Ct Ravi Case, CID case: ಸಿಟಿ ರವಿ - ಲಕ್ಷ್ಮೀ ಹೆಬ್ಬಾಳ್ಕರ್‌ ನಿಂದನೆ ಪ್ರಕರಣ ಸಿಐಡಿಗೆ ; ಸಭಾಪತಿಗೆ ಹಕ್ಕುಚ್ಯುತಿ ಬಗ್ಗೆ ದೂರು, ಗೃಹ ಸಚಿವ, ಡಿಜಿಪಿಗೆ ಏಳು ಪುಟಗಳ ದೂರಿತ್ತ ಸಿಟಿ ರವಿ  

24-12-24 04:40 pm       HK News Desk   ಕರ್ನಾಟಕ

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಸಿಟಿ ರವಿ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆಂಬ ಪ್ರಕರಣ ಭಾರೀ ಜಟಾಪಟಿಗೆ ಕಾರಣವಾಗಿರುವಂತೆಯೇ ಒಟ್ಟು ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ಹಸ್ತಾಂತರಿಸಿದೆ. 

ಬೆಳಗಾವಿ, ಡಿ.24 : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಸಿಟಿ ರವಿ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆಂಬ ಪ್ರಕರಣ ಭಾರೀ ಜಟಾಪಟಿಗೆ ಕಾರಣವಾಗಿರುವಂತೆಯೇ ಒಟ್ಟು ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ಹಸ್ತಾಂತರಿಸಿದೆ. 

ಬಿಜೆಪಿ ಎಂಎಲ್ಸಿ ಸಿಟಿ ರವಿ ಅವಾಚ್ಯ ಶಬ್ಧ ಬಳಸಿರುವ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬೆಳಗಾವಿಯ ಹಿರೇಬಾಗೇವಾಡಿ ಠಾಣೆಗೆ ದೂರು ನೀಡಿದ್ದರು. ಇತ್ತ ಸಿಟಿ ರವಿ ಅವರೂ ತನ್ನ ಮೇಲೆ ಹಲ್ಲೆಗೆ ಯತ್ನಿಸಿದವರ ವಿರುದ್ಧ ದೂರು ನೀಡಿದ್ದರು. ಇದೀಗ ಈ ಎರಡೂ ಪ್ರಕರಣಗಳನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ. ಇದೇ ವೇಳೆ ಪರಿಷತ್ ಕಾರ್ಯದರ್ಶಿ ನೀಡಿದ ದೂರಿನನ್ವಯ ಹಿರೇಬಾಗೆವಾಡಿ ಠಾಣೆಯಲ್ಲಿ ಹತ್ತು ಜನರ ಮೇಲೆ ದಾಖಲಾಗಿದ್ದ ಸುಮೋಟೋ ಕೇಸನ್ನೂ ವರ್ಗಾವಣೆ ಮಾಡುವ ಸಾಧ್ಯತೆಯಿದೆ.

ಇದರ ಬೆನ್ನಲ್ಲೇ ಪ್ರಕರಣದ ಬಗ್ಗೆ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಅವರು ಸಭಾಪತಿ ಬಸವರಾಜ್ ಹೊರಟ್ಟಿ, ಗೃಹ ಸಚಿವ ಡಾ.ಜಿ ಪರಮೇಶ್ವರ್ ಹಾಗೂ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ನೀಡಿದ್ದು, 7 ಪುಟಗಳ ದೂರಿನಲ್ಲಿ ಸಿಟಿ ರವಿ ಅವರು, ಸದನದಲ್ಲಿ ನಡೆದ ಘಟನೆ, ಪೊಲೀಸರು ನಡೆದುಕೊಂಡ ರೀತಿಯ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಪರಿಷತ್ ಸದಸ್ಯ ಬೋಸರಾಜ್ ಸೇರಿದಂತೆ ಹಲವರು ತನ್ನ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿದ್ದಲ್ಲದೇ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಿದ್ದಾರೆ. ಸಭಾಪತಿಗಳಿಗೆ ಕೊಟ್ಟ ದೂರಿನಲ್ಲಿ ಪೊಲೀಸರಿಂದ ಹಕ್ಕು ಚ್ಯುತಿ ಆಗಿರುವ ಬಗ್ಗೆಯೂ ಉಲ್ಲೇಖ ಮಾಡಿದ್ದು, ಜೀವ ಬೆದರಿಕೆ, ಮಾನಹಾನಿಯಾಗಿದೆ ಎಂದು ದೂರಿದ್ದಾರೆ. ಸಚಿವರ ಬೆಂಬಲಿಗರಿಂದ ಹಲ್ಲೆ ಯತ್ನ ನಡೆದ ಬಗ್ಗೆಯೂ ಉಲ್ಲೇಖ ಮಾಡಿದ್ದಾರೆ.

ಸತ್ಯ ಹೊರಬರಬೇಕು ಎಂಬುದಷ್ಟೇ ಉದ್ದೇಶ 

ಇನ್ನು ಘಟನೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿದ್ದು, ಸಿಟಿ ರವಿ ಅವರು ಲಕ್ಷ್ಮಿ ಹೆಬ್ಬಾಳ್ಕರ್​ಗೆ ಆ ರೀತಿ ಹೇಳಿಲ್ಲ ಅಂತಾರೆ. ಹೆಬ್ಬಾಳ್ಕರ್ ಪಕ್ಕದಲ್ಲಿದ್ದವರು ಆ ಮಾತು ಆಡಿದ್ದಾರೆ ಅಂತ ಹೇಳುತ್ತಾರೆ. ಈ ಎಲ್ಲಾ ವಿಚಾರಗಳ ಬಗ್ಗೆ ತನಿಖೆ ಆಗಲೆಂದು ಸಿಐಡಿ ತನಿಖೆಗೆ ಹಸ್ತಾಂತರ ಮಾಡಲಾಗಿದೆ ಎಂದಿದ್ದಾರೆ. ಗೃಹ ಇಲಾಖೆಯಲ್ಲಿ ಹಸ್ತಕ್ಷೇಪ ಕುರಿತ ಪ್ರಶ್ನೆಗೆ, ಪೊಲೀಸ್ ಇಲಾಖೆ ಜವಾಬ್ದಾರಿಯುತ ಇಲಾಖೆ. ಸಿಎಂ ಅಥವಾ ಗೃಹ ಸಚಿವರ ಆದೇಶವನ್ನು ಮಾತ್ರ ಪೊಲೀಸರು ಪಾಲನೆ ಮಾಡುತ್ತಾರೆ. ಬೇರೆ ಯಾರೇ ಆದೇಶ ಮಾಡಿದ್ರೂ ಅದನ್ನು ಪಾಲನೆ ಮಾಡಲ್ಲ. ಅವರಿವರು ಆರೋಪ ಮಾಡುತ್ತಾರೆ ಅಂತಾ ನಾವು ಇಲಾಖೆ ನಡೆಸೋಲ್ಲ. ಕಾನೂನು ಚೌಕಟ್ಟಿನಲ್ಲಿ ನಾವು ಕೆಲಸ ಮಾಡುತ್ತೇವೆ ಎಂದು ಪರಮೇಶ್ವರ್​ ಹೇಳಿದ್ರು.

Home Minister G. Parameshwar had ordered handing over the case of alleged derogatory remarks by MLC and former Minister C.T. Ravi against Karnataka’s Women and Child Development Minister Laxmi Hebbalkar to the CID for inquiry.