Pratap Simha, Siddaramaiah, Muda scam: ಒಡವೆ ಕದ್ದ ಕಳ್ಳ ಒಡವೆ ವಾಪಸ್ ಕೊಟ್ಟರೆ ಕೇಸ್ ಮುಗಿಯುತ್ತಾ? ; ಸಿಎಂ ಪತ್ನಿಯ ಭಾವನಾತ್ಮಕ ಕಾರ್ಡ್‌ ವರ್ಕೌಟ್‌ ಆಗಲ್ಲ, ಪ್ರತಾಪ್‌ ಸಿಂಹ 

01-10-24 05:24 pm       HK News Desk   ಕರ್ನಾಟಕ

ಹೊಗಳು ಭಟ್ಟರು ಬಹುಪರಾಕ್ ಹಾಕುವವರನ್ನು ಇಟ್ಟುಕೊಂಡ ಪರಿಣಾಮ ಸಿಎಂ ಸಿದ್ದರಾಮಯ್ಯನವರಿಗೆ ಈ ಸ್ಥಿತಿ ಬಂದಿದೆ ಎಂದು ಮಾಜಿ ಸಂಸದ ಪ್ರತಾಪ್‌ ಸಿಂಹ ಹೇಳಿದ್ದಾರೆ.

ಮೈಸೂರು, ಅ 1: ಹೊಗಳು ಭಟ್ಟರು ಬಹುಪರಾಕ್ ಹಾಕುವವರನ್ನು ಇಟ್ಟುಕೊಂಡ ಪರಿಣಾಮ ಸಿಎಂ ಸಿದ್ದರಾಮಯ್ಯನವರಿಗೆ ಈ ಸ್ಥಿತಿ ಬಂದಿದೆ ಎಂದು ಮಾಜಿ ಸಂಸದ ಪ್ರತಾಪ್‌ ಸಿಂಹ ಹೇಳಿದ್ದಾರೆ.

ಸಿದ್ದರಾಮಯ್ಯನವರ ಪತ್ನಿ 14 ಸೈಟ್‌ ಅನ್ನು ಮರಳಿ ಮುಡಾಕ್ಕೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಅಧಿಕಾರದಲ್ಲಿ ಇದ್ದಾಗ ಕುಟುಂಬ ಹತ್ತಿರವಿಟ್ಟುಕೊಂಡರೆ, ಮಕ್ಕಳನ್ನು ಬೆಳೆಸಲು ಮುಂದಾದರೆ ಅವರು ನಿಮ್ಮ ಹೆಸರಿಗೆ ಕಳಂಕ ತರುತ್ತಾರೆ ಎಂಬುದಕ್ಕೆ ಇದು ಇನ್ನೊಂದು ಉದಾಹರಣೆ. ಒಡವೆ ಕದ್ದ ಕಳ್ಳ ಒಡವೆ ವಾಪಸ್ ಕೊಟ್ಟರೆ ಕೇಸ್ ಮುಗಿಯುತ್ತಾ? ಇಲ್ಲ‌ ಅಲ್ವಾ? ಎಂದು ಪ್ರಶ್ನಿಸಿದರು.

ಎರಡೂವರೆ ತಿಂಗಳ ಹಿಂದೆಯೇ ನಾನು ಸಿಎಂಗೆ ನಿಮಗೆ ಬಂದ ಅಕ್ರಮ ಸೈಟ್ ವಾಪಸ್‌ ಕೊಟ್ಟು ಬಿಡಿ ಎಂದು ಹೇಳಿದ್ದೆ. ಸಿಎಂ ಅವರ ಇಷ್ಟು ವರ್ಷದ ರಾಜಕೀಯ ಜೀವನವನ್ನು 14 ಸೈಟ್ ನುಂಗಬಾರದು ಎಂದು ಅಂದೇ ಹೇಳಿದ್ದೆ. ಎರಡೂವರೆ ತಿಂಗಳ ಹಿಂದೆ ವಾಪಸ್ ಕೊಟ್ಟಿದ್ದರೆ ಇವತ್ತು ಪ್ರಾಸಿಕ್ಯೂಷನ್, ಕೇಸ್ ಏನೂ ಆಗುತ್ತಿರಲಿಲ್ಲ. ಕುರ್ಚಿಯೂ ಅಲುಗಾಡುತ್ತಿರಲಿಲ್ಲ ಎಂದರು.

ಸಿಎಂ ತಮ್ಮ ಸೈಟ್‌ಗೆ 64 ಕೋಟಿ ರೂ. ಕೇಳಿದ ದಿನವೇ ಸಿಎಂ ಮೇಲಿನ ಗೌರವ, ವಿಶ್ವಾಸ ನೆಲ ಕಚ್ಚಿತು. ಈಗ ಸಿಎಂ ಪತ್ನಿ ಸೈಟ್ ವಾಪಸ್ ಕೊಟ್ಟರೂ ಅಷ್ಟೇ. ಕೊಡದಿದ್ದರೂ ಅಷ್ಟೇ. ತನಿಖೆ ಆಗಲೇಬೇಕು ಎಂದು ಆಗ್ರಹಿಸಿದರು.

ವರುಣಾ ಚುನಾವಣೆ ಸಂದರ್ಭದಲ್ಲೇ ನನಗೆ ಈ ಸೈಟ್ ದಾಖಲಾತಿ ಬಂದಿತ್ತು. ಪತ್ನಿ ಹೆಸರಿದೆ ವೈಯಕ್ತಿಕ ದಾಳಿ ಬೇಡ ಎಂದು ಸುಮ್ಮನಿದ್ದೆ. ರಾಜಕಾರಣಿಗಳೇ ನಿಮ್ಮ ಹೆಂಡತಿ, ಮಕ್ಕಳನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಿ. ಈ ಹಿಂದೆ ಸಿಎಂಗಳಾಗಿ ಜೈಲಿಗೆ ಹೋಗಿದ್ದು ಅವರ ಕುಟುಂಬದ, ಮಕ್ಕಳ ಕಾರಣಕ್ಕಾಗಿ ಎಂಬುದು ನೆನಪಿರಲಿ ಎಂದರು.

ಈಗ ಸಿಎಂ ಪತ್ನಿಯ ಭಾವನಾತ್ಮಕ ಕಾರ್ಡ್ ಕೆಲಸ ಮಾಡುವುದಿಲ್ಲ. ಪಾರ್ವತಮ್ಮ ಅವರಿಗೆ ತಮ್ಮ ಪತಿಯ ತಪಸ್ಸಿನ ರೀತಿಯ ರಾಜಕಾರಣಕ್ಕಿಂತಾ ಸೈಟ್ ಮುಖ್ಯವಾಗಿ ಇಷ್ಟು ದಿನ ಹಠ ಹಿಡಿದು ಕೂತಿದ್ದೆ ಬಹುದೊಡ್ಡ ತಪ್ಪು. ಈಗ ಸೈಟ್ ವಾಪಸ್ ಕೊಡುವುದಾಗಿದ್ದರೆ ಹೈಕೋರ್ಟ್‌ನಲ್ಲಿ ಹೋರಾಟ ಮಾಡಿದ್ದು ಯಾಕೆ ಎಂದು ಪ್ರಶ್ನಿಸಿದರು

Mysuru Pratap Simha slams Siddaramaiah, says what's the use of returning site after probe has been ordered.