿ ನದಿಯಿಂದಲೂ ನೀರೆತ್ತುವ ಬಗ್ಗೆ ವರದಿ ತಯಾರಿಸಲು ಟೆಂಡರ್‌ ಕರೆದಿದ್ದು, ಬೆಂಗಳೂರಿನಿಂದ 350 ಕಿ.ಮೀ. ದೂರದ ನೇತ್ರಾವತಿಯಿಂದ ಬೆಂಗಳೂರಿಗೆ ನೀರು ಒಯ್ಯಲು ಯೋಜನೆ ತಯಾರಿಸಲು ಮುಂದಾಗಿದೆ.

2018ರಲ್ಲಿಯೂ ಶರಾವತಿ ನದಿಯಿಂದ ನೀರನ್ನು ಬೆಂಗಳೂರಿಗೆ ಒಯ್ಯುವ ಪ್ರಸ್ತಾಪ ಬಂದಿತ್ತು. ಆದರೆ, ಮಲೆನಾಡಿನ ಜನರ ತೀವ್ರ ವಿರೋಧದಿಂದ ಕೈಬಿಡಲಾಗಿತ್ತು. ಬೆಂಗಳೂರು ಜಲಮಂಡಳಿ ಈಗ 15 ಟಿಎಂಸಿ ನೀರನ್ನು ಶರಾವತಿ ನದಿಯಿಂದ ಒಯ್ಯುವುದಕ್ಕೆ ಸಿದ್ಧವಾಗಿದೆ. ಮೊದಲಿಗೆ, ಸೊರಬ ತಾಲೂಕಿಗೆ ನೀರು ಒಯ್ಯಲು ಯೋಜನೆ ಹಾಕಿದೆ ಎನ್ನುವ ಮಾಹಿತಿ ಇದೆ. ಇದೇ ವೇಳೆ, ಕೇಂದ್ರ ಸರ್ಕಾರ 8500 ಕೋಟಿ ರೂ. ವೆಚ್ಚದಲ್ಲಿ ಶರಾವತಿ ಅಂತರ್ಗತ ಭೂಗರ್ಭ ಜಲವಿದ್ಯುತ್‌ ಯೋಜನೆಗೆ ಅನುಮತಿ ನೀಡಿದೆ. ಆಮೂಲಕ ಶರಾವತಿ ನೀರನ್ನು ಮತ್ತೊಮ್ಮೆ ಹಿಡಿದಿಟ್ಟು ವಿದ್ಯುತ್‌ ತಯಾರಿಸಲು ಹೊರಟಿದೆ. ಈ ನಡುವೆ ಬೆಂಗಳೂರಿಗೆ ನೀರು ಕೊಂಡೊಯ್ಯುವ ಸಾಧ್ಯತೆ ಪರಿಶೀಲನೆಗೂ ಮುಂದಾಗಿದೆ. ಶರಾವತಿಗೆ ಕಟ್ಟಿರುವ ಲಿಂಗನಮಕ್ಕಿ ಅಣೆಕಟ್ಟು ಈಗಲೇ ಭರ್ತಿಯಾಗುವುದಿಲ್ಲ. ಐದು ವರ್ಷಕ್ಕೊಮ್ಮೆ ಜೋರು ಮಳೆ ಬಂದರೆ ಮಾತ್ರ ಈ ಡ್ಯಾಮ್ ತುಂಬುತ್ತದೆ. ಅಂಥದ್ದರಲ್ಲಿ ಮತ್ತೊಂದು ಅಣೆಕಟ್ಟು ಕಟ್ಟಿ ನೀರನ್ನು ಸಂಗ್ರಹಿಸಿ ವಿದ್ಯುತ್ ತಯಾರಿಸುವುದು ಮತ್ತು ಅದೇ ನೀರನ್ನು ಬೆಂಗಳೂರಿಗೆ ಒಯ್ಯಲು ಪ್ಲಾನ್ ಹಾಕಿದೆ.

ಇನ್ನೊಂದೆಡೆ, ಈಗಾಗಲೇ ನೇತ್ರಾವತಿ ನದಿಯಿಂದ ಸಕಲೇಶಪುರದ ಎತ್ತಿನಹೊಳೆ, ಕೆಂಪುಹೊಳೆ ಸೇರಿದಂತೆ ಎಂಟು ಕಡೆ ಅಣೆಕಟ್ಟು ಕಟ್ಟಿ ನೀರನ್ನು ಎತ್ತುವ ಯೋಜನೆ ಕಾಮಗಾರಿ ಕಳೆದ ಹತ್ತು ವರ್ಷಗಳಿಂದ ಕುಂಟುತ್ತ ಸಾಗುತ್ತಿದೆ. ಇದಕ್ಕಾಗಿ ರಾಜ್ಯ ಸರಕಾರ ಈವರೆಗೆ 23 ಸಾವಿರ ಕೋಟಿ ಸುರಿಯಲಾಗಿದೆ ಎನ್ನುವ ಮಾಹಿತಿಯನ್ನು ಈ ಹಿಂದೆ ಬೊಮ್ಮಾಯಿ ಸರಕಾರ ಇದ್ದಾಗ ಅಧಿವೇಶನದಲ್ಲಿಯೇ ತಿಳಿಸಲಾಗಿತ್ತು. ಪ್ರತಿ ಬಾರಿ ಯಾವುದೇ ಸರಕಾರ ಬಂದರೂ, ಈ ಯೋಜನೆಗೆ ಸಾವಿರಾರು ಕೋಟಿ ತೆಗೆದಿಟ್ಟು ಆ ದುಡ್ಡನ್ನು ಪರೋಕ್ಷವಾಗಿ ರಾಜಕಾರಣಿಗಳ ಹೊಟ್ಟೆ ತುಂಬಿಸಲು ಬಳಸಿಕೊಳ್ಳುತ್ತಿರುವುದು ಗುಟ್ಟಿನ ವಿಷಯವಲ್ಲ. ಸಕಲೇಶಪುರದಿಂದ 9 ಟಿಎಂಸಿ ನೀರು ಎತ್ತುವ ಯೋಜನೆಗಾಗಿ ಸಾವಿರಾರು ಕೋಟಿ ಸುರಿದರೂ ಈವರೆಗೂ ಒಂದು ತೊಟ್ಟು ನೀರನ್ನು ತುಮಕೂರಿನತ್ತ ಹರಿಸುವುದಕ್ಕೂ ಆಗಿಲ್ಲ ಎನ್ನುವುದು ಯೋಜನೆಯ ನೈಜತೆಯನ್ನು ಎತ್ತಿ ತೋರಿಸುತ್ತದೆ.

ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರಗಳಿಗೆ ನೀರು ಹರಿಸುವ ಉದ್ದೇಶದಿಂದ ಎತ್ತಿನಹೊಳೆ ಯೋಜನೆ ತಯಾರಿಸಲಾಗಿತ್ತು. 2011ರಲ್ಲಿ ಡಿವಿ ಸದಾನಂದ ಗೌಡ ಸರಕಾರ ಇದ್ದಾಗ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಿದ್ದರೆ, 2013ರಲ್ಲಿ ಸಿದ್ದರಾಮಯ್ಯ ಸರಕಾರ ಬಂದ ಕೂಡಲೇ ಯೋಜನೆ ಕಾಮಗಾರಿ ಎತ್ತಿಕೊಂಡಿದ್ದರು. ಚಿಕ್ಕಬಳ್ಳಾಪುರ, ಕೋಲಾರದ ಜನರಿಗೆ ನೀರು ತರುತ್ತೇವೆಂದು ಹೇಳಿ ಅಲ್ಲಿನ ಜನರನ್ನು ಮೋಸ ಮಾಡಿದ್ದು ಬಿಟ್ಟರೆ, ಅತ್ತ ನೀರು ಹರಿಸುವುದಕ್ಕೆ ಸಾಧ್ಯವೇ ಆಗಿಲ್ಲ. ಈ ಬಗ್ಗೆ ಬೆಂಗಳೂರಿನ ಐಐಎಸ್ಸಿ ವಿಜ್ಞಾನಿ ಡಾ.ಟಿವಿ ರಾಮಚಂದ್ರ ಅವರು, ಎತ್ತಿನಹೊಳೆ ಯೋಜನೆಯಿಂದ ಒಂದು ಟಿಎಂಸಿ ನೀರು ಹರಿಸುವುದಕ್ಕೂ ಸಾಧ್ಯ ಇಲ್ಲ ಎಂದು ವರದಿ ನೀಡಿದ್ದರೂ, ರಾಜ್ಯ ಸರಕಾರದ ಆಳುವ ವರ್ಗ ಮಾತ್ರ ಕೇಳಿಸಿಕೊಂಡಿಲ್ಲ. ಹಾಗಿದ್ದರೂ, ಮತ್ತೊಮ್ಮೆ ಕಾರ್ಯ ಸಾಧ್ಯತೆ ವರದಿ ಕೇಳಿದ್ದು ಇದನ್ನು ಎತ್ತಿನಹೊಳೆ ಯೋಜನೆಯ ಇಂಜಿನಿಯರ್ ವರದಯ್ಯ ಖಚಿತಪಡಿಸಿದ್ದಾರೆ.

ಹಣ ದೋಚುವ ತಂತ್ರಗಾರಿಕೆ

ರಾಜ್ಯದಲ್ಲಿ ಆಗಿರುವ ಯಾವುದೇ ನೀರಾವರಿ ಯೋಜನೆಯೂ ಉದ್ದೇಶಿತ ಗುರಿಯನ್ನು ಈಡೇರಿಸಿದ ಉದಾಹರಣೆಯೇ ಇಲ್ಲ. ಭದ್ರಾ ಮೇಲ್ದಂಡೆ ಯೋಜನೆಯಾಗಲೀ, ವಾರಾಹಿಯಾಗಲೀ, ಈಗ ಆಗುತ್ತಿರುವ ಎತ್ತಿನಹೊಳೆಯೇ ಆಗಲಿ, ಸಾವಿರಾರು ಕೋಟಿ ರೂಪಾಯಿ ದುಡ್ಡನ್ನು ನುಂಗಿದ್ದರೂ, ನೀರು ಹರಿಸಿದ್ದು ನಿಕೃಷ್ಟ ಎನ್ನುವಷ್ಟು. ಆಳುವ ಸರ್ಕಾರಗಳು ಮಾತ್ರ ಮತ್ತೆ ಮತ್ತೆ ಹಣ ಸುರಿಯುತ್ತ ನೀರಾವರಿ ಯೋಜನೆಗಳನ್ನು ಎಟಿಎಂ ಮಾಡಿಕೊಂಡಿರುವುದು ಜನರ ದೌರ್ಭಾಗ್ಯ ಅನ್ನಬೇಕು. ನೇತ್ರಾವತಿ ತಿರುಗಿಸುವ ಎತ್ತಿನಹೊಳೆ ಯೋಜನೆ ಅತ್ಯಂತ ಹೊಣೆಗೇಡಿ ಮತ್ತು ಪರಿಸರ ಹಾಳು ಮಾಡುವ ಯೋಜನೆಯೆಂದು ಪರಿಸರ ತಜ್ಞರು ಎಚ್ಚರಿಸಿದರೂ, ಆಳುವ ವರ್ಗದ ಕಿವಿಗೆ ಬಿದ್ದಿಲ್ಲ. ಕರಾವಳಿಯಲ್ಲಿ ಯೋಜನೆಗೆ ಭಾರೀ ವಿರೋಧ ಕೇಳಿಬಂದರೂ, ಬಿಜೆಪಿ- ಕಾಂಗ್ರೆಸ್- ಜೆಡಿಎಸ್ ನಾಯಕರ ಕೊಡುಕೊಳ್ಳುವ ಅಡ್ಜಸ್ಟ್ ಮೆಂಟ್ ರಾಜಕೀಯಕ್ಕೆ ಜನಸಾಮಾನ್ಯರು ಬೆಲೆ ತೆತ್ತಿದ್ದಾರೆ. ಈ ಯೋಜನೆ ಶುರುವಾದ ಬಳಿಕವೇ ಪಶ್ಚಿಮ ಘಟ್ಟದಲ್ಲಿ ಉದ್ದಕ್ಕೂ ಭೂಕುಸಿತಗಳಾಗುತ್ತಿದ್ದು ಐದಾರು ವರ್ಷಗಳಿಂದ ಸಕಲೇಶಪುರ, ಕೊಡಗು, ಬೆಳ್ತಂಗಡಿ, ಈಗ ವಯನಾಡಿನಲ್ಲಿ ನೂರಾರು ಜನರು ಅಮಾಯಕರು ಪ್ರಾಣ ಕಳಕೊಂಡಿದ್ದಾರೆ.

Mangalore Yettinahole project, government asks report on netravathi river project.