ಅಖಂಡ ಶ್ರೀನಿವಾಸ ಮೂರ್ತಿ ಮನೆ ಪೂರ್ತಿ ಭಸ್ಮ ; ಬೀದಿಗೆ ಬಿದ್ದ ಶಾಸಕರ ಕುಟುಂಬ !

12-08-20 02:08 pm       Headline Karnataka News Network   ಕರ್ನಾಟಕ

ಡಿಜೆ ಹಳ್ಳಿ ಗಲಭೆ ಜನಸಾಮಾನ್ಯರನ್ನು ಮಾತ್ರ ಬೀದಿಗೆ ತಳ್ಳಿದ್ದಲ್ಲ. ಐಷಾರಾಮಿ ಜೀವನ ನಡೆಸುವ ಶಾಸಕರನ್ನೂ ಬೀದಿಗೆ ಬರುವಂತಾಗಿದೆ.‌ ಶ್ರೀನಿವಾಸ್‍ಮೂರ್ತಿ ಮನೆ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಒಂದೂ ವಸ್ತು ಉಳಿದಿಲ್ಲ.

ಬೆಂಗಳೂರು, ಆಗಸ್ಟ್ 12: ಡಿಜೆ ಹಳ್ಳಿ ಗಲಭೆ ಜನಸಾಮಾನ್ಯರನ್ನು ಮಾತ್ರ ಬೀದಿಗೆ ತಳ್ಳಿದ್ದಲ್ಲ. ಐಷಾರಾಮಿ ಜೀವನ ನಡೆಸುವ ಶಾಸಕರನ್ನೂ ಬೀದಿಗೆ ಬರುವಂತಾಗಿದೆ.‌ ಉದ್ರಿಕ್ತ ಗುಂಪು ಮೂರು ಅಂತಸ್ತಿನ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಯನ್ನು ಸಂಪೂರ್ಣ ಸುಟ್ಟು ಹಾಕಿದೆ. 

ಶ್ರೀನಿವಾಸ್‍ಮೂರ್ತಿ ಮನೆ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಒಂದೂ ವಸ್ತು ಉಳಿದಿಲ್ಲ. ಬಟ್ಟೆ ಸೇರಿ ಎಲ್ಲವೂ ಸುಟ್ಟು ಕರಕಲಾಗಿದೆ. ನಿನ್ನೆ ಘಟನೆ ಸಂದರ್ಭ ಹೊರಗೆ ಓಡಿ ತಪ್ಪಿಸಿಕೊಂಡಿದ್ದ ಶಾಸಕರು ಇಂದೂ ಅದೇ ಬಟ್ಟೆಯಲ್ಲಿ ಇದ್ದಾರೆ. ಇಂದು ಬೆಳಗ್ಗೆ ಅವರ ಸ್ನೇಹಿತರು ಶಾಸಕರಿಗೆ ಪ್ಯಾಂಟ್, ಶರ್ಟ್ ತಂದು ಕೊಟ್ಟಿದ್ದಾರೆ. ನಿನ್ನೆ ಮನೆಯಿಂದ ಹೊರಹೋಗುವಾಗ ಕುಟುಂಬಸ್ಥರು ಹಾಕಿಕೊಂಡಿದ್ದ ಬಟ್ಟೆ ಬಿಟ್ಟರೆ ಮನೆಯಲ್ಲಿದ್ದ ಎಲ್ಲ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಅವರ ಪತ್ನಿ, ಮಕ್ಕಳು ಸಹ ಇಂದು ಹೊಸದಾಗಿ ಬಟ್ಟೆ ಖರೀದಿಸಿ ಧರಿಸಿದ್ದಾರೆ. ಅಲ್ಲದೆ ತಾತ್ಕಾಲಿಕವಾಗಿ ನಗರದ ಖಾಸಗಿ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ.

ಮೂರು ಅಂತಸ್ತಿನ ಮನೆ ಸಂಪೂರ್ಣ ಸುಟ್ಟು  ಹೋಗಿದ್ದು, ಘಟನೆ ವೇಳೆ ಮನೆಯಲ್ಲಿ ಯಾರೂ ಇಲ್ಲದ ಕಾರಣ ಶಾಸಕರ ಕುಟುಂಬ ಪ್ರಾಣಾಪಾಯದಿಂದ ಪಾರಾಗಿದೆ. ಮನೆ ಒಳಗಿನ ಸೋಫಾ, ಟೇಬಲ್, ಕುರ್ಚಿ ಸೇರಿ ಮನೆ ಸಂಪೂರ್ಣ ಸುಟ್ಟು ಕರಕಲಾಗಿದೆ. ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆಯುವ ಮೂಲಕ ಇಡೀ ರಾತ್ರಿ ಮನೆಗೆ ಬೆಂಕಿ ಹಚ್ಚಿದ್ದರು. ಇಂದು ನೋಡಿದರೆ, ಇದು ಶಾಸಕರು ಇಷ್ಟು ದಿನ ವಾಸವಿದ್ದ ಮನೆಯೇ ಎಂಬ ಅನುಮಾನ ಮೂಡುತ್ತದೆ. ಅಷ್ಟರಮಟ್ಟಿಗೆ ಎಲ್ಲವೂ ಸುಟ್ಟು ಹೋಗಿದ್ದು ಮನೆ ಎನ್ನುವುದೇ ಗೊತ್ತಾಗುತ್ತಿಲ್ಲ. ಅಲ್ಲದೆ, ಮನೆ ಮುಂಭಾಗದಲ್ಲಿದ್ದ ವಾಹನಗಳೂ ಗುರುತು ಸಿಗದ ಹಾಗೆ ಸುಟ್ಟು ಹೋಗಿವೆ. 

ಕೇವಲ ಶಾಸಕರ ಮನೆ, ವಾಹನಗಳು ಮಾತ್ರವಲ್ಲ ಡಿಜೆ ಹಳ್ಳಿ ಪೊಲೀಸ್ ಠಾಣೆ ಸಹ ಸುಟ್ಟು ಹೋಗಿದ್ದು ಅಕ್ಷರಶಃ ನರಕ ಸೃಷ್ಟಿಯಾಗಿದೆ. ಅಲ್ಲದೆ ಸ್ಥಳೀಯರ ವಾಹನಗಳಿಗೂ ಸಹ ಬೆಂಕಿ ಹಚ್ಚಿದ್ದು, ಹಲವು ವಾಹನಗಳು ಸುಟ್ಟು ಕರಕಲಾಗಿವೆ. ಅಲ್ಲದೆ ಶಾಸಕರ ಮನೆ ಎಂದುಕೊಂಡು ಪಕ್ಕದ ಮನೆಯೊಳಗೆ ನುಗ್ಗಿ ವಸ್ತುಗಳನ್ನು ನಾಶ ಮಾಡಿದ್ದಾರೆ. ಅಲ್ಲದೆ, ಡಿಸಿಪಿ ವಾಹನ ಸೇರಿ ಪೊಲೀಸರ ಹಲವು ವಾಹನಗಳಿಗೆ ಬೆಂಕಿ ಹಚ್ಚಿ ಕಿಡಿಗೇಡಿಗಳು ವಿಕೃತಿ ಮೆರೆದಿದ್ದಾರೆ. 

ಅಖಂಡ ಶ್ರೀನಿವಾಸ ಮೂರ್ತಿ ಕುಟುಂಬ ಈ ಬಗ್ಗೆ ಮಾಧ್ಯಮ ಜೊತೆ ಮಾತನಾಡಿ, 50 ವರ್ಷಗಳಿಂದ ತಂದೆಯ ಕಾಲದಿಂದಲೂ ಬದುಕಿದ ಮನೆಯದು. ಆ ಮನೆ ಈಗ ಸುಟ್ಟು ಕರಕಲಾಗಿರುವುದನ್ನು ನೋಡಲಾಗುತ್ತಿಲ್ಲ ಎಂದು ಅಳು ತೋಡಿಕೊಂಡರು.