ಬಾರ್‌ಗಳಿಗೆ ಅನುಮತಿ ಇದೆ, ಗಣೇಶೋತ್ಸವಕ್ಕೆ ಯಾಕಿಲ್ಲ? ಸರ್ಕಾರಕ್ಕೆ ಮುತಾಲಿಕ್‌ 24 ಗಂಟೆ ಟೈಮ್

17-08-20 06:33 pm       Headline Karnataka News Network   ಕರ್ನಾಟಕ

ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಸರ್ಕಾರಕ್ಕೆ 24 ಗಂಟೆಗಳ ಗಡುವು ನೀಡಿದ್ದು, ಸಾರ್ವಜನಿಕ ಉತ್ಸವಕ್ಕೆ ಅವಕಾಶ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಧಾರವಾಡ, ಆಗಸ್ಟ್ 17: ಕರೊನಾ ಹಾವಳಿ ಕ್ಷಣಕ್ಷಣಕ್ಕೂ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ನೀಡಿದರೆ ಪರಿಸ್ಥಿತಿ ಮಿತಿಮೀರಬಹುದು ಎನ್ನುವ ಕಾರಣಕ್ಕೆ ರಾಜ್ಯ ಸರ್ಕಾರ ಸಾರ್ವಜನಿಕ ಗಣೇಶೋತ್ಸವ ಆಚರಣೆಯನ್ನು ನಿಷೇಧಿಸಿದೆ.

ಇದಕ್ಕೆ ಕಿಡಿಕಾರಿರುವ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಸರ್ಕಾರಕ್ಕೆ 24 ಗಂಟೆಗಳ ಗಡುವು ನೀಡಿದ್ದು, ಸಾರ್ವಜನಿಕ ಉತ್ಸವಕ್ಕೆ ಅವಕಾಶ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಧಾರವಾಡದಲ್ಲಿ ಪ್ರತಿಭಟನೆ ನಡೆಸಿರುವ ಅವರು, ‘ಮುಂಬೈನಲ್ಲಿ ಕೂಡ ಕರೊನಾ ಹಾವಳಿ ಹೆಚ್ಚಾಗಿದೆ. ಆದರೆ ಅಲ್ಲಿ ಕೂಡ ಕೆಲವೊಂದು ಷರತ್ತುಗಳನ್ನು ವಿಧಿಸಿ, ಸಾರ್ವಜನಿಕ ಉತ್ಸವಕ್ಕೆ ಅನುಮತಿ ನೀಡಲಾಗಿದೆ. ಮಹಾರಾಷ್ಟ್ರ ಸರ್ಕಾರ ಗಣೇಶ ಹಬ್ಬ ಆಚರಣೆಗೆ ಜೂನ್‍ನಲ್ಲೆ ಅನುಮತಿ ಕೊಟ್ಟಿದೆ. ಕರ್ನಾಟಕದಲ್ಲಿ ಏಕೆ ಕೊಟ್ಟಿಲ್ಲಿ ಎಂದು ಪ್ರಶ್ನಿಸಿದ್ದಾರೆ.

ಬಾರ್‌ಗಳಿಗೆ ಕರ್ನಾಟಕದಲ್ಲಿ ಅನುಮತಿ ನೀಡಲಾಗಿದೆ. ಜನರು ಕುಡಿದು ಸತ್ತರೂ ಅಡ್ಡಿಲ್ಲ, ರಾಜ್ಯದ ಬೊಕ್ಕಸಕ್ಕೆ ಹಣ ಆಗಬೇಕೆಂದರೆ ಬಾರ್‌ಗಳು ತೆರೆಯಬೇಕು ಎಂದು ಅದನ್ನು ತೆರೆಯಲು ಅನುಮತಿ ನೀಡಲಾಗಿದೆ. ಬಾರ್‌ಗಳಿಗೆ ನೀಡಿರುವ ಅನುಮತಿಯನ್ನು ಗಣೇಶನಿಗೆ ಏಕೆ ಕೊಡುತ್ತಿಲ್ಲ ಎಂದು ಕಿಡಿ ಕಾರಿದರು.

ನಾನು ಜೈಲಿಗೆ ಹೋಗಲು ಸಿದ್ದ, ಗಣಪತಿ ಸಮೇತ ನಮ್ಮನ್ನು ಜೈಲಿಗೆ ಹಾಕಲಿ, ನಾವು ಮತ ಹಾಕಿ ರಾಜ್ಯದಲ್ಲಿ ಸರ್ಕಾರ ತಂದಿದ್ದೇವೆ. ಗಣಪತಿ ಕೂಡಿಸಲು ಅನುಮತಿ ಕೊಡಲಿಲ್ಲ ಎಂದರೆ ಏನರ್ಥ ಎಂದು ಹೇಳಿರುವ ಅವರು, 24 ಗಂಟೆ ಒಳಗೆ ಅನುಮತಿ ನೀಡಲೇಬೇಕು ಎಂದು ಮುತಾಲಿಕ್ ತಿಳಿಸಿದ್ದಾರೆ.