ರಾಜ್ಯದಲ್ಲೇ ಅತಿದೊಡ್ಡ ಡಿಜಿಟಲ್ ಅರೆಸ್ಟ್ ವಂಚನೆ ; ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಸಾಫ್ಟ್‌ವೇರ್ ಮಹಿಳೆಯಿಂದ 31.83 ಕೋಟಿ ಪೀಕಿಸಿದ ಖದೀಮರು, 6 ತಿಂಗಳಲ್ಲಿ 187 ವಹಿವಾಟಿನಲ್ಲಿ ಕೋಟಿ ಕೋಟಿ ಮಾಯ ! 

18-11-25 11:18 am       Bangalore Correspondent   ಕ್ರೈಂ

ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಸೈಬರ್ ವಂಚಕರು ಮಹಿಳಾ ಸಾಫ್ಟ್‌ವೇರ್ ಎಂಜಿನಿಯರ್‌ ಒಬ್ಬರನ್ನು ಯಾಮಾರಿಸಿ, ಡಿಜಿಟಲ್ ಅರೆಸ್ಟ್ ನೆಪದಲ್ಲಿ ಬೆದರಿಕೆಯೊಡ್ಡಿ ಬರೋಬ್ಬರಿ 31.83 ಕೋಟಿ ರೂಪಾಯಿ ದೋಚಿದ ಘಟನೆ ನಡೆದಿದ್ದು, ರಾಜ್ಯದಲ್ಲೇ ಅತಿ ದೊಡ್ಡ ಡಿಜಿಟಲ್ ಅರೆಸ್ಟ್ ವಂಚನೆ ಪ್ರಕರಣವೆಂದು ಪೊಲೀಸರು ಅಂದಾಜಿಸಿದ್ದಾರೆ.

ಬೆಂಗಳೂರು, ನ.18 : ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಸೈಬರ್ ವಂಚಕರು ಮಹಿಳಾ ಸಾಫ್ಟ್‌ವೇರ್ ಎಂಜಿನಿಯರ್‌ ಒಬ್ಬರನ್ನು ಯಾಮಾರಿಸಿ, ಡಿಜಿಟಲ್ ಅರೆಸ್ಟ್ ನೆಪದಲ್ಲಿ ಬೆದರಿಕೆಯೊಡ್ಡಿ ಬರೋಬ್ಬರಿ 31.83 ಕೋಟಿ ರೂಪಾಯಿ ದೋಚಿದ ಘಟನೆ ನಡೆದಿದ್ದು, ರಾಜ್ಯದಲ್ಲೇ ಅತಿ ದೊಡ್ಡ ಡಿಜಿಟಲ್ ಅರೆಸ್ಟ್ ವಂಚನೆ ಪ್ರಕರಣವೆಂದು ಪೊಲೀಸರು ಅಂದಾಜಿಸಿದ್ದಾರೆ.

ವಂಚನೆಗೀಡಾದ ಇಂದಿರಾನಗರದ 57 ವರ್ಷದ ಮಹಿಳೆ ಬೆಂಗಳೂರು  ನಗರ ಪೂರ್ವ ವಿಭಾಗದ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಪರಿಚಿತ ವ್ಯಕ್ತಿ ಡಿಎಚ್ ಎಲ್ ಕೊರಿಯ‌ರ್ ಕಂಪನಿ ಪ್ರತಿನಿಧಿಯ ಸೋಗಿನಲ್ಲಿ 2024ರ ಸೆ.15ರಂದು ದೂರುದಾರ ಟೆಕ್ಕಿಗೆ ಕರೆ ಮಾಡಿದ್ದ. ಬಳಿಕ ಆತ, ತಮ್ಮ ಹೆಸರಿನಲ್ಲಿ ಮೂರು ಕ್ರೆಡಿಟ್ ಕಾರ್ಡ್, ನಾಲ್ಕು ಪಾಸ್‌ಪೋರ್ಟ್‌ಗಳು ಹಾಗೂ ನಿಷೇಧಿತ ಎಂಡಿಎಂ ಮಾದಕ ವಸ್ತುಗಳನ್ನು ಒಳಗೊಂಡ ಪಾರ್ಸೆಲ್ ಮುಂಬೈನ ಅಂಧೇರಿಯ ಕೊರಿಯರ್ ಕೇಂದ್ರಕ್ಕೆ ಬಂದಿದೆ ಎಂದು ಹೇಳಿದ್ದ.

ಇದಕ್ಕೆ ಮಹಿಳೆ ಬೆಂಗಳೂರಿನಲ್ಲಿ ವಾಸವಿರುವ ತಮಗೆ ಕೊರಿಯರ್‌ನ ಜತೆ ಯಾವುದೇ ಸಂಪರ್ಕವಿಲ್ಲ ಎಂದು ಹೇಳಿದ್ದರು. ಆಗ ಅಪರಿಚಿತ ವ್ಯಕ್ತಿ, ತಮ್ಮ ಮೊಬೈಲ್ ಸಂಖ್ಯೆಗೆ ಪಾರ್ಸೆಲ್ ಆಗಿರುವುದರಿಂದ ಇದು ಸೈಬರ್ ಅಪರಾಧವೆಂದು ಹೆದರಿಸಿದ್ದ. ಅಲ್ಲದೆ, ಈ ಬಗ್ಗೆ ಸೈಬರ್ ಅಪರಾಧ ಸೆಲ್‌ಗೆ ದೂರು ಕೊಡುವಂತೆ ಹೇಳಿದ್ದ. ಇದಕ್ಕೆ ಟೆಕ್ಕಿ ಪ್ರತಿಕ್ರಿಯಿಸುವ ಮುನ್ನವೇ ಆತ ಕರೆಯನ್ನು ಅಧಿಕಾರಿಯ ಸೋಗಿನಲ್ಲಿದ್ದ ವ್ಯಕ್ತಿಗೆ ವರ್ಗಾಯಿಸಿದ್ದ. 

ಪೊಲೀಸ್ ಅಧಿಕಾರಿ ಸೋಗಿನಲ್ಲಿ ಟೆಕ್ಕಿ ಮಹಿಳೆಯ ವೈಯಕ್ತಿಕ ವಿವರ ಪಡೆದುಕೊಂಡ ವಂಚಕರು, ಅವರ ಮೇಲೆ ನಿಗಾ ಇರಿಸಿರುವುದಾಗಿ ಬೆದರಿಸಿ ಸ್ಥಳೀಯ ಪೊಲೀಸರನ್ನು ಸಂಪರ್ಕಿಸದಂತೆ ಎಚ್ಚರಿಕೆ ಕೊಟ್ಟಿದ್ದರು. ವಿಷಯ ಬಹಿರಂಗಪಡಿಸಿದರೆ, ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿದರೆ ಅಥವಾ ಕಾನೂನು ಸಹಾಯ ಪಡೆಯಲು ಯತ್ನಿಸಿದರೆ ತಮ್ಮ ಇಡೀ ಕುಟುಂಬವನ್ನೂ ಪ್ರಕರಣದಲ್ಲಿ ಸಿಲುಕಿಸುವುದಾಗಿ ಟೆಕ್ಕಿಗೆ ಹೆದರಿಸಿದ್ದರು.

ಸಿಬಿಐ ಅಧಿಕಾರಿ ಸೋಗಿನಲ್ಲಿ ವಿಡಿಯೋ ಕರೆ 

ಮಗನ ಮದುವೆ ಸಿದ್ಧತೆಯಲ್ಲಿದ್ದ ಟೆಕ್ಕಿ ಮಹಿಳೆ ಸೈಬರ್ ವಂಚಕರ ಕರೆಯಿಂದ ಆತಂಕಗೊಂಡು ಅವರು ಹೇಳಿದಂತೆ ನಡೆದುಕೊಂಡಿದ್ದರು. ಕೆಲ ದಿನಗಳ ಬಳಿಕ ವ್ಯಕ್ತಿಯೊಬ್ಬ ಸಿಬಿಐ ಅಧಿಕಾರಿ ಪ್ರದೀಪ್ ಸಿಂಗ್ ಎಂದು ಹೇಳಿಕೊಂಡು ಟೆಕ್ಕಿಗೆ ವಾಟ್ಸ್ಆ್ಯಪ್ ವಿಡಿಯೊ ಕರೆ ಮಾಡಿದ್ದು, ಡಿಜಿಟಲ್ ಅರೆಸ್ಟ್ ಮಾಡುತ್ತಿರುವುದಾಗಿ ಹೆದರಿಸಿದ್ದ. ಅಲ್ಲದೆ, ಆತ ಟೆಕ್ಕಿಯ ಮೇಲ್ವಿಚಾರಣೆಗೆ ರಾಹುಲ್ ಯಾದವ್ ಎಂಬ ವ್ಯಕ್ತಿಯನ್ನು ನಿಯೋಜಿಸಿದ್ದ. 

2024ರ ಸೆ.23ರಂದು ಮತ್ತೆ ಟೆಕ್ಕಿಯನ್ನು ಸಂಪರ್ಕಿಸಿದ್ದ ಪ್ರದೀಪ್ ಸಿಂಗ್ ಹೆಸರಿನ ವ್ಯಕ್ತಿ, ತಮ್ಮ ಆಸ್ತಿ ವಿವರವನ್ನು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಗುಪ್ತಚರ ಘಟಕಕ್ಕೆ ಘೋಷಿಸುವಂತೆ ಸೂಚಿಸಿದ್ದ. ಟೆಕ್ಕಿ ಮಹಿಳೆ ಆ ಸೂಚನೆಯಂತೆ ನಡೆದುಕೊಂಡಿದ್ದರು. ಬಳಿಕ ವಂಚಕ ಹಂತ ಹಂತವಾಗಿ ವಂಚಕರು ಟೆಕ್ಕಿಯಿಂದ ಹಣ ವಸೂಲಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

6 ತಿಂಗಳಲ್ಲಿ 187 ವಹಿವಾಟಿನಲ್ಲಿ ಹಣ ಪಾವತಿ  

ಸಂತ್ರಸ್ತ ಮಹಿಳೆಯು ತಮ್ಮ ನಿಶ್ಚಿತ ಠೇವಣಿ (ಎಫ್.ಡಿ) ಹಣವನ್ನು ಹೊರತುಪಡಿಸಿ ಇತರೆ ಉಳಿತಾಯದ 31 ಕೋಟಿ ರೂ.ಗಳನ್ನು ಸುಮಾರು 187 ವಹಿವಾಟುಗಳಲ್ಲಿ ವಂಚಕರು ಸೂಚಿಸಿದ್ದ ಖಾತೆಗಳಿಗೆ ವರ್ಗಾಯಿಸಿದ್ದರು. ಈ ಹಣವನ್ನು 2025 ಫೆಬ್ರವರಿಯೊಳಗೆ ಪರಿಶೀಲನೆ ಮಾಡಿ ಹಿಂದಿರುಗಿಸುವುದಾಗಿ ವಂಚಕರು ಟೆಕ್ಕಿಗೆ ನಂಬಿಸಿದ್ದರು. ಅಲ್ಲದೆ, ಕ್ಲಿಯರೆನ್ಸ್ ಸರ್ಟಿಫಿಕೇಟ್ ಸಹ ಕೊಟ್ಟಿದ್ದರು. ವಂಚಕರು ಹಣ ಮರಳಿಸದೆ ಸಬೂಬು ಹೇಳಲಾರಂಭಿಸಿದ್ದರಿಂದ ಅನುಮಾನಗೊಂಡ ಟೆಕ್ಕಿ ಮಹಿಳೆ ನ.14ರಂದು ಠಾಣೆಗೆ ಬಂದು ದೂರು ಕೊಟ್ಟಿದ್ದಾರೆ. ಮಗನ ಮದುವೆ ಕಾರಣದಿಂದ ದೂರು ನೀಡುವುದು ವಿಳಂಬವಾಯಿತೆಂದು ಮಹಿಳೆ ತಿಳಿಸಿದ್ದಾರೆ.

In a shocking case labelled as Karnataka’s largest “digital arrest” fraud, cybercriminals posing as CBI officials extorted ₹31.83 crore from a 57-year-old software engineer from Indiranagar, Bengaluru. The gang first contacted her posing as DHL courier staff, falsely claiming that illegal parcels were booked in her name.