ಜೀವಕ್ಕೆ ಅಪಾಯ ; ಪೊಲೀಸ್ ಭದ್ರತೆ ಆದೇಶ  ಬೆನ್ನಲ್ಲೇ ಶ್ರೀಕಿಯೇ ನಾಪತ್ತೆ, ಪೊಲೀಸರ ಹುಡುಕಾಟ  

17-11-21 10:33 pm       Hk News Desk   ಕರ್ನಾಟಕ

ಇದೀಗ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಎಚ್ಚರಿಕೆ ನೀಡಿದ ಬೆನ್ನಲ್ಲೇ ರಾಜ್ಯ ಸರಕಾರ ಶ್ರೀಕಿಗೆ ಪೊಲೀಸ್ ಭದ್ರತೆ ನೀಡಲು ಸೂಚನೆ ನೀಡಿದೆ. ಆದರೆ, ಇತ್ತ ಪೊಲೀಸರು ಭದ್ರತೆ ನೀಡಲು ಹೋದರೆ ಶ್ರೀಕಿಯೇ ಕಾಣೆಯಾಗಿದ್ದಾನೆ. 

ಬೆಂಗಳೂರು, ನ.17: ಬಿಟ್ ಕಾಯಿನ್ ಹಗರಣದ ಆರೋಪಿ ಶ್ರೀಕಿ ಅಲಿಯಾಸ್ ಶ್ರೀಕೃಷ್ಣನ ಜೀವಕ್ಕೆ ಅಪಾಯವಿದೆ ಎಂದು ಕಾಂಗ್ರೆಸ್ ನಾಯಕರು ಕಳೆದ ಒಂದು ವಾರದಿಂದ ಹೇಳುತ್ತಿದ್ದರೂ ರಾಜ್ಯ ಸರಕಾರ ಕಿವಿಗೆ ಹಾಕ್ಕೊಂಡಿರಲಿಲ್ಲ. ಇದೀಗ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಎಚ್ಚರಿಕೆ ನೀಡಿದ ಬೆನ್ನಲ್ಲೇ ರಾಜ್ಯ ಸರಕಾರ ಶ್ರೀಕಿಗೆ ಪೊಲೀಸ್ ಭದ್ರತೆ ನೀಡಲು ಸೂಚನೆ ನೀಡಿದೆ. ಆದರೆ, ಇತ್ತ ಪೊಲೀಸರು ಭದ್ರತೆ ನೀಡಲು ಹೋದರೆ ಶ್ರೀಕಿಯೇ ಕಾಣೆಯಾಗಿದ್ದಾನೆ. 

ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಇಂದು ಬೆಳಗ್ಗೆ ಶ್ರೀಕಿ ಭದ್ರತೆಗಾಗಿ ಸಬ್ ಇನ್ಸ್ ಪೆಕ್ಟರ್ ದರ್ಜೆಯ ಅಧಿಕಾರಿಯೊಬ್ಬರನ್ನು ನಿಯೋಜಿಸಿ ಆದೇಶ ಹೊರಡಿಸಿದ್ದರು. ಕೂಡಲೇ ಶ್ರೀಕಿಯ ಮನೆಗೆ ಸಬ್ ಇನ್ಸ್ ಪೆಕ್ಟರ್ ಸೇರಿದಂತೆ ಪೊಲೀಸರು ತೆರಳಿದ್ದು, ಅಲ್ಲಿ ಹುಡುಕಾಟ ನಡೆಸಿದ್ದಾರೆ. ಆದರೆ, ಶ್ರೀಕಿ ಎಲ್ಲಿದ್ದಾನೆಂದು ಮನೆಯವರಿಗೇ ಗೊತ್ತಿಲ್ಲ. ಹೀಗಾಗಿ ಪೊಲೀಸರು ಶ್ರೀಕಿ ಪತ್ತೆಗಾಗಿ ತೀವ್ರ ತಲೆಕೆಡಿಸಿಕೊಂಡಿದ್ದಾರೆ. 

ಬಿಟ್ ಕಾಯಿನ್ ಹಗರಣದಲ್ಲಿ ರಾಜ್ಯ ಸರಕಾರದ ಬಿಜೆಪಿ ಪ್ರಭಾವಿಗಳು ಇದ್ದಾರೆಂಬ ಮಾಹಿತಿಗಳು ಈಗಾಗ್ಲೇ ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡಿದೆ. ಈ ನಡುವೆ, ಆರೋಪಿಯೆಂದು ಗುರುತಿಸಲ್ಪಟ್ಟಿರುವ ಶ್ರೀಕಿಯೇ ನಾಪತ್ತೆಯಾಗಿದ್ದು, ತೀವ್ರ ಸಂಚಲನ ಸೃಷ್ಟಿಸಿದೆ. ಶ್ರೀಕಿ ಬಾಯಿಬಿಟ್ರೆ ದೊಡ್ಡ ನಾಯಕರಿಗೆ ಆಪತ್ತು ಎದುರಾಗುವುದು ಖಚಿತ ಎನ್ನಲಾಗುತ್ತಿರುವ ಮಧ್ಯೆಯೇ ಆತನ ನಾಪತ್ತೆ ಮತ್ತೊಂದು ಶಾಕ್ ನೀಡಿದೆ. 

ಈಗಾಗ್ಲೇ ಪ್ರಕರಣದ ಸಾಕ್ಷ್ಯಗಳನ್ನು ಶ್ರೀಕಿ ಪೂರ್ತಿಯಾಗಿ ಕ್ರಾಷ್ ಮಾಡಿದ್ದಾನೆ ಎನ್ನಲಾಗುತ್ತಿದ್ದು, ತಾಂತ್ರಿಕ ಸಾಕ್ಷ್ಯಗಳನ್ನು ಮತ್ತೆ ರಿಟ್ರೀವ್ ಮಾಡಿದರೆ ಆಪತ್ತು ಎದುರಾಗುವ ಸಾಧ್ಯತೆಗಳಿವೆ ಎನ್ನುವ ಆತಂಕದಿಂದ ರಾಜಕೀಯ ಪ್ರಭಾವಿಗಳೇ ಸೇರಿ ಆತನನ್ನು ಮುಗಿಸಲು ಸಂಚು ಹೂಡಿದ್ದಾರೆಂಬ ಅನುಮಾನಗಳು ಕಳೆದ ಕೆಲವು ದಿನಗಳಿಂದ ಕೇಳಿಬಂದಿತ್ತು. ಈ ಬಗ್ಗೆ ಕಾಂಗ್ರೆಸ್ ನಾಯಕರು ಪದೇ ಪದೇ ಸರಕಾರವನ್ನು ಎಚ್ಚರಿಸಿದ್ದರು. ಈಗ ಪ್ರಾಣಾಪಾಯದ ಭೀತಿಯಲ್ಲಿ ಸ್ವತಃ ಶ್ರೀಕಿಯೇ ತಲೆಮರೆಸಿಕೊಂಡಿದ್ದಾನೆಯೇ, ಯಾರಾದ್ರೂ ಆತನನ್ನು ಬಚ್ಚಿಟ್ಟಿದ್ದಾರೆಯೇ ಎನ್ನುವ ಅನುಮಾನವೂ ಮೂಡಿದೆ.

Bitcoin scam Hacker Sriki goes missing from house police on search