ಡಿ.ಜೆ ಹಳ್ಳಿ ಗಲಭೆ: "ಪೋಸ್ಟ್​​ನಿಂದ ಹೀಗೆ ಗಲಭೆ ಆಗುತ್ತೇ ಎಂದು ಕೊಂಡಿರಲಿಲ್ಲ" ಎಂದ ನವೀನ್

14-08-20 06:04 am       Headline Karnataka News Network   ಕರ್ನಾಟಕ

ವಿವಾದಾತ್ಮಕ ಫೋಸ್ಟ್​​ ಹಾಕಿದ್ದು ನಾನೇ. ಈ ಪೋಸ್ಟ್​​ನಿಂದ ಹೀಗೆ ಗಲಭೆ ಆಗುತ್ತೇ ಎಂದು ಕೊಂಡಿರಲಿಲ್ಲ ಎಂದು ನವೀನ್​​​ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾಗಿ ತಿಳಿದು ಬಂದಿದೆ.

ಬೆಂಗಳೂರು, ಆಗಸ್ಟ್ 14: ಪುಲಿಕೇಶಿ ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಅಕ್ಕನ ಮಗ ನವೀನ್ ಎಂಬುವರ ಫೇಸ್​ಬುಕ್ ಖಾತೆಯಲ್ಲಿ ಮೊಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಲಾಗಿತ್ತು. ಇದರಿಂದ ಒಂದು ಕೋಮಿನ ಜನರು ರೊಚ್ಚಿಗೆದ್ದು ಮಂಗಳವಾರ ರಾತ್ರಿ ಡಿಜೆ ಹಳ್ಳಿ, ಕೆಜಿ ಹಳ್ಳಿ ಹಾಗೂ ಕಾವಲ್ ಬೈರಸಂದ್ರ ಪ್ರದೇಶಗಳಲ್ಲಿ ಗಲಭೆಗಳಾಗಿವೆ. 

ಅಂಖಡರ ಮನೆಯನ್ನ ಸುಟ್ಟುಹಾಕಿದ್ದಾರೆ. ಡಿಜೆ ಹಳ್ಳಿ ಪೊಲೀಸ್ ಠಾಣೆಯನ್ನು ಧ್ವಂಸ ಮಾಡಲಾಗಿದೆ. 2-3 ಸಾವಿರದಷ್ಟಿದ್ದ ಗಲಭೆಕೋರರು ಪೊಲೀಸ್ ವಾಹನ ಸೇರಿದಂತೆ ಸಾರ್ವಜನಿಕರ ಆಸ್ತಿಪಾಸ್ತಿಗೆ ಹಾನಿ ಮಾಡಿದ್ದಾರೆ. ಪೊಲೀಸರ ಫೈರಿಂಗ್​ನಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಇದುವರೆಗೂ 200ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇನ್ನು, ಗಲಭೆ ಪ್ರಮುಖವಾಗಿ ಕಾರಣವಾದ ಆರೋಪಿ ನವೀನ್​​​​ನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಪೂರ್ವ ವಿಭಾಗದ ವಿಶೇಷ ತಂಡದಿಂದ ನಡೆದ ವಿಚಾರಣೆ ವೇಳೆ ನವೀನ್​​ ತನ್ನ ತಪ್ಪು ಒಪ್ಪಿಕೊಂಡಿದ್ದಾರೆ.

ವಿವಾದಾತ್ಮಕ ಫೋಸ್ಟ್​​ ಹಾಕಿದ್ದು ನಾನೇ. ಈ ಪೋಸ್ಟ್​​ನಿಂದ ಹೀಗೆ ಗಲಭೆ ಆಗುತ್ತೇ ಎಂದು ಕೊಂಡಿರಲಿಲ್ಲ ಎಂದು ನವೀನ್​​​ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾಗಿ ತಿಳಿದು ಬಂದಿದೆ. ಹಾಗೆಯೇ ತಾನೇ ಖುದ್ದು ಈ ಪೋಸ್ಟ್​​ ಡಿಲೀಟ್​ ಮಾಡಿರುವುದಾಗಿ ನವೀನ್​​ ಹೇಳಿದ್ದಾನೆ.