Shivamogga car, traffic police news: ಶಿವಮೊಗ್ಗ ; ಟ್ರಾಫಿಕ್ ಉಲ್ಲಂಘನೆ ಮಾಡಿದ್ದನ್ನ ಪ್ರಶ್ನಿಸಿದಕ್ಕೆ ಪೊಲೀಸ್ ಪೇದೆಯನ್ನೇ 100 ಮೀಟರ್‌ ದೂರ ಬಾನೆಟ್‌ ಮೇಲೆ ಎಳೆದೊಯ್ದ ಡ್ರೈವರ್, ವಿಡಿಯೋ ವೈರಲ್ 

24-10-24 09:16 pm       HK News Desk   ಕರ್ನಾಟಕ

ನಗರದ ಸಹ್ಯಾದ್ರಿ ಕಾಲೇಜು ಮುಂಭಾಗ ಗುರುವಾರ ಸಂಚಾರ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ನಿಲ್ಲಿಸುವಂತೆ ಸೂಚಿಸಿದ ಟ್ರಾಫಿಕ್ ಪೊಲೀಸ್ ಮೇಲೆಯೇ ಕಾರು ಡ್ರೈವರ್ ಕಾರು ಹಾಯಿಸಲು ಯತ್ನಿಸಿದ್ದಾನೆ. ಬಾನೆಟ್‌ ಮೇಲೆ ಬಿದ್ದ ಅವರನ್ನು 100 ಮೀಟರ್‌ನಷ್ಟು ದೂರ ಎಳೆದೊಯ್ದಿದ್ದಾನೆ ಎಂದು ತಿಳಿದುಬಂದಿದೆ.

ಶಿವಮೊಗ್ಗ, ಅ 24: ನಗರದ ಸಹ್ಯಾದ್ರಿ ಕಾಲೇಜು ಮುಂಭಾಗ ಗುರುವಾರ ಸಂಚಾರ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ನಿಲ್ಲಿಸುವಂತೆ ಸೂಚಿಸಿದ ಟ್ರಾಫಿಕ್ ಪೊಲೀಸ್ ಮೇಲೆಯೇ ಕಾರು ಡ್ರೈವರ್ ಕಾರು ಹಾಯಿಸಲು ಯತ್ನಿಸಿದ್ದಾನೆ. ಬಾನೆಟ್‌ ಮೇಲೆ ಬಿದ್ದ ಅವರನ್ನು 100 ಮೀಟರ್‌ನಷ್ಟು ದೂರ ಎಳೆದೊಯ್ದಿದ್ದಾನೆ ಎಂದು ತಿಳಿದುಬಂದಿದೆ.

ಶಿವಮೊಗ್ಗದ ಪೂರ್ವ ಸಂಚಾರ ವಿಭಾಗದ ಕಾನ್‌ಸ್ಟೆಬಲ್ ಪ್ರಭುರಾಜ್ ಸಹ್ಯಾದ್ರಿ ಕಾಲೇಜು ಬಳಿ ಕರ್ತವ್ಯ ನಿರತರಾಗಿದ್ದಾರೆ. ಈ ವೇಳೆ ಎಂಆರ್‌ಎಸ್ ಸರ್ಕಲ್ ಕಡೆಯಿಂದ ಹೊಳೆ ಬಸ್ ನಿಲ್ದಾಣದತ್ತ ಹೊರಟಿದ್ದ ಕಿಯಾ ಸಾನೆಟ್‌ ಕಾರಿನ ಚಾಲಕ ಸಂಚಾರ ನಿಯಮ ಉಲ್ಲಂಘನೆ ಮಾಡಿರುವುದು ಕಂಡು ಬಂದಿದೆ. ಆಗ ಕಾರಿಗೆ ಅಡ್ಡ ನಿಂತ ಅವರು, ಪಕ್ಕಕ್ಕೆ ನಿಲ್ಲಿಸುವಂತೆ ಚಾಲಕನಿಗೆ ಹೇಳಿದ್ದಾರೆ.

ಕಾರು ನಿಲ್ಲಿಸದೇ ಪ್ರಭುರಾಜ್ ಅವರೊಂದಿಗೆ ವಾದ ಮಾಡುತ್ತಲೇ ಮುಂದೆ ಚಲಾಯಿಸುತ್ತಾ ಅವರನ್ನು ದಬ್ಬಿಕೊಂಡು ಹೋಗಿದ್ದಾನೆ. ಹಿಂದಕ್ಕೆ ಸರಿಯುತ್ತಾ ಹೋದ ಕಾನ್‌ಸ್ಟೆಬಲ್, ಕಾರಿನ ವೇಗ ಹೆಚ್ಚುತ್ತಲೇ ಅದರ ಬಾನೆಟ್ ಮೇಲೆ ಬಿದ್ದಿದ್ದಾರೆ. ಆಗಲೂ ಕಾರು ನಿಲ್ಲಿಸದೇ ಮುಂದೆ ಸಾಗಿದ್ದಾನೆ. ಸ್ವಲ್ಪ ದೂರ ತೆರಳಿದ ನಂತರ ಕಾರು ನಿಲ್ಲಿಸಿದ್ದಾನೆ. ಕಾನ್‌ಸ್ಟೆಬಲ್ ಕೆಳಗೆ ಇಳಿದು ಪಕ್ಕಕ್ಕೆ ಬರುತ್ತಿದ್ದಂತೆಯೇ ವೇಗವಾಗಿ ಕಾರು ಚಲಾಯಿಸಿಕೊಂಡು ಹೋಗಿದ್ದಾನೆ ಎಂದು ಗೊತ್ತಾಗಿದೆ.

ಘಟನೆಯ ದೃಶ್ಯವನ್ನು ಸಾರ್ವಜನಿಕರೊಬ್ಬರು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.

‘ಚಾಲಕ ಕಾರು ನಿಲ್ಲಿಸದೇ ಸ್ಥಳದಿಂದ ಹೊರಟು ಹೋಗಿದ್ದಾನೆ. ಅಲ್ಲಿನ ಸಿಸಿ ಟಿವಿ ಕ್ಯಾಮೆರಾದ ದೃಶ್ಯ ಪರಿಶೀಲನೆ ನಡೆಸಿದ್ದೇವೆ. ಕಾರು ಚಾಲಕ ಭದ್ರಾವತಿಯ ಹೊಸಮನೆ ಬಡಾವಣೆ ನಿವಾಸಿ, ಕೇಬಲ್ ಆಪರೇಟರ್ ಮಿಥುನ್ ಜಗದಾಳೆ ಎಂದು ಗೊತ್ತಾಗಿದೆ. ಆರೋಪಿ ವಿರುದ್ಧ ಕೋಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಬಂಧನಕ್ಕೆ ಬಲೆ ಬೀಸಿದ್ದೇವೆ’ ಎಂದು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್  ಪ್ರತಿಕ್ರಿಯಿಸಿದರು.

In a shocking incident near Sahyadri College in Karnataka's Shivamogga, a driver attempted to run over a police officer during a routine vehicle check. The incident occurred when traffic police from the East Station signalled a speeding car to stop.