ಗಾಜಿಯಾಬಾದಲ್ಲಿ ಕೋವಿಡ್ ಸ್ಥಿತಿ ಗಂಭೀರ ; ಗುರುದ್ವಾರ ಕಮಿಟಿಯಿಂದ ರಸ್ತೆಯಲ್ಲೇ ಆಕ್ಸಿಜನ್ ಸೌಲಭ್ಯ !

24-04-21 05:42 pm       Headline Karnataka News Network   ದೇಶ - ವಿದೇಶ

ಲಕ್ನೋ ಮತ್ತು ಗಾಜಿಯಾಬಾದ್ ನಲ್ಲಿ ರೋಗಿಗಳಿಗೆ ಸಕಾಲದಲ್ಲಿ ಆಕ್ಸಿಜನ್ ಮತ್ತು ವೆಂಟಿಲೇಟರ್ ಸಿಗದೆ ಪರದಾಡುವ ಸ್ಥಿತಿ ಎದುರಾಗಿದೆ.

ಲಕ್ನೋ, ಎ.24: ಉತ್ತರ ಪ್ರದೇಶದಲ್ಲಿ ಕೋವಿಡ್ ಸೋಂಕು ಭಾರೀ ತೀವ್ರಗತಿಯಲ್ಲಿ ಹರಡುತ್ತಿದ್ದು, ಗಂಭೀರ ಪರಿಸ್ಥಿತಿ ಎದುರಾಗಿದೆ. ಲಕ್ನೋ ಮತ್ತು ಗಾಜಿಯಾಬಾದ್ ನಲ್ಲಿ ರೋಗಿಗಳಿಗೆ ಸಕಾಲದಲ್ಲಿ ಆಕ್ಸಿಜನ್ ಮತ್ತು ವೆಂಟಿಲೇಟರ್ ಸಿಗದೆ ಪರದಾಡುವ ಸ್ಥಿತಿ ಎದುರಾಗಿದೆ. ಇದೇ ವೇಳೆ, ಆಕ್ಸಿಜನ್ ಸಿಗದೆ ಬಳಲುವ ಮಂದಿಗಾಗಿ ಗಾಜಿಯಾಬಾದ್ ಸಿಖ್ ಗುರುದ್ವಾರ ಸಮಿತಿಯವರು ಉಚಿತವಾಗಿ ಆಕ್ಸಿಜನ್ ಪೂರೈಸುವ ಮುಂದಾಗಿದ್ದಾರೆ.

ಗಾಜಿಯಾಬಾದ್ ನಲ್ಲಿ ಆಸ್ಪತ್ರೆಗಳಿಗೆ ಅಲೆದಾಡುವುದಕ್ಕೂ ಮುನ್ನ ಗುರುದ್ವಾರ ಸಮಿತಿಯವರು ರಸ್ತೆ ಬದಿಗಳಲ್ಲೇ ಜನರಿಗೆ ಆಕ್ಸಿಜನ್ ಪೂರೈಸಲು ಆರಂಭಿಸಿದ್ದಾರೆ. ಆಧಾರ್ ಕಾರ್ಡ್ ಆಗಲೀ, ಕೋವಿಡ್ ಪಾಸಿಟಿವ್ ರಿಪೋರ್ಟ್ ಇಲ್ಲದೆಯೂ ಉಸಿರಾಟದ ಸಮಸ್ಯೆಯಿಂದ ನರಳುತ್ತಿರುವ ಮಂದಿಗೆ ರಸ್ತೆಯಲ್ಲೇ ಆಕ್ಸಿಜನ್ ಪೂರೈಸುತ್ತಿದ್ದಾರೆ.

ಪಶ್ಚಿಮ ಉತ್ತರ ಪ್ರದೇಶದ ಗಾಜಿಯಾಬಾದ್ ನಗರದ ಇಂದಿರಾಪುರಂನಲ್ಲಿ ಗುರುದ್ವಾರ ಸಮಿತಿಯವರು ಆಕ್ಸಿಜನ್ ಸಿಲಿಂಡರ್ ನೀಡುತ್ತಿದ್ದು, ಉಸಿರಾಟ ಸಮಸ್ಯೆ ಎದುರಾದ ಜನರು ಸ್ಥಳದಲ್ಲಿ ಕ್ಯೂ ನಿಲ್ಲುತ್ತಿದ್ದಾರೆ. ರಸ್ತೆ ಬದಿ ವಾಹನಗಳಲ್ಲಿಯೇ ರೋಗಿಗಳನ್ನು ಮಲಗಿಸಿ ಆಕ್ಸಿಜನ್ ನೀಡಲಾಗುತ್ತಿದೆ. ಸ್ಥಳದಲ್ಲೇ ಆಕ್ಸಿಜನ್ ಲೆವೆಲ್ ಪರೀಕ್ಷೆ ನಡೆಸುತ್ತಿದ್ದು, 50ಕ್ಕಿಂತ ಕಡಿಮೆ ಇದ್ದವರಿಗೆ ಆಕ್ಸಿಜನ್ ಸಿಲಿಂಡರ್ ಸಂಪರ್ಕ ನೀಡುತ್ತಿದ್ದಾರೆ. ನಾಲ್ಕರಿಂದ ಐದು ಗಂಟೆ ಕಾಲ ಆಕ್ಸಿಜನ್ ನೀಡಿದ ಬಳಿಕ ಸ್ವಸ್ಥರಾದಲ್ಲಿ ಮರಳಿ ಕಳಿಸಿಕೊಡುತ್ತಿದ್ದಾರೆ.

ಗಾಜಿಯಾಬಾದ್ ನಗರದಲ್ಲಿ 25 ಆಕ್ಸಿಜನ್ ಸಿಲಿಂಡರ್ ಗಳನ್ನು ಗುರುದ್ವಾರ ಸಮಿತಿಯಿಂದ ಒದಗಿಸಲಾಗಿದ್ದು ಗುರುವಾರದಿಂದ ಈವರೆಗೆ 700ಕ್ಕಿಂತಲೂ ಹೆಚ್ಚು ಮಂದಿಗೆ ಆಕ್ಸಿಜನ್ ನೀಡಲಾಗಿದೆ. 200ಕ್ಕೂ ಹೆಚ್ಚು ಕೋವಿಡ್ ಸೋಂಕಿತರು ಸರತಿಯಲ್ಲಿದ್ದಾರೆ. ಇನ್ನಷ್ಟು ಆಕ್ಸಿಜನ್ ಪೂರೈಕೆ ಮಾಡಲು ನಮ್ಮಲ್ಲಿ ಖಾಲಿ ಸಿಲಿಂಡರ್ ಇಲ್ಲ ಎಂದು ಗುರುದ್ವಾರ ಕಮಿಟಿ ಅಧ್ಯಕ್ಷ ಗುರುಪ್ರೀತ್ ಸಿಂಗ್ ಹೇಳಿದ್ದಾರೆ. ಈ ನಡುವೆ, ಇಂದಿರಾಪುರಂ ಗುರುದ್ವಾರ ಕಮಿಟಿಯವರು ತಮ್ಮ ನಂಬರ್ ಕೊಟ್ಟಿದ್ದು, ನೋಂದಣಿ ಮಾಡಿಕೊಂಡೇ ಬರುವಂತೆ ಸೂಚಿಸುತ್ತಿದ್ದಾರೆ. ಗಾಜಿಯಾಬಾದ್ ಪೂರ್ವ ದೆಹಲಿಗೆ ಸಮೀಪ ಇರುವುದರಿಂದ ದೆಹಲಿ ಭಾಗದಿಂದಲೂ ಸೋಂಕಿತರು ಉಚಿತ ಆಕ್ಸಿಜನ್ ಪಡೆಯಲು ಬರುತ್ತಿದ್ದಾರೆ.

ಜನರು ಬೆಡ್ ಸಿಗದೆ ಪರದಾಡುತ್ತಿದ್ದು, ಅಂಥವರಿಗೆ ರಸ್ತೆಯಲ್ಲೇ ಆಕ್ಸಿಜನ್ ಪೂರೈಸುವ ಗುರುದ್ವಾರ ಸಮಿತಿಯವರ ಕೆಲಸದ ಬಗ್ಗೆ ಭಾರೀ ಶ್ಲಾಘನೆಯೂ ವ್ಯಕ್ತವಾಗಿದೆ. ಕೆಲವರು ರಸ್ತೆಯಲ್ಲಿ ಆಕ್ಸಿಜನ್ ಸಿಲಿಂಡರ್ ಪೂರೈಸುವ ಸ್ಥಿತಿ ಬಂದಿರುವ ಉತ್ತರ ಪ್ರದೇಶ ಸರಕಾರದ ದುಸ್ಥಿತಿಯ ಬಗ್ಗೆ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಆ ರೀತಿಯ ವಿಡಿಯೋಗಳು ಭಾರೀ ವೈರಲ್ ಆಗಿದ್ದು ಅಲ್ಲಿನ ವಾಸ್ತವ ಸ್ಥಿತಿಗೆ ಕನ್ನಡಿ ಹಿಡಿಯುತ್ತಿದೆ.