Bangalore Fire showroom: ಇಲೆಕ್ಟ್ರಿಕ್ ವಾಹನ ಶೋರೂಂನಲ್ಲಿ ಬೆಂಕಿ ಅನಾಹುತ ; ಯುವತಿ ಸಜೀವ ದಹನ, ಫೈರ್ ಸೇಫ್ಟಿ ಇಲ್ಲದ ಕಟ್ಟಡಗಳ ಲೈಸನ್ಸ್ ರದ್ದುಪಡಿಸಲು ಯತ್ನಾಳ್ ಆಗ್ರಹ

20-11-24 09:57 pm       Bangalore Correspondent   ಕರ್ನಾಟಕ

ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳ ಶೋರೂಂನಲ್ಲಿ ಬೆಂಕಿ ಅನಾಹುತ ಸಂಭವಿಸಿ ಸೇಲ್ಸ್ ಮನ್ ಯುವತಿ ಸಜೀವ ದಹನವಾಗಿರುವ ಘಟನೆಯಿಂದ ರಾಜಧಾನಿ ಬೆಂಗಳೂರು ಬೆಚ್ಚಿಬಿದ್ದಿದೆ.

ಬೆಂಗಳೂರು, ನ.20: ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳ ಶೋರೂಂನಲ್ಲಿ ಬೆಂಕಿ ಅನಾಹುತ ಸಂಭವಿಸಿ ಸೇಲ್ಸ್ ಮನ್ ಯುವತಿ ಸಜೀವ ದಹನವಾಗಿರುವ ಘಟನೆಯಿಂದ ರಾಜಧಾನಿ ಬೆಂಗಳೂರು ಬೆಚ್ಚಿಬಿದ್ದಿದೆ. ಈ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಘಟನೆ ಸಂಬಂಧ ಯಾವುದೇ ಅಗ್ನಿ ಸುರಕ್ಷತೆ ಇಲ್ಲದೆ ಶೋರೂಂ ನಡೆಸುತ್ತಿದ್ದ ಮಾಲೀಕನನ್ನು ಪೊಲೀಸರು ಆದಷ್ಟು ಬೇಗ ಬಂಧಿಸಲಿ. ಮೃತ ಸಿಬ್ಬಂದಿಗೆ ಮಾಲೀಕರಿಂದಲೇ ದೇಣಿಗೆ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಅಗ್ನಿಶಾಮಕ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ (NOC) ಪಡೆಯದ ಹಾಗೂ ಅಗ್ನಿ ನಂದಿಸುವ ಉಪಕರಣಗಳನ್ನು ಹೊಂದಿರದ, ಫೈರ್ ಡ್ರಿಲ್ ಮಾಡಿಸದ ಯಾವುದೇ ಶೋರೂಂಗಳು, ಶಾಲಾ ಕಾಲೇಜುಗಳು, ಗೋಡೌನ್‌ಗಳಿದ್ದರೆ ಅಂತಹ ಕಟ್ಟಡಗಳ ಲೈಸನ್ಸ್ ರದ್ದು ಪಡಿಸಬೇಕು ಎಂದು ಯತ್ನಾಳ್ ಒತ್ತಾಯಿಸಿದ್ದಾರೆ.

ಫೈರ್ ಡ್ರಿಲ್ ಒಂದು ಮನೋರಂಜನಾ ಕಾರ್ಯವಾಗದೆ, ಕೆಲಸ ಮಾಡುವ ಸಿಬ್ಬಂದಿ ಅಗ್ನಿ ಆಕಸ್ಮಿಕ ಸಂಭವಿಸಿದರೆ ಹೇಗೆ ಎದುರಿಸಬೇಕು ಎಂಬುದನ್ನು ಸರಿಯಾಗಿ ಕಲಿತಿರಬೇಕು. ಫೈರ್ ಡ್ರಿಲ್ ಅನ್ನು ಆಸ್ಪತ್ರೆಗಳಲ್ಲಿ, ಅಗ್ನಿ ಸೂಕ್ಷ್ಮ ವಲಯಗಳಲ್ಲಿ, ಫ್ಯಾಕ್ಟರಿ, ಶಾಲಾ ಕಾಲೇಜುಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಮಾಡಬೇಕು. ಅಗ್ನಿ ನಂದಿಸುವ ಉಪಕರಣಗಳು ಇಲ್ಲದಿದ್ದರೆ ಕೂಡಲೇ ಅಂತಹ ಕಚೇರಿ ಅಥವಾ ವ್ಯಾಪಾರ ವಹಿವಾಟು ಕೇಂದ್ರದ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಯತ್ನಾಳ್‌ ಸಲಹೆ ನೀಡಿದ್ದಾರೆ. 

ಬೆಂಗಳೂರಿನ ರಾಜಾಜಿನಗರದಲ್ಲಿರುವ ಎಲೆಕ್ಟ್ರಿಕ್‌ ವಾಹನ ಶೋರೂಂನಲ್ಲಿ ಮಂಗಳವಾರ ಅಗ್ನಿ ಅವಘಡ ಸಂಭವಿಸಿದ್ದರಿಂದ ಶೋರೂಂ ಒಳಗಿದ್ದ ಯುವತಿ ದಾರುಣ ಮೃತಪಟ್ಟಿದ್ದರು. ಶೋರೂಂನಲ್ಲಿ ಅಗ್ನಿ ಸುರಕ್ಷತಾ ಕ್ರಮಗಳನ್ನು ಪಾಲಿಸದಿರುವುದು ತಿಳಿದುಬಂದಿದೆ. ರಾಜಾಜಿನಗರದ ರಾಜ್‌ಕುಮಾರ್‌ ರಸ್ತೆಯ ಎಲೆಕ್ಟ್ರಿಕ್‌ ಸ್ಕೂಟರ್‌ ಶೋರೂಂನಲ್ಲಿ ಈ ಘಟನೆ ಸಂಭವಿಸಿತ್ತು. ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿದ್ದು, ಕೆಲವೇ ನಿಮಿಷಗಳಲ್ಲಿ ವಾಹನಗಳು ಹೊತ್ತಿ ಉರಿದಿದ್ದವು. ಈ ವೇಳೆ ಶೋರೂಂನಲ್ಲಿ ಸೇಲ್ಸ್ ಎಕ್ಸಿಕ್ಯುಟಿವ್ ಆಗಿ ಕೆಲಸ ಮಾಡುತ್ತಿದ್ದ 20 ವರ್ಷದ ಪ್ರಿಯಾ ಅಲ್ಲಿಂದ ಹೊರಬರಲಾರದೆ ಸಾವಿಗೀಡಾಗಿದ್ದಾರೆ.

Fire accident at two wheeler electric showroom in Bangalore, yatnal demands cancellation of lisence.