Chikkamagaluru, Elephant Attack: ಚಿಕ್ಕಮಗಳೂರಲ್ಲಿ ಮತ್ತೊಬ್ಬ ರೈತನನ್ನು ತುಳಿದು ಸಾಯಿಸಿದ ಕಾಡಾನೆ ; 20 ದಿನಗಳಲ್ಲಿ ಒಂಟಿ ಸಲಗಕ್ಕೆ ಎರಡನೇ ಬಲಿ ! 

19-12-24 06:36 pm       HK News Desk   ಕರ್ನಾಟಕ

ಕಾಫಿನಾಡಲ್ಲಿ ಆನೆ ದಾಳಿಗೆ ಮತ್ತೊಂದು ಬಲಿಯಾಗಿದೆ. 20 ದಿನಗಳ ಅಂತರದಲ್ಲಿ ಕಾಡಾನೆ ದಾಳಿಗೆ ಎರಡು ಸಾವಾಗಿದ್ದು ರಾಜ್ಯ ಸರ್ಕಾರದ ವಿರುದ್ಧ ರೈತರ ಆಕ್ರೋಶ ತಿರುಗಿದೆ.

ಚಿಕ್ಕಮಗಳೂರು, ಡಿ.19: ಕಾಫಿನಾಡಲ್ಲಿ ಆನೆ ದಾಳಿಗೆ ಮತ್ತೊಂದು ಬಲಿಯಾಗಿದೆ. 20 ದಿನಗಳ ಅಂತರದಲ್ಲಿ ಕಾಡಾನೆ ದಾಳಿಗೆ ಎರಡು ಸಾವಾಗಿದ್ದು ರಾಜ್ಯ ಸರ್ಕಾರದ ವಿರುದ್ಧ ರೈತರ ಆಕ್ರೋಶ ತಿರುಗಿದೆ. ತೋಟಕ್ಕೆ ಹೋಗಿದ್ದ ತಂದೆ-ಮಗನ ಮೇಲೆ ಒಂಟಿ ಸಲಗ ದಾಳಿ ಮಾಡಿದ್ದು ಈ ವೇಳೆ ಮಗ ಓಡಿ ಹೋಗಿ ತಪ್ಪಿಸಿಕೊಂಡಿದ್ದರೆ, ತಂದೆ ಆನೆ ದಾಳಿಗೆ ಬಲಿಯಾಗಿದ್ದಾರೆ. 

ಎನ್.ಆರ್.ಪುರ ತಾಲೂಕಿನ ಮಡಬೂರು ಗ್ರಾಮದ ಬಳಿ ಘಟನೆ ನಡೆದಿದ್ದು ಎಲಿಯಾಸ್ (75) ಮೃತ ದುರ್ದೈವಿ. ಮಗ ವರ್ಗೀಸ್ ಆನೆ ದಾಳಿಯಿಂದ ಪಾರಾಗಿದ್ದಾನೆ. ಎಲಿಯಾಸ್ ಕುಟುಂಬ ಕೇರಳದಿಂದ ಬಂದು ಮಡಬೂರು ಗ್ರಾಮದಲ್ಲಿ ಅಡಿಕೆ-ಬಾಳೆ ತೋಟ ಮಾಡಿಕೊಂಡಿದ್ದರು. ಎಲಿಯಾಸ್ ಅವರನ್ನು ಒದ್ದು ಸಾಯಿಸಿದ ಬಳಿಕ ಕಾಡಾನೆ ಮೃತದೇಹದ ಸುತ್ತ ತಿರುಗುತ್ತ ಸ್ಥಳದಲ್ಲೇ ನಿಂತು ಹೂಂಕಾರ ಮಾಡುತ್ತಿತ್ತು. ಮೃತದೇಹಕ್ಕೆ ಒದೆಯುತ್ತಾ,  ಘೀಳಿಡುತ್ತಾ ಸ್ಥಳದಲ್ಲೇ ನಿಂತಿರುವ ಸಲಗ ಪರಿಸರದಲ್ಲಿ ಭಯ ಸೃಷ್ಟಿಸಿದೆ. 

ಇದೇ ನವೆಂಬರ್ 30ರಂದು ಪಕ್ಕದ ಸೀತೂರಲ್ಲಿ ಉಮೇಶ್‌ ಎಂಬವರನ್ನ ಕಾಡಾನೆ ತಿವಿದು ಸಾಯಿಸಿತ್ತು. ಇಂದು ಮಡಬೂರಲ್ಲಿ ಎಲಿಯಾಸ್ ಎಂಬ ಮತ್ತೊಬ್ಬನನ್ನು ಬಲಿ ಪಡೆದಿದೆ. ಹೀಗಾಗಿ ಅರಣ್ಯ ಇಲಾಖೆ ವಿರುದ್ಧ ಮಲೆನಾಡಿನ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Wild elephant attack in chikkamagaluru, farmer killed on spot, second death in 20 days.