ಶಾಸಕರ ಮನೆಗೆ ಕಲ್ಲು ತೂರಾಟ ; ಪೊಲೀಸ್ ಠಾಣೆಗೆ ನುಗ್ಗಿ ದಾಂಧಲೆ, ವಾಹನಗಳಿಗೆ ಬೆಂಕಿ, ಡಿ.ಜೆ ಹಳ್ಳಿ ಧಗಧಗ

11-08-20 05:54 pm       Headline Karnataka News Network   ಕರ್ನಾಟಕ

ಬೆಂಗಳೂರಿನ ಡಿ.ಜೆ.ಹಳ್ಳಿಯಲ್ಲಿರುವ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಕಿಡಿಗೇಡಿಗಳು ದಾಳಿ ನಡೆಸಿದ್ದಾರೆ. ಶಾಸಕರ ಮನೆಯ ಮತ್ತು ಠಾಣೆ ಎದುರು ಜನರು ಜಮಾಯಿಸಿದ್ದು, ಅಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ.

ಬೆಂಗಳೂರು, ಆಗಸ್ಟ್ 11: ಬೆಂಗಳೂರಿನ ಡಿ.ಜೆ.ಹಳ್ಳಿಯಲ್ಲಿರುವ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಕಿಡಿಗೇಡಿಗಳು ದಾಳಿ ನಡೆಸಿದ್ದಾರೆ. ಡಿ.ಜೆ ಹಳ್ಳಿ ಪೊಲೀಸ್ ಠಾಣೆಯ ಮುಂಭಾಗದಲ್ಲೇ ಘಟನೆ ನಡೆದಿದ್ದು ಉದ್ರಿಕ್ತರ ಗುಂಪು ಶಾಸಕರ ಮನೆ ಹಾಗೂ ಪೊಲೀಸ್ ವಾಹನಗಳಿಗೂ ದಾಳಿ ನಡೆಸಿದ್ದಾರೆ.

ಪುಲಕೇಶಿ ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಶಾಸಕರ ಮನೆಯ ಮತ್ತು ಠಾಣೆ ಎದುರು ಜನರು ಜಮಾಯಿಸಿದ್ದು, ಅಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ. ಠಾಣೆಯ ಮುಂದಿದ್ದ ಡಿಸಿಪಿ ಶರಣಪ್ಪ ಅವರ ಕಾರು, ಗಸ್ತು ವಾಹನವನ್ನು ಜಖಂಗೊಳಿಸಿದ್ದಾರೆ. ಕೈಯಲ್ಲಿ ರಾಡ್, ದೊಣ್ಣೆ ಹಿಡಿದು ಬಂದಿರುವ ಗುಂಪು ಆವೇಶದಿಂದ ವರ್ತಿಸುತ್ತಿದೆ. ಪೊಲೀಸರ ವಾಹನಕ್ಕೆ ಬೆಂಕಿ ಹಾಕಲಾಗಿದ್ದು ಕಿಡಿಗೇಡಿಗಳು ದಾಂಧಲೆ ನಡೆಸಿದ್ದಾರೆ. 50 ಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ ಇಕ್ಕಿದ್ದಾರೆ. ಪೊಲೀಸರು ಸೇರಿ ಹಲವರು ಘಟನೆಯಲ್ಲಿ ಗಾಯಗೊಂಡಿದ್ದಾರೆ. 

ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿಯ ಹತ್ತಿರದ ಸಂಬಂಧಿಕನೊಬ್ಬ, ಮಹಮ್ಮದ್ ಪೈಗಂಬರ್ ಬಗ್ಗೆ  ಫೇಸ್‌ ಬುಕ್ ನಲ್ಲಿ ಹಾಕಿದ್ದ ಪೋಸ್ಟ್ ಕುರಿತು ಆಕ್ರೋಶ ವ್ಯಕ್ತವಾಗಿದೆ ಎನ್ನಲಾಗ್ತಿದೆ. ಶಾಸಕರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ ಸಂದರ್ಭದಲ್ಲಿ ಡಿ. ಜೆ. ಹಳ್ಳಿ ಪೊಲೀಸರು ಸ್ಥಳಕ್ಕೆ ಬಂದಿದ್ದರು. ಬಳಿಕ ಉದ್ರಿಕ್ತ ಜನರು ಡಿ. ಜೆ. ಹಳ್ಳಿ ಪೊಲೀಸ್ ಠಾಣೆಯ ಮುಂದೆ ಬಂದು ಗಲಾಟೆ ಆರಂಭಿಸಿದ್ದಾರೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಸ್ಥಳಕ್ಕೆ ಬಂದಿದ್ದು ಹೆಚ್ಚುವರಿ ಪಡೆಯನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾರೆ.