SIT, Munirathna, rape, honeytrap, AIDS: ಶಾಸಕ ಮುನಿರತ್ನ ಹನಿಟ್ರ್ಯಾಪ್, ಅತ್ಯಾಚಾರ, ಏಡ್ಸ್ ಸೋಂಕು ಹರಡಿಸಿದ ಕೃತ್ಯ ದೃಢ ; ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಎಸ್ಐಟಿ ಚಾರ್ಜ್ ಶೀಟ್ 

29-12-24 11:51 am       Bangalore Correspondent   ಕರ್ನಾಟಕ

ಆರ್.ಆರ್. ನಗರ ಶಾಸಕ ಮುನಿರತ್ನ ಮೇಲಿನ ಹನಿಟ್ರ್ಯಾಪ್‌ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ತನಿಖೆ ಪೂರ್ಣಗೊಳಿಸಿರುವ ಸಿಐಡಿ ಅಧಿಕಾರಿಗಳು, ಮುನಿರತ್ನ ವಿರುದ್ಧದ ಆರೋಪ ದೃಢಪಟ್ಟಿರುವುದಾಗಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ.

ಬೆಂಗಳೂರು, ಡಿ.29: ಆರ್.ಆರ್. ನಗರ ಶಾಸಕ ಮುನಿರತ್ನ ಮೇಲಿನ ಹನಿಟ್ರ್ಯಾಪ್‌ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ತನಿಖೆ ಪೂರ್ಣಗೊಳಿಸಿರುವ ಸಿಐಡಿ ಅಧಿಕಾರಿಗಳು, ಮುನಿರತ್ನ ವಿರುದ್ಧದ ಆರೋಪ ದೃಢಪಟ್ಟಿರುವುದಾಗಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ. 

ಶಾಸಕ ಮುನಿರತ್ನ ತಮ್ಮ ರಾಜಕೀಯ ವಿರೋಧಿಗಳಿಗೆ ಎಚ್‌ಐವಿ ಸೋಂಕಿತ ಹೆಣ್ಮಕ್ಕಳನ್ನು ಅಕ್ರಮ ಸಂಬಂಧಕ್ಕೆ ಕಳಿಸಿಕೊಟ್ಟು ಹನಿಟ್ರ್ಯಾಪ್‌ ಖೆಡ್ಡಾಕ್ಕೆ ಕೆಡವಿದ್ದಲ್ಲದೆ, ಅವರಿಗೆ ಏಡ್ಸ್‌ ಹರಡಿಸಲು ಯತ್ನಿಸಿರುವುದು ನಿಜ ಎಂದು ಎಸ್‌ಐಟಿ ಅಧಿಕಾರಿಗಳು ಆರೋಪ ಪಟ್ಟಿಯಲ್ಲಿ ದಾಖಲಿಸಿದ್ದಾರೆ. ನಿರಂತರ ಅತ್ಯಾಚಾರ, ಅಪಾಯಕಾರಿ ರೋಗ ಹರಡಿಸಿದ್ದಾರೆಂದ ಸಂಬಂಧಿತ ಸೆಕ್ಷನ್‌ಗಳಡಿ ಮುನಿರತ್ನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. 

ಶಾಸಕರ ದುಷ್ಕೃತ್ಯಕ್ಕೆ ನೆರವು ನೀಡಿದ್ದ ಅವರ ಸಹಚರರಾದ ಆರ್‌.ಸುಧಾಕರ್‌, ಪಿ.ಶ್ರೀನಿವಾಸ್‌ ಹಾಗೂ ಇನ್‌ಸ್ಪೆಕ್ಟರ್‌ ಬಿ.ಐಯ್ಯಣ್ಣ ರೆಡ್ಡಿ ವಿರುದ್ಧದ ಆರೋಪವೂ ತನಿಖೆಯಲ್ಲಿ ಸಾಬೀತಾಗಿದೆ. ಪ್ರಕರಣ ಸಂಬಂಧಿಸಿ 146 ಸಾಕ್ಷಿಗಳನ್ನು ಆರೋಪ ಪಟ್ಟಿಯಲ್ಲಿ ತೋರಿಸಲಾಗಿದೆ. ಈ ಪೈಕಿ 8 ಸಾಕ್ಷಿದಾರರು ಸಿಆರ್‌ಪಿಸಿ 164ರಡಿ ನ್ಯಾಯಾಧೀಶರ ಎದುರು ಹೇಳಿಕೆ ದಾಖಲಿಸಿದ್ದಾಗಿ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಸೆಪ್ಟೆಂಬರ್ 18ರಂದು 7 ಜನರ ವಿರುದ್ದ ದಾಖಲಾಗಿದ್ದ ಪ್ರಕರಣ ಸಂಬಂಧ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. 

ಮುನಿರತ್ನ ವಿರುದ್ಧ ಅತ್ಯಾಚಾರ, ಜಾತಿ ನಿಂದನೆ, ಬೆದರಿಕೆ, ಲಂಚ ಹಾಗೂ ಹನಿಟ್ರ್ಯಾಪ್‌ ಯತ್ನ ಸೇರಿದಂತೆ ರಾಮನಗರ ಜಿಲ್ಲೆಯ ಕಗ್ಗಲೀಪುರ ಮತ್ತು ಬೆಂಗಳೂರಿನ ವೈಯಾಲಿಕಾವಲ್‌ ಠಾಣೆಯಲ್ಲಿ 4 ಪ್ರತ್ಯೇಕ ಪ್ರಕರಣ ದಾಖಲಾಗಿದ್ದವು. ಪ್ರಕರಣಗಳ ತನಿಖೆಗೆ ರಾಜ್ಯ ಸರಕಾರ, ಸಿಐಡಿ ಅಧಿಕಾರಿಗಳನ್ನು ಒಳಗೊಂಡ ಎಸ್‌ಐಟಿ ರಚಿಸಿತ್ತು. ಜಾತಿನಿಂದನೆ ಮತ್ತು ಜೀವ ಬೆದರಿಕೆ ಪ್ರಕರಣಗಳಲ್ಲಿ ಎಸ್‌ಐಟಿ ನ.30ರಂದು ಆರೋಪಪಟ್ಟಿ ಸಲ್ಲಿಸಿತ್ತು. ಗುತ್ತಿಗೆದಾರನ ಬಳಿ ಲಂಚ ಕೇಳಿದ ಪ್ರಕರಣದಲ್ಲಿ ಎಸ್‌ಐಟಿ ಅಧಿಕಾರಿಗಳು ಪ್ರಾಸಿಕ್ಯೂಷನ್‌ ಅನುಮತಿಗಾಗಿ ಕಾಯುತ್ತಿದ್ದಾರೆ.

The Special Investigation Team (SIT), probing the alleged crimes of R.R. Nagar BJP MLA Munirathna, has recently chargesheeted him for rape, honey trap and attempts to infect others with AIDS.