ತೌಕ್ತೆ ಭೀತಿ ಮಾಸುವಾಗಲೇ ಪೂರ್ವದಲ್ಲಿ ಬಂತು ಯಾಸ್ ; ಬಂಗಾಳಕ್ಕೆ ಮತ್ತೊಂದು ಚಂಡಮಾರುತ

21-05-21 11:42 am       Headline Karnataka News Network   ದೇಶ - ವಿದೇಶ

ದೇಶದ ಪೂರ್ವ ಕರಾವಳಿಯಲ್ಲಿ ಮತ್ತೊಂದು ಚಂಡಮಾರುತ ಎದ್ದಿದ್ದು, ಬಂಗಾಶ ಕೊಲ್ಲಿಯ ಕರಾವಳಿಗೆ ಅಪ್ಪಳಿಸಲು ರೆಡಿಯಾಗುತ್ತಿದೆ. ಮೇ 25-26ರ ವೇಳೆಗೆ ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಯಾಸ್ ಹೆಸರಿನ ಚಂಡಮಾರುತ ಅಪ್ಪಳಿಸಲಿದೆ.

Photo credits : Times Now

ನವದೆಹಲಿ, ಮೇ 21: ಪಶ್ಚಿಮ ಕರಾವಳಿಯಲ್ಲಿ ಈಗಾಗ್ಲೇ ತೌಕ್ತೆ ಚಂಡಮಾರುತದ ಹೊಡೆತದಿಂದಾಗಿ ಗಾಳಿ ಮಳೆಯ ಜೊತೆ ಸಮುದ್ರ ಉಕ್ಕೇರಿದ್ದರಿಂದ ಹಲವು ಕಡೆಗಳಲ್ಲಿ ನಾಶ- ನಷ್ಟಗಳಾಗಿದ್ದವು. ಸಮುದ್ರದಲ್ಲಿ ಬೋಟ್ ಸಿಕ್ಕಿಬಿದ್ದು ದುರಂತವೂ ಎದುರಾಗಿತ್ತು. ಇದೀಗ ದೇಶದ ಪೂರ್ವ ಕರಾವಳಿಯಲ್ಲಿ ಮತ್ತೊಂದು ಚಂಡಮಾರುತ ಎದ್ದಿದ್ದು, ಬಂಗಾಶ ಕೊಲ್ಲಿಯ ಕರಾವಳಿಗೆ ಅಪ್ಪಳಿಸಲು ರೆಡಿಯಾಗುತ್ತಿದೆ. ಮೇ 25-26ರ ವೇಳೆಗೆ ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಯಾಸ್ ಹೆಸರಿನ ಚಂಡಮಾರುತ ಅಪ್ಪಳಿಸಲಿದೆ.

ಬಂಗಾಳ ಕೊಲ್ಲಿ ಭಾಗದಲ್ಲಿ ಮೀನುಗಾರರಿಗೆ ಹವಾಮಾನ ಇಲಾಖೆ ಮತ್ತು ಕೋಸ್ಟ್ ಗಾರ್ಡ್ ಪಡೆಯಿಂದ ಎಚ್ಚರಿಕೆ ನೀಡಲಾಗುತ್ತಿದ್ದು ಸಮುದ್ರಕ್ಕೆ ತೆರಳಿದ್ದವರು ಕೂಡಲೇ ಹಿಂತಿರುಗುವಂತೆ ಸೂಚನೆ ನೀಡಲಾಗುತ್ತಿದೆ. ಅಂಡಮಾನ್ ದ್ವೀಪದ ಉತ್ತರ ಭಾಗದಲ್ಲಿ ವಾಯುಭಾರ ಕುಸಿತ ಕಾಣಿಸಿಕೊಂಡಿದ್ದು ಮೇ 22ರ ವೇಳೆಗೆ ಇದು ಚಂಡಮಾರುತದ ರೂಪ ಪಡೆಯಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರದಿಂದ ಪಶ್ಚಿಮಕ್ಕೆ ಯಾಸ್ ಚಂಡಮಾರುತ ಬೀಸಲಿದ್ದು, ಮೇ 26ರ ವೇಳೆಗೆ ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಬಿರುಗಾಳಿ ಮತ್ತು ಭಾರೀ ಮಳೆಯಾಗಲಿದೆ. ಇದರ ಪರಿಣಾಮ ಆಂಧ್ರಪ್ರದೇಶ, ಅಸ್ಸಾಂ, ಮೇಘಾಲಯ ಸೇರಿದಂತೆ ಆಸುಪಾಸಿನ ಹಲವೆಡೆ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.

ತೌಕ್ತೆ ಚಂಡಮಾರುತದ ಕಾರಣ ಕೇರಳ, ಕರ್ನಾಟಕ, ಮಹಾರಾಷ್ಟ್ರ ಮತ್ತು ಗುಜರಾತ್ ಕರಾವಳಿಯಲ್ಲಿ ವ್ಯಾಪಕ ಮಳೆಯಾಗಿತ್ತು. ಕಳೆದ ಬಾರಿಯೂ 2020ರ ಮೇ ತಿಂಗಳಲ್ಲಿ ಇದೇ ರೀತಿ ಪೂರ್ವ ಮತ್ತು ಪಶ್ಚಿಮ ಭಾಗದಲ್ಲಿ ಪ್ರತ್ಯೇಕ ಎರಡು ಚಂಡಮಾರುತ ಕಾಣಿಸಿಕೊಂಡಿತ್ತು. ಪೂರ್ವದಲ್ಲಿ ಅಂಫಾನ್ ಮತ್ತು ದೇಶದ ಪಶ್ಚಿಮ ಭಾಗದಲ್ಲಿ ನಿಸರ್ಗದ ಹಾವಳಿಗೆ ಮುಂಗಾರು ಮಳೆಯನ್ನು ಹೊತ್ತು ತಂದಿದ್ದಲ್ಲದೆ, ಭಾರೀ ಮಳೆಯಾಗಿ ಆರಂಭದಲ್ಲೇ ಕೆಲವು ಕಡೆ ಆಸ್ತಿಪಾಸ್ತಿ ನಷ್ಟಗಳಾಗಿದ್ದವು.

ಈ ಬಾರಿಯೂ ಅದೇ ರೀತಿಯ ಪರಿಸರ ಬದಲಾವಣೆ ಪುನರಾವರ್ತನೆಯಾಗಿದೆ. ತೌಕ್ತೆ ಮತ್ತು ಯಾಸ್ ಹೆಸರಿನ ಚಂಡಮಾರುತ ದೇಶದ ಸುದೀರ್ಘ ಕರಾವಳಿಯಲ್ಲಿ ಗಾಳಿ ಮಳೆಯ ಪ್ರಕೋಪ ತಂದಿತ್ತಿದೆ. 

After Cyclone Tauktae battered the states along the west coast, another cyclone is likely to make landfall on the Odisha-West Bengal coast around May 26 morning.