ಕೊರೋನಾದಿಂದ ಮೃತಪಟ್ಟ ವಾರಿಯರ್ಸ್​ಗಳಿಗೆ 30 ಲಕ್ಷ ರೂ. ಪರಿಹಾರ

15-08-20 11:53 am       Headline Karnataka News Network   ಕರ್ನಾಟಕ

74ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ಮಾಡಿದ ಸಿಎಂ ಯಡಿಯೂರಪ್ಪ, ಕೊರೋನಾದಿಂದ ಮೃತಪಟ್ಟ ವಾರಿಯರ್ಸ್​ಗಳಿಗೆ 30 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಬೆಂಗಳೂರು, ಆಗಸ್ಟ್ 15: ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ಮಾಡಿದ ಸಿಎಂ ಯಡಿಯೂರಪ್ಪ, ಕೊರೋನಾದಿಂದ ಮೃತಪಟ್ಟ ವಾರಿಯರ್ಸ್​ಗಳಿಗೆ 30 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಲಾಕ್​ಡೌನ್​ನಿಂದ ಸಂಕಷ್ಟಕ್ಕೆ ಒಳಗಾದ ವಿವಿಧ ಕ್ಷೇತ್ರಗಳಿಗೆ 3,187 ಕೋಟಿ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಕೊರೋನಾ ನಿಯಂತ್ರಣಕ್ಕೆ ಶ್ರಮಿಸಿದ ಎಲ್ಲರನ್ನೂ ನಾನು ಸ್ಮರಿಸುತ್ತೇನೆ ಎಂದಿದ್ದಾರೆ. ಕರ್ನಾಟಕದಲ್ಲಿ ಕೊರೊನಾ ಮಧ್ಯೆ ಎಸ್‍ಎಸ್‍ಎಲ್‍ಸಿ ಯಶಸ್ವಿಯಾಗಿ ನಡೆಸಲಾಗಿದೆ. ನಮ್ಮ ಮಾದರಿಯನ್ನ ಕೇಂದ್ರ ಹಾಗೂ ಅನೇಕ ರಾಜ್ಯಗಳು ಅನುಸರಿಸಿವೆ. ಸಿಇಟಿ ಪರೀಕ್ಷೆಯಲ್ಲಿ ಕೊರೊನಾ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅವಕಾಶ ಕೊಡಲಾಗಿದೆ. ವಿದ್ಯಾರ್ಥಿಗಳಿಗೆ ಆನ್‍ಲೈನ್ ಶಿಕ್ಷಣ ನೀಡಲು ಅಗತ್ಯ ಕ್ರಮವಹಿಸಿದೆ. ಜೊತೆಗೆ ವಿದ್ಯಾಗಮ ವಿಶೇಷ ಕಾರ್ಯಕ್ರಮ ಜಾರಿ ಮಾಡಿದೆ ಎಂದರು.

ಎಲ್ಲಾ ಜಿಲ್ಲೆಯಲ್ಲಿ ಕೇರ್ ಸೆಂಟರ್ ಸ್ಥಾಪನೆ, ಫೀವರ್ ಕ್ಲೀನಿಕ್ ಸ್ಥಾಪನೆ ಮಾಡಲಾಗಿದೆ. ಕ್ವಾರಂಟೇನ್ ವ್ಯವಸ್ಥೆ ಮಾಡಿದ್ದೇವೆ. ಆಯುಷ್ಮಾನ್ ಭಾರತ್ ಅಡಿ 1.31 ಕೋಟಿ ಜನರಿಗೆ ಕಾರ್ಡ್ ವಿತರಿಸಲಾಗಿದೆ. 1,694 ಕೋಟಿ ವೆಚ್ಚದಲ್ಲಿ 8.5 ಲಕ್ಷ ಫಲಾನುಭವಿಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.

ಕೊರೊನಾ ಹಿನ್ನೆಲೆಯಲ್ಲಿ ಕಾರ್ಮಿಕರು, ಕ್ಷೌರಿಕ, ಆಟೋ ಚಾಲಕರು ಸೇರಿದಂತೆ ದುರ್ಬಲ ವರ್ಗದವರಿಗೆ 3,187 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಕೊರೊನಾ ವಾರಿಯರ್ಸ್ ಮತ್ತು ಸರ್ಕಾರೇತರ ಸಂಸ್ಥೆಗಳು, ಉದ್ಯಮಿಗಳನ್ನ ಸಿಎಂ ನೆನಪಿಸಿಕೊಂಡರು.

ಕಿಸಾನ್ ಸಮ್ಮಾನ್ ಯೋಜನೆಗೆ 6 ಸಾವಿರದ ಜೊತೆ ರಾಜ್ಯ ಸರ್ಕಾರ 4 ಸರ್ಕಾರ ನೀಡುತ್ತಿದೆ. ಮೊದಲ ಕಂತು 2 ಸಾವಿರ ಈಗಾಗಲೇ ಬಿಡುಗಡೆ ಮಾಡಿದೆ. 50 ಲಕ್ಷ ರೈತರಿಗೆ ಹಣ ತಲುಪಿದೆ. ಇನ್ನೂ 10 ಲಕ್ಷ ರೈತರಿಗೆ 6,500 ಕೋಟಿ ಬೆಳೆ ಸಾಲ ನೀಡಲಾಗಿದೆ. 2020-21 ನೇ ಸಾಲಿಗೆ 14.50 ಸಾವಿರ ಕೋಟಿ ಬೆಳೆ ಸಾಲ ನೀಡುವ ಗುರಿ ಸರ್ಕಾರ ಹೊಂದಿದೆ. ಹೆಸರುಕಾಳು, ತೊಗರಿ, ಶೆಂಗಾ, ಕಡಲೇಕಾಳು, ಕೊಬ್ಬರಿಗೆ ಸೇರಿದಂತೆ ಹಲವು ಬೆಳೆಗೆ 3,175 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ಸಿಎಂ ಯಡಿಯೂರಪ್ಪ ಕೊರೊನಾದಿಂದ ಗುಣಮುಖರಾದ ಬಳಿಕ ಮೊದಲ ಕಾರ್ಯಕ್ರಮ ಇದಾಗಿದ್ದು, ಸಿಎಂಗಾಗಿ ವಿಶೇಷವಾಗಿ ವೇದಿಕೆ ಸಿದ್ಧತೆ ಮಾಡಲಾಗಿತ್ತು. ವೇದಿಕೆಗೆ ಸೋಂಕು ತಡೆ ಪರದೆ(ಫೇಸ್ ಶೀಲ್ಡ್ ಪರದೆ) ಅಳವಡಿಕೆ ಮಾಡಲಾಗಿತ್ತು. ಸಿಎಂ ಆಗಮನದಿಂದ ಧ್ವಜಾರೋಹಣ ಮಾಡೋವರೆಗೂ ಪರದೆ ಅಳವಡಿಕೆ ಮಾಡಲಾಗಿತ್ತು. ಅಲ್ಲದೇ ವೇದಿಕೆ ಮೇಲೆ ಮೂವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಜೊತೆಗೆ ಪ್ರತ್ಯೇಕ ಆಸನ ವ್ಯವಸ್ಥೆ ಹಾಗೂ ಪ್ರತಿ ಆಸನಕ್ಕೆ ಫೇಸ್‍ಶೀಲ್ಡ್ ಪರದೆಯನ್ನು ಅಳವಡಿಕೆ ಮಾಡಲಾಗಿತ್ತು.

ಅಯೋಧ್ಯೆಯಲ್ಲಿ ಕರ್ನಾಟಕ ಯಾತ್ರಿ ನಿವಾಸ ನಿರ್ಮಾಣ ಮಾಡಲಾಗುತ್ತದೆ ಎಂದು ಸಿಎಂ ಘೋಷಣೆ ಮಾಡಿದರು.