ದೆಹಲಿಯಲ್ಲಿ ಆಕ್ಸಿಜನ್ ಗೆ ಬರಗಾಲ ; ಒಂದೇ ಆಸ್ಪತ್ರೆಯಲ್ಲಿ 20 ಮಂದಿ ಸಾವು

24-04-21 05:51 pm       Headline Karnataka News Network   ದೇಶ - ವಿದೇಶ

ಜೈಪುರ್ ಗೋಲ್ಡನ್ ಆಸ್ಪತ್ರೆಯಲ್ಲಿ ಆಮ್ಲಜನಕ ಸಿಗದೆ 20 ರೋಗಿಗಳು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ನವದೆಹಲಿ, ಏ. 24: ದೆಹಲಿಯಲ್ಲಿ ಕೊರೊನಾ ಸೋಂಕಿತರ ಪರಿಸ್ಥಿತಿ ಚಿಂತಾಜನಕವಾಗಿದೆ. ಆಮ್ಲಜನಕ ಸಿಗದೆ ಮತ್ತೆ 20 ಕೊರೊನಾ ಸೋಂಕಿತರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ಶುಕ್ರವಾರ ನಗರದ ಜೈಪುರ್ ಗೋಲ್ಡನ್ ಆಸ್ಪತ್ರೆಯಲ್ಲಿ ಆಮ್ಲಜನಕ ಸಿಗದೆ 20 ರೋಗಿಗಳು ಸಾವನ್ನಪ್ಪಿದ್ದಾರೆ. ಈಗಿರುವ ಆಮ್ಲಜನಕ ಮುಕ್ತಾಯಗೊಳ್ಳುವ ಹಂತ ತಲುಪಿದ್ದು, ವೆಂಟಿಲೇಟರ್‌ಗಳು ಬಿಐಪಿಎಪಿ ಯಂತ್ರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಇದೂ ಕೂಡ ಆತಂಕವನ್ನು ಹೆಚ್ಚಿಸಿದೆ. ಏಕೆಂದರೆ ಇನ್ನು 60 ರೋಗಿಗಳು ಅಪಾಯದಲ್ಲಿದ್ದು, ಭಾರಿ ಬಿಕ್ಕಟ್ಟು ಎದುರಾಗುವ ಆತಂಕ ಎದುರಾಗಿದೆ.

ಇಲ್ಲಿನ ಸರ್ ಗಂಗಾರಾಮ್ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಅಸ್ಪತ್ರೆಯ ಅಧಿಕಾರಿಗಳು ಐಸಿಯು ಮತ್ತು ತುರ್ತು ವಿಭಾಗಗಳಲ್ಲಿ ಮಾನವಚಾಲಿತ ವೆಂಟಿಲೇಷನ್ ಆಶ್ರಯಿಸಲು ಅಧಿಕಾರಿಗಳು ತೀವ್ರ ಪ್ರಯತ್ನ ನಡೆಸಿದ್ದಾರೆ.

ಕೇಂದ್ರ ದೆಹಲಿಯಲ್ಲಿರುವ ಈ ಆಸ್ಪತ್ರೆಯಲ್ಲಿ 500ಕ್ಕೂ ಹೆಚ್ಚು ಕೊರೊನಾ ರೋಗಿಗಳು ದಾಖಲಾಗಿದ್ದು, ಈ ಪೈಕಿ 150 ಮಂದಿಗೆ ಕ್ಷಿಪ್ರಗತಿಯ ಆಮ್ಲಜನಕ ನೆರವು ಒದಗಿಸಲಾಗಿದೆ.

ತಡರಾತ್ರಿ 5 ತಾಸುಗಳು ಆಮ್ಲಜನಕ ಪೂರೈಸಲು ಮಾತ್ರ ಅವಕಾಶವಿತ್ತು. ಇದನ್ನು ರಾತ್ರಿ 1 ಗಂಟೆವರೆಗೂ ರೋಗಿಗಳಿಗೆ ಪೂರೈಕೆ ಮಾಡಲಾಗಿದೆ. ತುರ್ತಾಗಿ ಆಮ್ಲಜನಕ ಪೂರೈಸುವಂತೆ ವಿತರಕರಿಗೆ ಮನವಿ ಮಾಡಿದ್ದೆವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾಲ್ಕು ದಿನಗಳಿಂದ ದೆಹಲಿಯ ಹಲವಾರು ಖಾಸಗಿ ಆಸ್ಪತ್ರೆಗಳಲ್ಲಿ ಹಾಹಾಕಾರ ಉಂಟಾಗಿದ್ದು, ರೋಗಿಗಳು ಪರಿತಪಿಸುವಂತಾಗಿದೆ. ಕಳೆದ ಒಂದು ದಿನದ ಹಿಂದಷ್ಟೇ ದೆಹಲಿಯ ಗಂಗಾರಾಮ್ ಆಸ್ಪತ್ರೆಯಲ್ಲಿ 25 ಕೊರೊನಾ ಸೋಂಕಿತರು ಮೃತಪಟ್ಟಿದ್ದರು.

As many as 20 patients died on Friday night and more than 200 lives are currently at stake due to lack of oxygen at Delhi`s Jaipur Golden Hospital in Rohini, Medical Director D K Baluja has informed.