ಸ್ವಲ್ಪ ಬಾಯಿ ಮುಚ್ಚಿಕೊಂಡಿದ್ರೆ ರಾಜಕೀಯ ಗೊಂದಲ ಸರಿಹೋಗುತ್ತದೆ ; ಸ್ವಪಕ್ಷೀಯರಿಗೆ ಸಚಿವ ಈಶ್ವರಪ್ಪ ಟಾಂಗ್

21-07-21 05:32 pm       Headline Karnataka News Network   ಕರ್ನಾಟಕ

ಸಿಎಂ ಬದಲಾವಣೆ ಹಾಗೂ ರಾಜಕೀಯ ಗೊಂದಲಗಳ ಬಗ್ಗೆ ಯಾರೂ ಮಾತನಾಡದೆ ದೂರ ನಿಂತರೆ ಸ್ವಲ್ಪ ದಿನಗಳಲ್ಲಿ ಎಲ್ಲವೂ ಸರಿ ಹೋಗುತ್ತದೆ ಎಂದು ಕೆ.ಎಸ್. ಈಶ್ವರಪ್ಪ ತಮ್ಮ ಪಕ್ಷದವರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ. 

ಶಿವಮೊಗ್ಗ, ಜುಲೈ 21 : ಸಿಎಂ ಬದಲಾವಣೆ ಹಾಗೂ ರಾಜಕೀಯ ಗೊಂದಲಗಳ ಬಗ್ಗೆ ಯಾರೂ ಮಾತನಾಡದೆ ದೂರ ನಿಂತರೆ ಸ್ವಲ್ಪ ದಿನಗಳಲ್ಲಿ ಎಲ್ಲವೂ ಸರಿ ಹೋಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ತಮ್ಮ ಪಕ್ಷದವರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ. 
 
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಏನು ಮಾಡಬೇಕೆಂದು ರಾಷ್ಟ್ರೀಯ ನಾಯಕರು ಒಂದು ತೀರ್ಮಾನ ತೆಗೆದುಕೊಂಡಿದ್ದರು‌. ಪಕ್ಷದ ರಾಷ್ಟ್ರೀಯ ನಾಯಕ ಅರುಣ್ ಸಿಂಗ್ ಬಂದು ಎಲ್ಲರ ಅಭಿಪ್ರಾಯ ಪಡೆದು ರಾಷ್ಟ್ರೀಯ ನಾಯಕರ ಗಮನಕ್ಕೆ ತಂದರೂ ಒಬ್ಬಿಬ್ಬರು ಮಾತನಾಡುವುದು ಸರಿಯಲ್ಲ. ಇದು ಸರ್ಕಾರಕ್ಕೂ ಮತ್ತು ಪಕ್ಷಕ್ಕೂ ಒಳ್ಳೆಯದಲ್ಲ. ಹೈಕಮಾಂಡ್​ ತೀರ್ಮಾನಕ್ಕೆ ನಾವು ಬದ್ಧ ಎಂದರು.

ನಿನ್ನೆ ಅನೇಕ ಸ್ವಾಮೀಜಿಗಳು ಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡಿದ್ದರು. ಈ ವೇಳೆ ಕೇಂದ್ರೀಯ ನಾಯಕರು ತೆಗೆದುಕೊಂಡ ತೀರ್ಮಾನಕ್ಕೆ ಬದ್ಧ ಅಂತಾ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಇದರಿಂದ ಯತ್ನಾಳ್ ಸೇರಿದಂತೆ ಯಾರು ಮಾತನಾಡದೆ ಬಾಯಿ ಮುಚ್ಚಿಕೊಂಡು ಇದ್ದರೆ ಎಲ್ಲವೂ ಸರಿಯಾಗುತ್ತದೆ. ಇದು ರಾಜ್ಯದ ಹಿತಕ್ಕೆ ಅನುಕೂಲವಾಗುತ್ತದೆ ಎಂದು ಸಚಿವ ಈಶ್ವರಪ್ಪ ಹೇಳಿದ್ರು.

ಎರಡು ವರ್ಷದ ಸಾಧನೆಯ ಬಗ್ಗೆ ರಾಜ್ಯದ ಜನ ಸಂತೋಷಗೊಂಡಿದ್ದಾರೆ. ಹಿಂದೆ ಎಂದೂ ಆಗದಷ್ಟು ಅಭಿವೃದ್ಧಿ ಕಾರ್ಯಗಳು ಆಗಿವೆ. ಸ್ವಲ್ಪ ರಾಜಕೀಯ ಗೊಂದಲಗಳಿರುವುದರಿಂದ ಅಭಿವೃದ್ಧಿ ಕಾರ್ಯಗಳು ರಾಜ್ಯದ ಜನತೆಗೆ ಮರೆತ ರೀತಿ ಆಗುತ್ತದೆ. ಆದ್ದರಿಂದ ಎರಡು ವರ್ಷದಲ್ಲಿ ಏನೇನು ಅಭಿವೃದ್ಧಿ ಕಾರ್ಯ ಮಾಡಿದ್ದೇವೆ ಅಂತ ತೋರಿಸಲು ಬ್ಯಾಂಕ್ವೆಟ್ ಹಾಲ್​ನ​ಲ್ಲಿ ಕಾರ್ಯಕ್ರಮವನ್ನು‌ ಸೋಮವಾರ ನಡೆಸುತ್ತೇವೆ. ಹಿಂದಿನ ದಿನ ಭಾನುವಾರ ಸಿಎಂ, ಶಾಸಕರಿಗೆ ಸಂತೋಷಕೂಟ ಇಟ್ಟುಕೊಂಡಿದ್ದಾರೆ ಎಂದು ತಿಳಿಸಿದರು.