2026 ರಲ್ಲಿ ಕೆಎಫ್‌ಡಿ ಲಸಿಕೆ ಲಭ್ಯ ; ಐಸಿಎಂಆರ್ ನಿರ್ದೇಶಕರನ್ನ ಭೇಟಿ ಮಾಡಿ ಚರ್ಚೆ ನಡೆಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ 

17-10-24 12:37 pm       Bangalore Correspondent   ಕರ್ನಾಟಕ

ಕೆಎಫ್.ಡಿ (ಮಂಗನ ಕಾಯಿಲೆ) ಲಸಿಕೆ ಕುರಿತಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ದೆಹಲಿಯಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ನಿರ್ದೇಶಕರನ್ನ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ಬೆಂಗಳೂರು, ಅ.17: ಕೆಎಫ್.ಡಿ (ಮಂಗನ ಕಾಯಿಲೆ) ಲಸಿಕೆ ಕುರಿತಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ದೆಹಲಿಯಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ನಿರ್ದೇಶಕರನ್ನ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳ ಜೊತೆ ಇಲಾಖೆಯ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ದೆಹಲಿ ಪ್ರವಾಸದಲ್ಲಿರುವ ಸಚಿವರು, ICMR DG ಅವರನ್ನ ಭೇಟಿ ಮಾಡಿ, ಕೆಎಫ್.ಡಿ ಲಸಿಕೆ ದೊರಕಿಸುವ ನಿಟ್ಟಿನಲ್ಲಿ ಅಗತ್ಯ ವಿತ್ತೀಯ ನೆರವು ಒದಗಿಸುವಂತೆ ಕೋರಿದರು. 

ಮೊದಲ ಹಂತದ ಪ್ರಯೋಗದಲ್ಲಿ ಕೆ.ಎಫ್.ಡಿ ಲಸಿಕೆ ಭರವಸೆ ಮೂಡಿಸಿದ್ದು, ಕಾಲಮಿತಿಯೊಳಗೆ ಲಸಿಕೆ ಲಭ್ಯತೆ ಅಗತ್ಯವಾಗಿದೆ. ಲಸಿಕೆಯ ಎರಡನೇ ಹಂತವನ್ನ ಶೀಘ್ರದಲ್ಲಿ ಪ್ರಾರಂಭಿಸಲಾಗುವುದು. 2025ರ ಏಪ್ರಿಲ್ ತಿಂಗಳಲ್ಲಿ ಲಸಿಕೆಯ ಮಾನವ ಪ್ರಯೋಗಗಳನ್ನ ನಡೆಸಲು ಯೋಜಿಸಲಾಗಿದ್ದು, 2026 ರಲ್ಲಿ ಲಸಿಕೆ ಬಳಕೆಗೆ ಲಭ್ಯವಿರುತ್ತದೆ. ಈ ನಿಟ್ಟಿನಲ್ಲಿ ಅಗತ್ಯ ನೆರವು ಒದಗಿಸುವಂತೆ ICMR ನಿರ್ದೇಶಕರಿಗೆ ಸಚಿವ ದಿನೇಶ್ ಗುಂಡೂರಾವ್ ಒತ್ತಾಯಿಸಿದ್ದಾರೆ.

ಭೇಟಿ ವೇಳೆ ರಾಜ್ಯದ ಅನೀಮಿಯಾ ಮುಕ್ತ ಪೌಷ್ಠಿಕ ಕರ್ನಾಟಕ ಯೋಜನೆಗೆ ICMR ನಿರ್ದೇಶಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ವಿಶೇಷವಾಗಿ ಸರ್ಕಾರಿ ಶಾಲಾ ಕಾಲೇಜು ಮಕ್ಕಳನ್ನ ರಕ್ತಹೀನತೆ ತಪಾಸಣೆಗೆ ಒಳಪಡಿಸುತ್ತಿರುವುದು ಉತ್ತಮ ಯೋಜನೆ ಎಂದಿದ್ದಾರೆ. ಅಲ್ಲದೆ, ಭಾರತ ಸರ್ಕಾರದ ರಕ್ತಹೀನತೆ ಮುಕ್ತ ಭಾರತ್ 2.O ಯೋಜನೆಗೆ ಅನುಗುಣವಾಗಿ ಯೋಜನೆ ವಿಸ್ತರಿಸುವಂತೆ ಸಚಿವರಲ್ಲಿ ವಿನಂತಿಸಿದರು.  

ರಾಜ್ಯದಲ್ಲಿ ಡೆಂಘಿ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಕೈಗೊಂಡಿರುವ ನವೀನ ತಂತ್ರಜ್ಞಾನಗಳ ಬಗ್ಗೆ ಆಸಕ್ತಿ ತೋರಿದ ICMR ನಿರ್ದೇಶಕರು, ಕರ್ನಾಟಕ ಸರ್ಕಾರ ತೆಗೆದುಕೊಂಡಿರುವ ಕ್ರಮಗಳನ್ನ ದೇಶದ ಇತರ ರಾಜ್ಯಗಳಲ್ಲಿ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ಇದೇ ವೇಳೆ ICMR ನಿರ್ದೇಶಕರು ಸಚಿವರಿಗೆ ತಿಳಿಸಿದರು. ಆರೋಗ್ಯ ಸೇವೆಗಳ ಉತ್ತಮ ವಿತರಣೆಗಾಗಿ ಸಾರ್ವಜನಿಕ ಆರೋಗ್ಯ ಸಂಶೋಧನೆಯಲ್ಲಿ ವಿಶೇಷ ಯೋಜನೆಗಳನ್ನು ಕೈಗೊಳ್ಳುವಲ್ಲಿ ಪರಸ್ಪರ ಸಹಕರಿಸುವ ನಿಟ್ಟಿನಲ್ಲಿ ಭೇಟಿ ವೇಳೆ ಚರ್ಚೆ ನಡೆಸಲಾಯಿತು. ಸಚಿವರ ಜೊತೆ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ, NHM ಎಂ.ಡಿ‌ ನವೀನ್ ಭಟ್ ಉಪಸ್ಥಿತರಿದ್ದರು.

Karnataka Health Minister Dinesh Gundu Rao met with Indian Council of Medical Research’s (ICMR) Director General D. Rajiv Bahl in New Delhi to discuss the progress of the vaccine for Kyasanur Forest Disease (KFD), also known as the monkeypox or monkey fever