ಡಿ.ಜೆ ಹಳ್ಳಿ ಗಲಭೆ: ಬಿಬಿಎಂಪಿ ಪಾಲಿಕೆ ಸದಸ್ಯೆ ಪತಿ ಖಲೀಂ ಪಾಷಾ ಬಂಧನ

14-08-20 03:43 am       Headline Karnataka News Network   ಕರ್ನಾಟಕ

ಡಿ.ಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಬಿಬಿಎಂಪಿ ಪಾಲಿಕೆ ಸದಸ್ಯೆ ಇರ್ಷಾದ್ ಬೇಗಂ ಪತಿ ಖಲೀಂ ಪಾಷಾರನ್ನು ಪೊಲೀಸರು ಬಂಧಿಸಿದ್ದಾರೆ. ಖಲೀಂ ಪಾಷಾ ಗಲಭೆಗೆ ಮುನ್ನವೇ ಡಿ.ಜೆ ಹಳ್ಳಿ ಸ್ಟೇಷನ್​​ ಬಳಿ ಬಂದಿದ್ದ. ಗಲಾಟೆಗೆ ನೂರಾರು ಮಂದಿಯನ್ನು ಪ್ರಚೋದಿಸಿ ಎಸ್ಕೇಪ್​ ಆಗಿದ್ದ.

ಬೆಂಗಳೂರು, ಆಗಸ್ಟ್ 13: ಡಿ.ಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಬಿಬಿಎಂಪಿ ಪಾಲಿಕೆ ಸದಸ್ಯೆ ಇರ್ಷಾದ್ ಬೇಗಂ ಪತಿ ಖಲೀಂ ಪಾಷಾರನ್ನು ಪೊಲೀಸರು ಬಂಧಿಸಿದ್ದಾರೆ. ಗುರುವಾರ ತಡರಾತ್ರಿ ನಡೆಸಿದ ಕಾರ್ಯಾಚರಣೆ ವೇಳೆ ಬೆಂಗಳೂರು ಪೊಲೀಸರು ಖಲೀಂ ಪಾಷಾರನ್ನು ವಶಕ್ಕೆ ಪಡೆದಿದ್ದಾರೆ.

ಪಾಲಿಕೆ ಸದಸ್ಯೆ ಇರ್ಷಾದ್ ಬೇಗಂ ಪತಿ ಖಲೀಂ ಪಾಷಾ ಗಲಭೆಗೆ ಮುನ್ನವೇ ಡಿ.ಜೆ ಹಳ್ಳಿ ಸ್ಟೇಷನ್​​ ಬಳಿ ಬಂದಿದ್ದ. ಗಲಾಟೆಗೆ ನೂರಾರು ಮಂದಿಯನ್ನು ಪ್ರಚೋದಿಸಿ ಎಸ್ಕೇಪ್​ ಆಗಿದ್ದ. ಹೀಗಾಗಿ ಪ್ರಕರಣದಲ್ಲಿ ಖಲೀಂ ಪಾಷಾ ಕೂಡ ಪ್ರಮುಖ ಆರೋಪಿಯಾಗಿದ್ದ. ಗಲಭೆ ಬಳಿಕ ಖಲೀಂ ಪಾಷಾ ಪಾರಾರಿಯಾಗಿದ್ದ. ಇದೀಗ ಪೊಲೀಸರು ನಿನ್ನೆ ತಡರಾತ್ರಿ ಕಾರ್ಯಾಚರಣೆ ನಡೆಸಿ ಪಾಷಾರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಇನ್ನು, ಸಿಸಿಬಿ ಮತ್ತು ಡಿ.ಜೆ ಹಳ್ಳಿ ಪೊಲೀಸರು ರಾತ್ರಿ ಕಾರ್ಯಚರಣೆ ನಡೆಸಿದ್ದರು. ಡಿ.ಜೆ ಹಳ್ಳಿಯ ಗಲ್ಲಿ ಗಲ್ಲಿಗಳಲ್ಲಿ ಆರೋಪಿಗಳನ್ನ ಹುಡುಕಿ ಹುಡುಕಿ ಅರೆಸ್ಟ್ ಮಾಡಿದ್ದಾರೆ. ಇದುವರೆಗೂ 200ಕ್ಕೂ ಹೆಚ್ಚು ಆರೋಪಿಗಳ ಬಂಧನವಾಗಿದೆ.

ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್, ಡಿಸಿಪಿ ಕುಲ್ದೀಪ್ ಕುಮಾರ್ ಜೈನ್, ಡಿಸಿಪಿ ರವಿಕುಮಾರ್ ನೇತ್ರತ್ವದಲ್ಲಿ ಆರೋಪಿಗಳ ಬಂಧನ ಮಾಡಲಾಗಿದೆ. ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಸುಮಾರು ನೂರು ಸಿಸಿಬಿ ಪೊಲೀಸ್ ಅಧಿಕಾರಿಗಳ ತಂಡದಿಂದ ಅರೋಪಿಗಳ ರೌಂಡಪ್ ಮಾಡಿ ಬಂಧಿಸಲಾಗಿದೆ. ನಿನ್ನೆ ರಾತ್ರಿ ಮಾತ್ರ 50 ಮಂದಿ ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ.