ಭಾರತೀಯ ಶಾಸ್ತ್ರೀಯ ಸಂಗೀತದ ಮಾಂತ್ರಿಕ ಪಂಡಿತ್‌ ಜಸರಾಜ್ ನಿಧನ!

17-08-20 09:08 pm       Headline Karnataka News Network   ದೇಶ - ವಿದೇಶ

ವಿಶ್ವದ ಪ್ರಮುಖ ಭಾರತೀಯ ಶಾಸ್ತ್ರೀಯ ಗಾಯಕರಲ್ಲಿ ಒಬ್ಬರಾದ ಪಂಡಿತ್ ಜಸರಾಜ್ (90) ಅವರು ಅಮೆರಿಕದ ನ್ಯೂಜೆರ್ಸಿಯಲ್ಲಿ ಇಂದು ನಿಧನರಾಗಿದ್ದಾರೆ. 2000 ನೇ ಇಸವಿಯಲ್ಲಿ ಇವರಿಗೆ ಭಾರತದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮವಿಭೂಷಣ ನೀಡಲಾಗಿತ್ತು.

ವಿಶ್ವದ ಪ್ರಮುಖ ಭಾರತೀಯ ಶಾಸ್ತ್ರೀಯ ಗಾಯಕರಲ್ಲಿ ಒಬ್ಬರಾದ ಪಂಡಿತ್ ಜಸರಾಜ್ (90) ಅವರು ಅಮೆರಿಕದ ನ್ಯೂಜೆರ್ಸಿಯಲ್ಲಿ ಇಂದು ನಿಧನರಾಗಿದ್ದಾರೆ.

1930 ರಲ್ಲಿ ಹರಿಯಾಣದಲ್ಲಿ ಜನಿಸಿದ ಅವರ ಸಂಗೀತ ವೃತ್ತಿಜೀವನವು ಕಳೆದ ಎಂಟು ದಶಕಗಳವರೆಗೆ ವ್ಯಾಪಿಸಿತ್ತು. 2000 ನೇ ಇಸವಿಯಲ್ಲಿ ಇವರಿಗೆ ಭಾರತದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮವಿಭೂಷಣ ನೀಡಲಾಗಿತ್ತು.

ಇಂದು ಈ ಮಹಾನ್‌ ಸಂಗೀತ ಮಾಂತ್ರಿಕ ನಮ್ಮ ನಡುವೆ ಇಲ್ಲದೇ ಇದ್ದರೂ ಅವರ ನೆನಪುಗಳು ಮಾತ್ರ ಅಚ್ಚಳಿಯದೇ ಉಳಿಯಲಿದೆ. ತಮ್ಮ 80 ವರ್ಷಗಳ ಸಂಗೀತ ಜೀವನದಲ್ಲಿ ಹಲವು ಮೈಲುಗಳನ್ನು ದಾಟಿದ ಸಾಧನೆ ಇವರದ್ದು.

7ಖಂಡಗಳಲ್ಲಿ ಕಾರ್ಯಕ್ರಮ ನೀಡಿದ ಹೆಗ್ಗಳಿಕೆ ಹೊಂದಿರುವ ಇವರು, ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದಿಂದಲೂ ಗೌರವ ಪಡೆದವರು. ಇವರ ಸಂಗೀತ ಸಾಧನೆಗಳಿಗೆ ಇವರೇ ಸರಿಸಾಟಿ.

ಹರಿರ್ಯಾಣದ ಹಿಸಾರ್‌ನಲ್ಲಿ 1930ರ ಜನವರಿ 28ರಂದು ಜನಿಸಿದ ಪಂಡಿತ್‌ ಜಸರಾಜ್‌ ಅವರು 4 ತಲೆಮಾರುಗಳಿಂದ ಶಾಸ್ತ್ರೀಯ ಸಂಗೀತದ ಸಂಪ್ರದಾಯವನ್ನು ಮುಂದುವರೆಸುತ್ತಿರುವ ಕುಟುಂಬಕ್ಕೆ ಸೇರಿದರಾಗಿದ್ದಾರೆ. ಖಯಾಲ್‌ ಶೈಲಿಯ ಗಾಯನವು ಪಂಡಿತ್‌ ಜಸ್‌ರಾಜ್‌ ಅವರ ವಿಶೇಷತೆಯಾಗಿತ್ತು. ಅವರ ತಂದೆ ಪಂಡಿತ್‌ ಮೋತಿರಾಮ್‌ ಅವರು ಖ್ಯಾತ ಮೇವತಿ ಘರಾನಾದ ಸಂಗೀತಗಾರರಾಗಿದ್ದರು.

ಪಂಡಿತ್‌ ಜಸ್‌ರಾಜ್‌ ಕೇವಲ ಮೂರರಿಂದ ನಾಲ್ಕು ವರ್ಷದವರಿದ್ದಾಗ ತಂದೆಯನ್ನು ಕಳೆದುಕೊಂಡರು. ತಂದೆಯಂತೆ ಇವರಿಗೂ ಸಂಗೀತದ ಆಸಕ್ತಿ ಮೂಡಿತ್ತು. ಎಳೆಯ ಪ್ರಾಯದಲ್ಲೇ ಸಂಗೀತವನ್ನು ಸೃಜಿಸಿಕೊಂಡ ಇವರು, ತಮ್ಮ 14ನೇ ವಯಸ್ಸಿನ ವರೆಗೆ ತಬಲಾ ಕಲಿಯುತ್ತಿದ್ದರು. ಬಳಿಕ ಕಂಠಸಿರಿಯತ್ತ ಚಿತ್ತ ಹರಿದ ಕಾರಣಕ್ಕೆ ಹಾಡುಗಾರಿಕೆಯನ್ನು ಪ್ರಾರಂಭಿಸಿದರು. ಮೂವತ್ತು ವಾರಗಳ ವರೆಗೆ ಶುದ್ಧ ಉಚ್ಚಾರಣೆ ಮತ್ತು ಸ್ಪಷ್ಟತೆಯನ್ನು ಇಟ್ಟುಕೊಂಡು ಮೇವತಿ ಘರಾನಾದ ವಿಶಿಷ್ಟತೆಯನ್ನು ಅವರು ಮುಂದಿನ ತಲೆಮಾರಿಗೆ ದಾಟಿಸುವಲ್ಲಿ ಯಶಸ್ವಿಯಾದರು.

ಭಾರತದಲ್ಲಿ ಕೊರೋನಾ ವೈರಸ್ ಲಾಕ್‌ಡೌನ್ ಜಾರಿಗೊಳಿಸಿದ್ದಾಗ ಮೇವತಿ ಘರಾನಾ ಸಂಗೀತ ವಂಶಾವಳಿಗೆ ಸೇರಿದ್ದ ಪಂಡಿತ್ ಜಸರಾಜ್ ಅಮೆರಿಕದಲ್ಲಿದ್ದರು. ಹೀಗಾಗಿ ಅವರು ಭಾರತಕ್ಕೆ ಹಿಂದಿರುಗಲು ಸಾಧ್ಯವಾಗದೆ ಅಲ್ಲೇ ಉಳಿಯಲು ನಿರ್ಧರಿಸಿದ್ದರು.

ಆದರೆ, ಅಮೆರಿಕದ ನ್ಯೂಜೆರ್ಸಿಯಲ್ಲಿರುವ ಅವರ ಮನೆಯಲ್ಲಿ ಇಂದು ಹೃದಯಾಘಾತಕ್ಕೆ ಒಳಗಾಗಿ ಅಮೆರಿಕ ಕಾಲಮಾನದ ಪ್ರಕಾರ ಇಂದು ಬೆಳಗ್ಗೆ 5.15ಕ್ಕೆ ಇಹಲೋಕ ತ್ಯಜಿಸಿದ್ದಾರೆ ಎಂದು ಅವರ ಕುಟುಂಬ ವರ್ಗ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.