ಬ್ರಹ್ಮಗಿರಿ ಬೆಟ್ಟ ಕುಸಿತ; 10 ದಿನಗಳ ನಂತರ ಮೂರನೇ ಮೃತದೇಹ ಪತ್ತೆ

15-08-20 05:40 pm       Headline Karnataka News Network   ಕರ್ನಾಟಕ

ತಲಕಾವೇರಿಯ ಗುಡ್ಡ ಕುಸಿತ ಪ್ರಕರಣದಲ್ಲಿ ಭೂ ಸಮಾಧಿಯಾಗಿದ್ದ ಐವರ ಪೈಕಿ ಮತ್ತೊಬ್ಬರ ಮೃತ ದೇಹ ಇಂದು ಪತ್ತೆ ಆಗಿದೆ. ಈಗ ಸಿಕ್ಕಿರುವ ಮೃತ ದೇಹ ಕೊಳೆತ ಸ್ಥಿತಿಯಲ್ಲಿದ್ದು, ಇನ್ನೂ ಗುರುತು ಪತ್ತೆ ಆಗಿಲ್ಲ.

ಮಡಿಕೇರಿ, ಆಗಸ್ಟ್‌ 15: ತಲಕಾವೇರಿಯ ಗುಡ್ಡ ಕುಸಿತ ಪ್ರಕರಣದಲ್ಲಿ ಭೂ ಸಮಾಧಿಯಾಗಿದ್ದ ಐವರ ಪೈಕಿ ಮತ್ತೊಬ್ಬರ ಮೃತ ದೇಹ ಇಂದು ಪತ್ತೆ ಆಗಿದೆ.

ಕಳೆದ ಹತ್ತು ದಿನಗಳಿಂದಲೂ ಎನ್‌ಡಿಆರ್ ‌ಎಫ್‌ ಹಾಗೂ ಇತರ ಸಿಬ್ಬಂದಿ ಮೂರು ಹಿಟಾಚಿ ಬಳಸಿ ಮೃತ ದೇಹ ಮೇಲೆತ್ತಲು ಕಾರ್ಯಾಚರಣೆ ನಡೆಸುತ್ತಿದ್ದರು. ಈಗಾಗಲೇ ತಲಕಾವೇರಿ ಪ್ರಧಾನ ಅರ್ಚಕರಾದ ನಾರಾಯಣ ಆಚಾರ್‌ ಮತ್ತು ಅವರ ಸಹೋದರ ಆನಂದ ತೀರ್ಥ ಅವರ ಮೃತ ದೇಹಗಳು ಪತ್ತೆ ಆಗಿದ್ದವು. ಈಗ ಸಿಕ್ಕಿರುವ ಮೃತ ದೇಹ ಕೊಳೆತ ಸ್ಥಿತಿಯಲ್ಲಿದ್ದು, ಇನ್ನೂ ಗುರುತು ಪತ್ತೆ ಆಗಿಲ್ಲ.

ಕಾರ್ಯಾಚರಣೆ ಸ್ಥಳದಲ್ಲಿ ನಾರಾಯಣ ಆಚಾರ್ ಅವರ ಪುತ್ರಿಯರಾದ ಶಾರದಾ ಮತ್ತು ನಮಿತ ಕೂಡ ಇದ್ದಾರೆ. ಸಚಿವ ಸೋಮಣ್ಣ, ಸಂಸದ ಪ್ರತಾಪ್ ಸಿಂಹ, ಶಾಸಕ ಕೆ. ಜಿ. ಬೋಪಯ್ಯ, ಅಪ್ಪಚ್ಚು ರಂಜನ್, ಸುಬ್ರಮಣಿ, ಜಿಲ್ಲಾಧಿಕಾರಿ ಅನೀಶ್ ಕಣ್ಮಣಿ ಜಾಯ್, ಪೊಲೀಸ್ ವರಿಷ್ಠಾಧಿಕಾರಿ ಕ್ಷಮ ಮಿಶ್ರ ಅವರು ಇಂದು ಸ್ಥಳಕ್ಕೆ ಭೇಟಿ ನೀಡಿದ್ದರು. ಈ ಪ್ರದೇಶದಲ್ಲಿ ದಟ್ಟ ಮಂಜು ಮತ್ತು ಮಳೆ ಬೀಳುತ್ತಿರುವುದರಿಂದ ಕಾರ್ಯಾಚರಣೆಗೆ ಅಡ್ಡಿ ಆಗಿದೆ.