ಹತ್ತು ದೇಶ, ಇಪ್ಪತ್ತಕ್ಕೂ ಹೆಚ್ಚು ಯುವತಿಯರ ಕೊಲೆ ; ಅಧ್ಯಾತ್ಮ, ಡ್ರಗ್ಸ್ ಮುಂದಿಟ್ಟು ಯುವತಿಯರ ಬಲೆಗೆ ಬೀಳಿಸ್ತಿದ್ದ ಬಿಕಿನಿ ಕಿಲ್ಲರ್!

22-12-22 08:41 pm       HK News Desk   ದೇಶ - ವಿದೇಶ

ಹತ್ತು ದೇಶ, ಇಪ್ಪತ್ತಕ್ಕೂ ಹೆಚ್ಚು ಯವತಿಯರ ಕೊಲೆ.. ನೇಪಾಳದ ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಿದ ಚಾರ್ಲ್ಸ್ ಶೋಭರಾಜ್ ಎನ್ನುವ ಸ್ತ್ರೀ ಹಂತಕನದ್ದು ಭಯಾನಕ ಹಿಸ್ಟರಿ.

ನವದೆಹಲಿ, ಡಿ.22: ಹತ್ತು ದೇಶ, ಇಪ್ಪತ್ತಕ್ಕೂ ಹೆಚ್ಚು ಯವತಿಯರ ಕೊಲೆ.. ನೇಪಾಳದ ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಿದ ಚಾರ್ಲ್ಸ್ ಶೋಭರಾಜ್ ಎನ್ನುವ ಸ್ತ್ರೀ ಹಂತಕನದ್ದು ಭಯಾನಕ ಹಿಸ್ಟರಿ. ‌ಯಾರೂ ನಂಬಲಾಗದ, ಜಗತ್ತು ಕಂಡ ಅತ್ಯಂತ ಕ್ರೂರಿಗಳಲ್ಲಿ ಈತನೂ ಒಬ್ಬ. ತನ್ನ ಸ್ಫುರದ್ರೂಪಿ ಚೆಲುವನ್ನೇ ದಾಳವಾಗಿಟ್ಟು ಅಧ್ಯಾತ್ಮ, ಪ್ರೀತಿ, ಡ್ರಗ್ಸ್ ಮಾದಕ ದ್ರವ್ಯಗಳನ್ನೇ ಮುಂದಿಟ್ಟು ಯುವತಿಯರನ್ನು ಬಲೆಗೆ ಬೀಳಿಸುತ್ತಲೇ ಪ್ರವಾಸಿ ತಾಣಗಳಲ್ಲಿ ಅವರನ್ನು ದೋಚಿ ಕೊಲೆ ಮಾಡುತ್ತಿದ್ದ ಧೂರ್ತ.
 
ಮೂಲತಃ ವಿಯೆಟ್ನಾಂ ನಿವಾಸಿ. 1944ರಲ್ಲಿ ಅದೇ ದೇಶದಲ್ಲಿ ಹುಟ್ಟಿದ್ದ. ಭಾರತ ಮೂಲದ ತಂದೆ, ವಿಯೆಟ್ನಾಂ ತಾಯಿ. ಸಣ್ಣ ವಯಸ್ಸಿನಲ್ಲಿಯೇ ಹೆತ್ತವರ ಜೊತೆಗೆ ಫ್ರಾನ್ಸ್ ಸೇರಿದ್ದ ಆತ ಅಲ್ಲಿರುವಾಗಲೇ ಅಪರಾಧ ಲೋಕಕ್ಕೆ ಕಾಲಿಟ್ಟಿದ್ದ. ಸಣ್ಣಪುಟ್ಟ ಕಳ್ಳತನ, ವಂಚನೆ, ಅತ್ಯಾಚಾರ ಪ್ರಕರಣದಲ್ಲಿ ಜೈಲು ವಾಸವನ್ನೂ ಅನುಭವಿಸಿದ್ದ. ಆನಂತರ, ಆಯ್ದುಕೊಂಡಿದ್ದ ದೇಶ ಸುತ್ತಾಟದ ಕಾರ್ಯ.

ಭಾರತ, ನೇಪಾಳ, ಥಾಯ್ಲೆಂಡ್, ಮಲೇಶ್ಯಾ ಹೀಗೆ ದೇಶ ಸುತ್ತುತ್ತಿದ್ದ ಪ್ರವಾಸಿಗರ ಹಿಂದೆ ಬಿದ್ದು ಗೆಳೆತನ ಸಂಪಾದಿಸುತ್ತಿದ್ದ. ಆನಂತರ, ಅಧ್ಯಾತ್ಮ, ಪ್ರೀತಿಯ ನೆಪದಲ್ಲಿ ಯುವತಿಯರನ್ನು ಬಲೆಗೆ ಬೀಳಿಸುತ್ತಿದ್ದ. ಶ್ರೀಮಂತ ಯುವತಿಯರನ್ನು ಒಡನಾಟ ಇರಿಸಿ, ಬಳಿಕ ಅವರಿಗೆ ಡ್ರಗ್ಸ್ ಚಟ ಅಂಟಿಸುತ್ತಿದ್ದ.‌ ಪ್ರವಾಸಿ ತಾಣ, ಬೀಚ್ ನಲ್ಲಿ ಸುತ್ತಾಡುತ್ತಲೇ ಅತ್ಯಾಚಾರ ಎಸಗಿ ಕೊಲೆ ಮಾಡುತ್ತಿದ್ದ. 1970 -80ರ ದಶಕದಲ್ಲಿ ಏಶ್ಯಾದ ದೇಶಗಳಲ್ಲಿ ಯುವತಿಯರ ಸರಣಿ ಹತ್ಯೆಗಳನ್ನು ನಡೆಸಿದ್ದ. ಹತ್ತು ವರ್ಷಗಳಲ್ಲಿ 20 ಕ್ಕೂ ಹೆಚ್ಚು ಯುವತಿಯರ ಕೊಲೆಗಳನ್ನು ನಡೆಸಿದ್ದ ಎಂದು ನಂಬಲಾಗಿದೆ. 1976ರಲ್ಲಿ ದೆಹಲಿಯಲ್ಲಿ ಬಂಧಿಸಲ್ಪಟ್ಟಿದ್ದ ಆತನಿಗೆ ಫ್ರಾನ್ಸ್ ಮೂಲದ ಪ್ರವಾಸಿಗನ ಹತ್ಯೆ ಪ್ರಕರಣದಲ್ಲಿ 12 ವರ್ಷ ಶಿಕ್ಷೆಯಾಗಿತ್ತು.‌ ಆದರೆ 1986 ರಲ್ಲಿ ಆತ ದೆಹಲಿಯ ತಿಹಾರ್ ಜೈಲಿನಿಂದ ತಪ್ಪಿಸಿಕೊಂಡಿದ್ದ.‌ ಜೈಲು ಸಿಬಂದಿಗೆ ಡ್ರಗ್ಸ್ ಕೊಟ್ಟು ಹೊರಬಿದ್ದಿದ್ದ ಎನ್ನುವ ಆರೋಪಗಳಿದ್ದವು.

ಆನಂತರ ತಿರುಗಿ ಫ್ರಾನ್ಸ್ ತಲುಪಿದ್ದ ಚಾರ್ಲ್ಸ್, ತನ್ನ ಚಟುವಟಿಕೆ ಮುಂದುವರಿಸಿದ್ದ. ಈ ನಡುವೆ, 1997ರಲ್ಲಿ ಗೋವಾಕ್ಕೆ ಬಂದಿದ್ದ ಶೋಭರಾಜ್ ಹೆಸರು ಮರೆಸಿಕೊಂಡಿದ್ದ. ಆದರೆ ಗೋವಾದ ಪೊಲೀಸರು ಆತನ ಗುರುತು ಪತ್ತೆ ಮಾಡಿ ಬಂಧಿಸಿದ್ದರು. ಈತನ ವಿಚಿತ್ರ ಖಯಾಲಿ ಏನಂದ್ರೆ, ವಿದೇಶಿ ಪ್ರವಾಸಿಗರ ಹಿಂದೆ ಬೀಳುತ್ತಿದ್ದುದು. ಬೀಚ್ ಗಳಲ್ಲಿ ಬಂದು ಅಂಗಾತ ಮಲಗುತ್ತಿದ್ದ ಕನ್ಯೆಯರ ಸಂಗ ಬೆಳೆಸಿ, ಅವರಿಗೆ ಡ್ರಗ್ಸ್ ಕೊಟ್ಟು ಅವರಿಂದಲೇ ಹಣ ಸಂಪಾದಿಸುತ್ತಿದ್ದ. ಥಾಯ್ಲೆಂಡ್ ಮತ್ತು ಮಲೇಶ್ಯಾ ಪ್ರವಾಸಿಗರಿಗೆ ಪಟ್ಟಾಯಾ ಬೀಚ್ ಅಂದರೆ ಅಚ್ಚುಮೆಚ್ಚು. ಆದರೆ ಅಲ್ಲಿಗೂ ಎಂಟ್ರಿ ಕೊಟ್ಟಿದ್ದ ಶೋಭರಾಜ್, ಆರು ಮಂದಿ ಯುವತಿಯರನ್ನು ಕೊಂದಿದ್ದ ಆರೋಪಗಳಿವೆ. ಈತನಿಂದ ಕೊಲೆಯಾಗಿದ್ದವರು ಬಿಕಿನಿಯಲ್ಲಿ ಪತ್ತೆಯಾಗಿದ್ದರಿಂದ ಶೋಭರಾಜ್ ಬಿಕಿನಿ ಕಿಲ್ಲರ್ ಎಂದೂ ಕುಖ್ಯಾತಿ ಗಳಿಸಿದ್ದ.‌  

2003 ರಲ್ಲಿ ನೇಪಾಳಕ್ಕೆ ನಕಲಿ ಪಾಸ್ ಪೋರ್ಟ್ ಬಳಸಿ ಎಂಟ್ರಿ ಕೊಟ್ಟಿದ್ದ ಶೋಭರಾಜ್ ಮತ್ತೆ ಬಂಧನಕ್ಕೀಡಾಗಿದ್ದ. 1975ರಲ್ಲಿ ನೇಪಾಳ ರಾಜಧಾನಿ ಕಾಠ್ಮಂಡುವಿನಲ್ಲಿ ಅಮೆರಿಕದ ಪ್ರಜೆ ಮತ್ತು ಆತನ ಗೆಳತಿ ಕೆನಡಾ ಪ್ರಜೆಯನ್ನು ಚಾರ್ಲ್ಸ್ ಶೋಭರಾಜ್ ಕೊಲೆ ಮಾಡಿದ್ದ. ಎರಡು ದಿನಗಳ ಅಂತರದಲ್ಲಿ ಕೊಲೆ ನಡೆದು ಹೋಗಿತ್ತು. ತನಿಖೆಯ ನಂತರ, ಶೋಭರಾಜ್ ಕೊಲೆ ನಡೆಸಿರುವುದು ಗೊತ್ತಾಗಿತ್ತು. ಆದರೆ ಅಷ್ಟರಲ್ಲಿ ಶೋಭರಾಜ್ ನಾಪತ್ತೆಯಾಗಿದ್ದ. 2003ರಲ್ಲಿ ಬಂಧನ ಆಗುತ್ತಲೇ ಪೊಲೀಸರು ಆತನನ್ನು ಫಿಕ್ಸ್ ಮಾಡಿದ್ದರು. ಸ್ಥಳೀಯ ಕೋರ್ಟ್ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಎರಡು ಕೊಲೆಗೆ ಪ್ರತ್ಯೇಕ ಜೀವಾವಧಿ ಶಿಕ್ಷೆ ಜಾರಿಯಾಗಿತ್ತು. ಹೀಗಾಗಿ ಕಳೆದ 20 ವರ್ಷಗಳಿಂದಲೂ ಶೋಭರಾಜ್ ನೇಪಾಳದ ಜೈಲಿನಲ್ಲಿದ್ದ.

ನೇಪಾಳದ ಕಾನೂನಿನ ಲಾಭ

ಶೇ. 75ರಷ್ಟು ಜೈಲು ಶಿಕ್ಷೆಯ ಅವಧಿಯನ್ನು ಪೂರೈಸಿದ ಮತ್ತು ಈ ಅವಧಿಯಲ್ಲಿ ಸನ್ನಡತೆ ಪ್ರದರ್ಶಿಸಿದ ಅಪರಾಧಿಗಳನ್ನು ಬಿಡುಗಡೆ ಮಾಡುವುದಕ್ಕೆ ನೇಪಾಳ ಕಾನೂನಿನಲ್ಲಿ ಅವಕಾಶವಿದೆ. ಇದರ ಲಾಭ ಪಡೆದ ಶೋಭರಾಜ್, ಜೈಲಿನಿಂದ ತನ್ನನ್ನು ಬಿಡುಗಡೆ ಮಾಡುವಂತೆ ಪದೇ ಪದೇ ಕೋರಿಕೆ ಸಲ್ಲಿಸಿದ್ದ. ಪ್ರಧಾನಿ, ರಾಷ್ಟ್ರಪತಿ, ಸುಪ್ರೀಂ ಕೋರ್ಟಿಗೆ, ಸರಕಾರಕ್ಕೆ ವಿಶೇಷ ದಿನಗಳ ಸಂದರ್ಭದಲ್ಲಿ ಮನವಿ ಮಾಡುತ್ತಿದ್ದ. ನೇಪಾಳದಲ್ಲಿ ಹಿರಿಯ ನಾಗರಿಕರಿಗೆ ಇರುವ ವಿನಾಯಿತಿಗೆ ಅನುಗುಣವಾಗಿ ಜೈಲು ಶಿಕ್ಷೆಯನ್ನು ಪೂರ್ಣಗೊಳಿಸಿರುವುದಾಗಿ ಚಾರ್ಲ್ಸ್ ಶೋಭರಾಜ್ ತನ್ನ ಅರ್ಜಿಯಲ್ಲಿ ವಾದಿಸಿದ್ದ. 20 ವರ್ಷದ ಶಿಕ್ಷೆಯಲ್ಲಿ 17 ವರ್ಷಗಳನ್ನು ಈಗಾಗಲೇ ಪೂರೈಸಿದ್ದು, ಸನ್ನಡತೆ ಪ್ರದರ್ಶಿಸಿರುವುದರಿಂದ ಬಿಡುಗಡೆ ಮಾಡುವಂತೆ ಕೋರಿದ್ದ. ಇದೀಗ ಅಲ್ಲಿನ ಸುಪ್ರೀಂ ಕೋರ್ಟ್, ಚಾರ್ಲ್ಸ್ ಶೋಭರಾಜ್ ಬಿಡುಗಡೆಗೆ ಆದೇಶ ಮಾಡಿದೆ. ಅಲ್ಲದೆ, ಆತನನ್ನು 15 ದಿನಗಳ ಒಳಗೆ ಫ್ರಾನ್ಸ್‌ಗೆ ಗಡಿಪಾರು ಮಾಡುವಂತೆ ಆದೇಶಿಸಲಾಗಿದೆ. ಚಾರ್ಲ್ಸ್ ಶೋಭರಾಜ್ ಜೈಲಿನಲ್ಲಿದ್ದಾಗಲೇ ಆತನ ಜೀವನ, ಅಪರಾಧಗಳ ಬಗ್ಗೆ ಬಿಬಿಸಿ ಮತ್ತು ಅಮೆಜಾನ್ ಪ್ರೈಮ್ 'ದಿ ಸರ್ಪೆಂಟ್ ಕಿಲ್ಲರ್' ಹೆಸರಲ್ಲಿ ಸೀರಿಯಲ್ ಮಾಡಿದೆ.

The Serpent,' the 'Bikini Killer,' and the 'Splitting Killer' — these are just some of the monikers for Charles Sobhraj, a part-Indian, part-Vietnamese serial killer, whose life of crimes is arguably more gripping than any true-crime drama available on OTT platforms. On Wednesday, 21 December, the Supreme Court of Nepal ordered the 78-year-old’s release and deportation to his home country, France, within 15 days. He was serving jail term in Nepal since 2003 for murdering two North American tourists.