ಬೆಂಗಳೂರು ಹಿಂಸಾಚಾರ ; ಮೂವರು ಸಾವು, 170 ಬಂಧನ, 78 ಪೊಲೀಸರಿಗೆ ಗಾಯ, ಗಲಭೆ ಹಿಂದೆ ವ್ಯವಸ್ಥಿತ ಸಂಚು ?!

12-08-20 05:57 am       Headline Karnataka News Network   ಕರ್ನಾಟಕ

ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಹೊತ್ತಿಕೊಂಡ ಹಿಂಸಾಚಾರದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಗಲಭೆ ಎಬ್ಬಿಸಿದ ಪುಂಡರ ಮೇಲೆ ಪೊಲೀಸರು ಫೈರ್ ಮಾಡಿದ್ದು ಮೂವರು ಸಾವು ಕಂಡಿದ್ದಾರೆ.

ಬೆಂಗಳೂರು, ಆಗಸ್ಟ್ 12: ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಹೊತ್ತಿಕೊಂಡ ಹಿಂಸಾಚಾರದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ರಾತ್ರೋರಾತ್ರಿ ಹಿಂಸಾಚಾರಕ್ಕಿಳಿದು ಗಲಭೆ ಎಬ್ಬಿಸಿದ ಪುಂಡರ ಮೇಲೆ ಪೊಲೀಸರು ಫೈರ್ ಮಾಡಿದ್ದು ಮೂವರು ಸಾವು ಕಂಡಿದ್ದಾರೆ. ಇದೇ ವೇಳೆ ಹೆಚ್ಚುವರಿ ಪೊಲೀಸ್ ಪಡೆ ಆಗಮಿಸಿ ಸೇರಿದ್ದ ಪುಂಡರನ್ನು ಬಂಧಿಸಿದ್ದಾರೆ. 

ಇಂದು ಬೆಳಗ್ಗೆ ಬೆಂಗಳೂರು ನಗರ ಡಿಸಿ ಶಿವಮೂರ್ತಿ ಸ್ಥಳಕ್ಕೆ ಭೇಟಿ ನೀಡಿದ್ದು 78 ರಷ್ಟು ಪೊಲೀಸರು ಗಾಯಗೊಂಡಿದ್ದಾಗಿ ಹೇಳಿದ್ದಾರೆ. ಸ್ಥಳದಲ್ಲಿ ಬಿಗು ಬಂದೋಬಸ್ತ್ ಮಾಡಲಾಗಿದ್ದು ಆಸ್ತಿಪಾಸ್ತಿ ನಷ್ಟದ ಬಗ್ಗೆ ಲೆಕ್ಕ ಹಾಕಲಾಗುತ್ತಿದೆ ಎಂದಿದ್ದಾರೆ. ಮಾಹಿತಿ ಪ್ರಕಾರ, ಪೊಲೀಸರು ಈವರೆಗೆ 170ಕ್ಕೂ ಹೆಚ್ಚು ಗಲಭೆಕೋರರನ್ನು ಬಂಧಿಸಿದ್ದಾರೆ. ಕಲ್ಲು , ದೊಣ್ಣೆ ಹಿಡಿದು ಬಂದಿದ್ದ ನೂರಾರು ಉದ್ರಿಕ್ತರು 50ಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಅಲ್ಲದೆ, ಪರಿಸರದ ಹಲವಾರು ಮನೆಗಳಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಅವಹೇಳಕಾರಿ ಫೇಸ್ಬುಕ್ ಪೋಸ್ಟ್ ಹಾಕಿದ್ದಾನೆ ಎನ್ನಲಾಗಿರುವ ನವೀನ್ ಮನೆಗೆ ದಾಳಿ ನಡೆಸಿರುವ ಪುಂಡರು, ಮನೆಗೆ ಕಲ್ಲು ತೂರಿ ಹಾನಿ ಮಾಡಿದ್ದಾರೆ. ಮನೆಯೊಳಗಿದ್ದ ಮಂದಿಗೂ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಮನೆಮಂದಿ ಪೊಲೀಸರಿಗೆ ಸಾಕ್ಷ್ಯ ಹೇಳಿದ್ದಾರೆ. ಇದೇ ವೇಳೆ ಪೊಲೀಸರು ಆರೋಪಿ ನವೀನ್ ನನ್ನು ಅರೆಸ್ಟ್ ಮಾಡಿದ್ದಾರೆ. ಈತನ ಸಂಬಂಧಿಯಾಗಿರುವ ಪುಲಕೇಶಿ ನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಯೂ ಸಾಕಷ್ಟು ಹಾನಿಯಾಗಿದೆ. ಸದ್ಯಕ್ಕೆ ಸ್ಥಳದಲ್ಲಿ 200ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಘಟನೆ ಸಂದರ್ಭದಲ್ಲಿ ಖಾಸಗಿ ವಾಹಿನಿಯ ಮಾಧ್ಯಮ ಪ್ರತಿನಿಧಿಗಳಿಗೂ ಹಲ್ಲೆ ಮಾಡಲಾಗಿದೆ. 

ಇದೇ ವೇಳೆ, ಗಲಭೆ ಹಿಂದೆ ಎಸ್ ಡಿಪಿಐ ಮತ್ತು ಕೆಎಫ್ ಡಿ ಸಂಘಟನೆಗಳ ಕೈವಾಡದ ಆರೋಪ ಕೇಳಿಬಂದಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಈ ಆರೋಪ ಮಾಡಿದ್ದು , ಘಟನೆ ಪೂರ್ವ ನಿಯೋಜಿತವಾಗಿದ್ದು ಕಲ್ಲು , ದೊಣ್ಣೆ ಹಿಡಿದು ಬಂದಿರುವುದನ್ನು ನೋಡಿದರೆ ಎಲ್ಲವೂ ಪ್ಲಾನ್ಡ್ ಆಗಿರುವಂತಿದೆ. ಪುಂಡರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ. ಅಲ್ಲದೆ, ಬಿಜೆಪಿ ಮುಖಂಡರೆಲ್ಲ ಘಟನೆ ಖಂಡಿಸಿ ಹೇಳಿಕೆ ನೀಡಿದ್ದು ಗಲಭೆ ಹಿಂದೆ ವ್ಯವಸ್ಥಿತ ಸಂಚು ಇರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. 

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಘಟನೆಯನ್ನು ಖಂಡಿಸುತ್ತೇನೆ. ಯಾವುದೇ ಧರ್ಮದ ಬಗ್ಗೆ ಅವಹೇಳನ ಮಾಡುವುದು ಸರಿಯಲ್ಲ. ಹಾಗಂತ, ಕಾನೂನು ಕೈಗೆತ್ತಿಕೊಳ್ಳುವುದೂ ಸರಿಯಲ್ಲ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಹೇಳಿಕೆ ನೀಡಿದ್ದಾರೆ. ಸದ್ಯಕ್ಕೆ ಘಟನಾ ಸ್ಥಳದಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದ್ದು , ಬೆಂಗಳೂರು ನಗರದಾದ್ಯಂತ ಸೆಕ್ಷನ್ ವಿಧಿಸಲಾಗಿದೆ.