ಹಾನಗಲ್ ಚುನಾವಣೆ ; ತೀವ್ರ ಚಿಂತೆಗೆ ಬಿದ್ದ ಸಿಎಂ ಬೊಮ್ಮಾಯಿ, ಮತದಾನಕ್ಕೆ ಮೊದಲೇ ಬಿಜೆಪಿ ಪಾಳಯಕ್ಕೆ ವ್ಯತಿರಿಕ್ತ ಸುಳಿವು !?

26-10-21 09:47 pm       Headline Karnataka News Desk   ಕರ್ನಾಟಕ

ಸಿಎಂ ತವರು ಕ್ಷೇತ್ರ ಆಗಿದ್ದರೂ, ಹಾನಗಲ್ ನಲ್ಲಿ ಈ ಬಾರಿ ಬಿಜೆಪಿಗೆ ಕಷ್ಟ ಇದೆ ಎಂಬ ಸುಳಿವು ಒಳಗಿನಿಂದ ಬಂದಿದ್ದು, ಬೊಮ್ಮಾಯಿ ತಲೆಯನ್ನು ಚಿಟ್ಟುಹಿಡಿಸಿದೆ.

ಬೆಂಗಳೂರು, ಅ.26: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲಿಗೆ ಈ ಬಾರಿಯ ಹಾನಗಲ್ ಉಪ ಚುನಾವಣೆ ತೀವ್ರ ಚಿಂತೆಗೆ ಕಾರಣವಾಗಿದೆ. ಒಂದೆಡೆ ಸಿಎಂ ತವರು ಕ್ಷೇತ್ರ ಆಗಿದ್ದರೂ, ಹಾನಗಲ್ ನಲ್ಲಿ ಈ ಬಾರಿ ಬಿಜೆಪಿಗೆ ಕಷ್ಟ ಇದೆ ಎಂಬ ಸುಳಿವು ಒಳಗಿನಿಂದ ಬಂದಿದ್ದು, ಬೊಮ್ಮಾಯಿ ತಲೆಯನ್ನು ಚಿಟ್ಟುಹಿಡಿಸಿದೆ.

ಹಾನಗಲ್ ಮೊದಲಿನಿಂದಲೂ ಸಿ.ಎಂ. ಉದಾಸಿಯವರ ಕ್ಷೇತ್ರ. ಮೇಲಾಗಿ ಲಿಂಗಾಯತ ಪ್ರಾಬಲ್ಯದ ಕಣ. ಈ ಬಾರಿ ಹಾವೇರಿ ಜಿಲ್ಲೆಯವರೇ ಆಗಿರುವ ಬಸವರಾಜ ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ. ಆದರೆ, ಸಿಎಂ ಗಾದಿಗೇರಿದ ಮೂರೇ ತಿಂಗಳಲ್ಲಿ ತಮ್ಮದೇ ಜಿಲ್ಲೆಯಲ್ಲಿ ಸಿಎಂ ಉದಾಸಿ ನಿಧನದಿಂದ ತೆರವಾಗಿರುವ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಗಿದೆ. ಮುಖ್ಯಮಂತ್ರಿ ಜಿಲ್ಲೆಯಲ್ಲೇ ಚುನಾವಣೆ ನಡೆಯುತ್ತಿರುವುದರಿಂದ ಬೊಮ್ಮಾಯಿ ಪ್ರಾಬಲ್ಯ, ವರ್ಚಸ್ಸು ಪಣಕ್ಕೊಡ್ಡಲೇಬೇಕಾದ ಅನಿವಾರ್ಯತೆ. ಆದರೆ, ಈ ಬಾರಿ ಅಲ್ಲಿನ ಕೆಲವು ಒಳಸುಳಿಗಳೇ ಬೊಮ್ಮಾಯಿ ಪಾಲಿಗೇ ತಿರುಗುಬಾಣವಾಗುತ್ತಾ ಅನ್ನುವ ಚರ್ಚೆ ಬಿಜೆಪಿ ನಾಯಕರನ್ನು ಆತಂಕಕ್ಕೆ ದೂಡಿದೆ.

ಸಿಎಂ ಉದಾಸಿಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ಘೋಷಣೆಯಾದಾಗಲೇ ಅವರ ಪತ್ನಿ ಅಥವಾ ಕುಟುಂಬಸ್ಥರಿಗೆ ಟಿಕೆಟ್ ನೀಡಬೇಕೆಂಬ ಆಗ್ರಹ ಕೇಳಿಬಂದಿತ್ತು. ಆದರೆ, ಉದಾಸಿ ಪುತ್ರ ಶಿವಕುಮಾರ್ ಉದಾಸಿ ಈಗಾಗ್ಲೇ ಜಿಲ್ಲೆಯ ಸಂಸದ ಆಗಿರುವುದರಿಂದ ಕುಟುಂಬದ ಮತ್ತೊಬ್ಬರಿಗೆ ಟಿಕೆಟ್ ಕೊಡುವುದು ಬೇಡವೆಂದು ನಿರ್ಧರಿಸಿದ ಬಿಜೆಪಿ ಹೈಕಮಾಂಡ್, ಶಿವಕುಮಾರ್ ಸಜ್ಜನ ಎಂಬ ಮತ್ತೊಬ್ಬ ಸಜ್ಜನ ವ್ಯಕ್ತಿಯನ್ನು ಕಣಕ್ಕಿಳಿಸಿತ್ತು. ಆದರೆ, ಮೇಲಿನವರು ಏನೇ ಬಯಸಿದರೂ ಒಳ ರಾಜಕೀಯ ಬೇರೆಯೇ ಇರುತ್ತದೆ. ಕ್ಷೇತ್ರದಲ್ಲಿ ಮತ್ತೊಬ್ಬರನ್ನು ಶಾಸಕರನ್ನಾಗಿಸಿದರೆ ತಮ್ಮ ಹಿಡಿತ ಬಿಟ್ಟು ಹೋಗುತ್ತದೆ ಅನ್ನುವ ಭಯ ಮತ್ತು ದೂರಾಲೋಚನೆ ಉದಾಸಿ ಕುಟುಂಬಕ್ಕಿದೆ. ಹೀಗಾಗಿ ಈ ಬಾರಿಯ ಚುನಾವಣೆ ಬಗ್ಗೆ ಕುಟುಂಬಸ್ಥರು ಅಷ್ಟೊಂದು ಆಸಕ್ತಿ ವಹಿಸಿಲ್ಲ ಎನ್ನಲಾಗುತ್ತಿದೆ.

ಈ ಬಾರಿ ಚುನಾವಣೆ ಸೋತರೆ, ಮುಂದಿನ ಬಾರಿ ಶಿವಕುಮಾರ್ ಉದಾಸಿಯನ್ನೇ ಶಾಸಕ ಸ್ಥಾನಕ್ಕೆ ನಿಲ್ಲಿಸಿ ಗೆದ್ದುಬರುವ ದುರಾಲೋಚನೆ ಕುಟುಂಬದ್ದು ಅನ್ನುವ ಮಾತುಗಳಿವೆ. ಶಿವಕುಮಾರ್ ಸಜ್ಜನ ಗೆದ್ದು ಬಂದರೆ, ಕ್ಷೇತ್ರದಲ್ಲಿ ಅವರೇ ಮುಂದಿನ ಬಾರಿಯೂ ಶಾಸಕರಾಗಿ ಮುಂದುವರಿಯುತ್ತಾರೆ ಮತ್ತು ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೇರಿದರೆ ಸಚಿವರಾಗಿ ಪ್ರಭಾವ ಬೆಳೆಸಿಕೊಳ್ಳುತ್ತಾರೆ ಎಂಬ ಅಂಜಿಕೆಯೂ ಇದೆ. ಹೀಗಾಗಿ ಕುಟುಂಬಸ್ಥರು ಈ ಚುನಾವಣೆ ಬಗ್ಗೆ ಸ್ವಲ್ಪ ಸೈಲಂಟ್ ಆಗಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಉದಾಸಿ ಕುಟುಂಬಸ್ಥರ ಒಳಗಿನ ಅಸಹನೆಯನ್ನು ತಿಳಿದುಕೊಂಡ ಸಿಎಂ ಬೊಮ್ಮಾಯಿ ಮಂಗಳವಾರ ಸ್ವತಃ ಅವರ ಮನೆಗೆ ತೆರಳಿ, ಮನವೊಲಿಕೆ ಕಾರ್ಯ ಮಾಡಿದ್ದಾರೆ. ಒಂದು ಗಂಟೆಗೂ ಹೆಚ್ಚು ಕಾಲ ಕುಟುಂಬಸ್ಥರ ಜೊತೆ ಖುದ್ದಾಗಿ ಮಾತುಕತೆಯನ್ನೂ ನಡೆಸಿದ್ದಾರೆ.  

ಕೈಕೊಡುತ್ತಾ ಪೆಟ್ರೋಲ್ ಬೆಲೆಯೇರಿಕೆ ?

ಇದಲ್ಲದೆ, ಈ ಬಾರಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯೂ ಜನರನ್ನು ಬಿಜೆಪಿಯಿಂದ ವಿಮುಖವಾಗಿಸಿದೆ ಎನ್ನುವ ಮಾಹಿತಿಗಳಿವೆ. ಎಷ್ಟಾದರೂ, ಅತ್ಯಂತ ಸಾಮಾನ್ಯ ಮತ್ತು ಮಧ್ಯಮ ವರ್ಗದ ಜನರೇ ಹೆಚ್ಚಿರುವ ಹಾನಗಲ್ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ನಾಯಕರು ಭಾರೀ ವರ್ಕೌಟ್ ಮಾಡಿದ್ದಾರೆ. ಬೆಲೆಯೇರಿಕೆಯನ್ನೇ ಚುನಾವಣಾ ವಿಷಯವಾಗಿಸಿದ್ದು, ಪ್ರಚಾರದಲ್ಲಿ ಅದನ್ನೇ ಇಷ್ಯು ಮಾಡಿದ್ದಾರೆ. ಇದನ್ನು ಸಮರ್ಥಿಸಿಕೊಳ್ಳಲು ಬಿಜೆಪಿ ನಾಯಕರು ಕಸರತ್ತು ನಡೆಸಿದರೂ, ಜನರನ್ನು ಪ್ರಭಾವಿಸಲು ವಿಫಲರಾಗಿದ್ದಾರೆ. ಇನ್ನು ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಮರಾಠ ಸಮುದಾಯದ ವ್ಯಕ್ತಿಯೇ ಆಗಿದ್ದರೂ, ಕಳೆದ ಬಾರಿ ಕಡಿಮೆ ಅಂತರದಿಂದ ಉದಾಸಿ ವಿರುದ್ಧ ಸೋಲುಂಡಿದ್ದವರು. ಲಿಂಗಾಯತರನ್ನು ಬಿಟ್ಟರೆ, ಮುಸ್ಲಿಮ್ ಮತ್ತು ಕುರುಬರ ಮತಗಳು ಕ್ಷೇತ್ರದಲ್ಲಿ ಪ್ರಬಲ ಮತಬ್ಯಾಂಕ್. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಕ್ಕಿಳಿಸಿದ ವಿಚಾರ ಮತ್ತು ಪಂಚಮಸಾಲಿ ಮಠಗಳ ಸ್ವಾಮೀಜಿಗಳು, ನಾಯಕರು ಮೀಸಲಿಗಾಗಿ ಹೋರಾಟ ನಡೆಸುತ್ತಿರುವುದು ಬಿಜೆಪಿಗೆ ಮೈನಸ್ ಆಗಿದೆ.

ಇನ್ನು ಜೆಡಿಎಸ್ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರೂ, ಅದು ಸಿದ್ದರಾಮಯ್ಯ ಹೇಳಿದಂತೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನುವಂತಿದೆ. ಬಿಜೆಪಿಯನ್ನು ಸೋಲಿಸುವುದಕ್ಕಾಗಿ ಮುಸ್ಲಿಂ ಮತಗಳು ಕಾಂಗ್ರೆಸ್ ಪರವಾಗಿ ಬೀಳುವ ಸಾಧ್ಯತೆಯೇ ಹೆಚ್ಚು. ಇವೆಲ್ಲ ಕಾರಣದಿಂದ ತೀವ್ರ ಚಿಂತೆಗೀಡಾಗಿರುವ ಮುಖ್ಯಮಂತ್ರಿ ಬೊಮ್ಮಾಯಿ, ಕಳೆದ ಒಂದು ವಾರದಿಂದ ಹಾನಗಲ್ ಕ್ಷೇತ್ರದಲ್ಲಿ ಠಿಕಾಣಿ ಹೂಡಿದ್ದಾರೆ. ಅಷ್ಟೇ ಅಲ್ಲದೆ, ಸಂಪುಟ ಸಹೋದ್ಯೋಗಿಗಳನ್ನೆಲ್ಲ ಚುನಾವಣಾ ಪ್ರಚಾರಕ್ಕಿಳಿಸಿ, ಒಂದೊಂದು ವಾರ್ಡಿನ ಟಾಸ್ಕ್ ಕೊಟ್ಟಿದ್ದಾರೆ. ಇದರ ಪರಿಣಾಮ ಭಾರೀ ಝಣ ಝಣ ಕಾಂಚಾಣದ ಹರಿವೂ ಆಗಿದೆ.

ಅಧಿಕಾರ ಇದ್ದರೂ ತಮ್ಮದೇ ಜಿಲ್ಲೆಯಲ್ಲಿ ಚುನಾವಣೆ ಗೆಲ್ಲಿಸಲಾಗಲಿಲ್ಲ ಎನ್ನುವ ಸಂದೇಶ ಹೈಕಮಾಂಡಿಗೆ ಹೋಗುವುದು ಮತ್ತು ಬಿಜೆಪಿ ಸರಕಾರದ ಬಗ್ಗೆ ನೆಗೆಟಿವ್ ಸಂದೇಶ ರಾಜ್ಯದ ಜನತೆಗೆ ಹೋಗುವುದು ಎನ್ನುವ ಭಯ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಆವರಿಸಿದೆ. ಇದಕ್ಕಾಗಿ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಅವರನ್ನೂ ಕೊನೆಕ್ಷಣದಲ್ಲಿ ಪ್ರಚಾರ ಕಣಕ್ಕೆ ಇಳಿಸಿದ್ದರು. ಆದರೆ, ಇದ್ಯಾವುದೇ ಕಸರತ್ತು ಮತ ಗಳಿಕೆಯ ಮೇಲೆ ಯಾವ ಪರಿಣಾಮ ಬೀರಲಿದೆ ಎನ್ನುವುದು ಕುತೂಹಲದ ಅಂಶ.

ಇನ್ನು ಬಿಜೆಪಿ ಅಭ್ಯರ್ಥಿ ಶಿವಕುಮಾರ್ ಸಜ್ಜನ ಈ ಹಿಂದೆ ಪಕ್ಷದ ಜಿಲ್ಲಾಧ್ಯಕ್ಷನಾಗಿದ್ದು ಒಮ್ಮೆ ವಿಧಾನ ಪರಿಷತ್ ಸದಸ್ಯರೂ ಆಗಿದ್ದರು. ಆದರೆ, ಮತ ಸೆಳೆಯಬಲ್ಲ ನಾಯಕರಾಗಿ ಬೆಳೆದಿಲ್ಲ. ಲಿಂಗಾಯತ ವ್ಯಕ್ತಿಯೇ ಆಗಿದ್ದರೂ, ಸಮುದಾಯದ ಮತಗಳನ್ನು ಆಕರ್ಷಿಸುವಲ್ಲಿ ಸಫಲರಾಗುತ್ತಾರೆ ಅನ್ನುವ ನಂಬಿಕೆ ಇಲ್ಲ. ಇವೆಲ್ಲ ಕಾರಣಗಳಿಂದ ಬಿಜೆಪಿ ಪಾಲಿಗೆ ಹಾನಗಲ್ ಕ್ಷೇತ್ರದ ಫಲಿತಾಂಶ ವ್ಯತಿರಿಕ್ತ ಬಂದಲ್ಲಿ ಅಚ್ಚರಿ ಪಡಬೇಕಿಲ್ಲ.

Karnataka bypolls CM straining every nerve to win Hangal seat but BJP found n loosing edge. Victory in Hangal, which is in his home district, is seen as a prestige issue for Bommai in his first election after becoming CM In Hangal, which has seen a victory margin of around 6,000 favouring either the Bharatiya Janata Party (BJP) or the Congress in the past three elections, the ruling party, with its recent leadership change, is not taking any chances. That explains the constant presence of Chief Minister Basavaraj Bommai in the bypoll-bound constituency for the past one week. Winning in Hangal, which lies in his home district, is seen as a prestige issue for the Chief Minister.