ಸಿಂಧು ಜಲ ಒಪ್ಪಂದ ಮರು ಪರಿಶೀಲಿಸಲು ಭಾರತ ಉತ್ಸುಕ ; ಹಳೆ ನಿಯಮ ಬದಲಿಸಿ ಪಾಕಿಸ್ತಾನಕ್ಕೆ ನೀರು ಬಿಡುವ ಸಾಧ್ಯತೆ 

21-05-25 12:57 pm       HK News Desk   ದೇಶ - ವಿದೇಶ

ಪಹಲ್ಗಾಮ್ ಭಯೋತ್ಪಾದಕ ದಾಳಿ ಬಳಿಕ ಸ್ಥಗಿತಗೊಳಿಸಿರುವ ಪಾಕ್ ಜೊತೆಗಿನ ಸಿಂಧೂ ಜಲ ಒಪ್ಪಂದ ಕುರಿತಾಗಿ ಮರು ಪರಿಶೀಲನೆಗೆ ಭಾರತ ಸರ್ಕಾರ ಮುಂದಾಗಿದೆ. ಹಳೆಯ ಷರತ್ತುಗಳನ್ನು ಪರಿಗಣಿಸದೆ ತಗ್ಗು ಪ್ರದೇಶಗಳಿಗೆ ನೀರು ಒದಗಿಸಬೇಕೆಂಬ ಅಂತರಾಷ್ಟ್ರೀಯ ನಿಯಮಗಳಡಿ ಒಪ್ಪಂದವನ್ನು ಪುನರ್ ರೂಪಿಸಲು ಭಾರತ ಬಯಸುತ್ತಿದೆ.

ನವದೆಹಲಿ, ಮೇ 21 : ಪಹಲ್ಗಾಮ್ ಭಯೋತ್ಪಾದಕ ದಾಳಿ ಬಳಿಕ ಸ್ಥಗಿತಗೊಳಿಸಿರುವ ಪಾಕ್ ಜೊತೆಗಿನ ಸಿಂಧೂ ಜಲ ಒಪ್ಪಂದ ಕುರಿತಾಗಿ ಮರು ಪರಿಶೀಲನೆಗೆ ಭಾರತ ಸರ್ಕಾರ ಮುಂದಾಗಿದೆ. ಹಳೆಯ ಷರತ್ತುಗಳನ್ನು ಪರಿಗಣಿಸದೆ ತಗ್ಗು ಪ್ರದೇಶಗಳಿಗೆ ನೀರು ಒದಗಿಸಬೇಕೆಂಬ ಅಂತರಾಷ್ಟ್ರೀಯ ನಿಯಮಗಳಡಿ ಒಪ್ಪಂದವನ್ನು ಪುನರ್ ರೂಪಿಸಲು ಭಾರತ ಬಯಸುತ್ತಿದೆ.

ಸಿಂಧೂ ನದಿಯ ನೀರು ಬಿಡುವುದಕ್ಕಾಗಿ ಜಲ ಒಪ್ಪಂದವನ್ನು ಪುನರ್ ಸ್ಥಾಪಿಸಲು ಪಾಕಿಸ್ತಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಗ್ರಹ ಮಾಡುತ್ತಿದೆ.  ಆದರೆ ಹಿಂದ ಇದ್ದ ರೀತಿಯಲ್ಲೇ ಒಪ್ಪಂದ ಮಾಡಿಕೊಳ್ಳದೆ ಹಳೆ ನಿಯಮಗಳ ಬಗ್ಗೆ ಪುನರ್ ಪರಿಶೀಲಿಸುವ ಕೆಲಸ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಪಾಕಿಸ್ತಾನ ಭಾರತವನ್ನು ಮನವಿ ಮಾಡಿಕೊಂಡ ನಂತರ ಈ ಬೆಳವಣಿಗೆ ನಡೆದಿದೆ. 

ಸೆಪ್ಟೆಂಬರ್ 1960 ರಲ್ಲಿ ಸೌಹಾರ್ದ ನೆಲೆಯಲ್ಲಿ ಮಾಡಲ್ಪಟ್ಟ ಈ ಒಪ್ಪಂದವು ಪಾಕಿಸ್ತಾನದ ಕಡೆಗೆ ಬಹಳ ಉದಾರವಾಗಿತ್ತು ಎಂದು ಭಾರತ ಸರ್ಕಾರ ಹೇಳುತ್ತಿದೆ. ಕಳೆದ ಮೂರು ದಶಕಗಳಲ್ಲಿ ಭಯೋತ್ಪಾದನೆಯನ್ನು ಉತ್ತೇಜಿಸುವ ಮೂಲಕ ಪಾಕಿಸ್ತಾನ, ಭಾರತದ ಜೊತೆಗಿನ ಸ್ನೇಹ ಮತ್ತು ಸೌಹಾರ್ದತೆ ಮುರಿದಿದೆ. ಹೀಗಾಗಿ ಭಾರತ ಅಂತರರಾಷ್ಟ್ರೀಯ ನಿಯಮಗಳನ್ನು ಉಲ್ಲಂಘಿಸದೆ ಪಾಕ್ ಕಡೆಗೆ ಹರಿಯುವ ನೀರಿನ ಮೇಲೆ ಅಂಕುಶ ಹಾಕಲಿದೆ ಎಂದು ಹೇಳಲಾಗುತ್ತಿದೆ.

50 ಮತ್ತು 60 ರ ದಶಕದಲ್ಲಿ ರೂಪಿಸಲಾದ ಮೂಲ ಒಪ್ಪಂದಕ್ಕಿಂತ ಭಿನ್ನವಾಗಿ, ಪ್ರಸ್ತುತ ಅಗತ್ಯಗಳು, ಹವಾಮಾನ ಬದಲಾವಣೆ, ಹಿಮನದಿಗಳ ಕರಗುವಿಕೆ, ನದಿಗಳಲ್ಲಿ ಲಭ್ಯವಿರುವ ನೀರಿನ ಪ್ರಮಾಣ, ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಶುದ್ಧ ಇಂಧನವನ್ನು ಗಮನದಲ್ಲಿಟ್ಟು ಒಪ್ಪಂದವನ್ನು ಮರು ಸ್ಥಿರೀಕರಿಸುವ ಸಾಧ್ಯತೆಯಿದೆ.

India Keen to Review Indus Water Treaty, Possibility of Amending Old Rules on Water Sharing with Pakistan.