ಕನ್ನಡ ಕೊಳಕು ; ಕನ್ನಡಿಗರು ರೊಚ್ಚಿಗೇಳುತ್ತಲೇ ತಪ್ಪು ಸರಿಪಡಿಸಿಕೊಂಡ ಗೂಗಲ್ ಸಂಸ್ಥೆ !

03-06-21 05:39 pm       Headline Karnataka News Network   ದೇಶ - ವಿದೇಶ

ಕನ್ನಡ ಭಾಷೆಯ ಬಗ್ಗೆ ಗೂಗಲ್ ಸಂಸ್ಥೆ ಕೊಳಕು ಭಾಷೆ ಎಂದಿದ್ದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಕನ್ನಡಿಗರ ಸಿಟ್ಟು, ಆಕ್ರೋಶದ ಕಾವು ಕಟ್ಟೆ ಒಡೆಯುತ್ತಿದ್ದಂತೆ ಅತ್ತ ಗೂಗಲ್ ಸಂಸ್ಥೆ ತನ್ನ ತಪ್ಪನ್ನು ಸರಿಮಾಡಿಕೊಂಡಿದೆ.

ಬೆಂಗಳೂರು, ಜೂನ್ 3: ಆರೂವರೆ ಕೋಟಿ ಕನ್ನಡಿಗರು ಮಾತನಾಡುವ ಮತ್ತು ಎರಡು ಸಾವಿರ ವರ್ಷಗಳಿಗೂ ಹೆಚ್ಚು ಇತಿಹಾಸವುಳ್ಳ ಕನ್ನಡ ಭಾಷೆಯ ಬಗ್ಗೆ ಗೂಗಲ್ ಸಂಸ್ಥೆ ಕೊಳಕು ಭಾಷೆ ಎಂದಿದ್ದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಕನ್ನಡಿಗರ ಸಿಟ್ಟು, ಆಕ್ರೋಶದ ಕಾವು ಕಟ್ಟೆ ಒಡೆಯುತ್ತಿದ್ದಂತೆ ಅತ್ತ ಗೂಗಲ್ ಸಂಸ್ಥೆ ತನ್ನ ತಪ್ಪನ್ನು ಸರಿಮಾಡಿಕೊಂಡಿದೆ.

ಗೂಗಲ್ ಸರ್ಚ್ ಇಂಜಿನಲ್ಲಿ ಭಾರತದ ಅತ್ಯಂತ ಕೊಳಕು ಭಾಷೆ ಯಾವುದೆಂದು ಇಂಗ್ಲಿಷಲ್ಲಿ ಕೇಳಿದರೆ, ಕನ್ನಡ ಎಂದು ಉತ್ತರ ಬರುತ್ತಿತ್ತು. ಗೂಗಲ್ ಸರ್ಚ್ ಇಂಜಿನಲ್ಲಿ ಪ್ರಮಾದ ಆಗಿದ್ದರೂ, ಕರುನಾಡಿನ ಕೋಟ್ಯಂತರ ಕನ್ನಡಿಗರಿಗೆ ಮಾಡಿರುವ ಅವಮಾನವೇ ಆಗಿತ್ತು. ಈ ವಿಚಾರ ಹೊರಬರುತ್ತಿದ್ದಂತೆ ಸಾವಿರಾರು ಜನರು ಟ್ವಿಟರ್, ಫೇಸ್ಬುಕ್ ನಲ್ಲಿ ಆಕ್ರೋಶದ ಕಿಡಿ ಎಬ್ಬಿಸಿದ್ದರು. ಗೂಗಲ್ ಸಿಇಓ ಆಗಿರುವ ತಮಿಳುನಾಡು ಮೂಲದ ಸುಂದರ್ ಪಿಚೈ ಅವರಿಗೇ ನೇರವಾಗಿ ಟ್ವೀಟ್ ಮಾಡಿ, ಕನ್ನಡಿಗರ ಸಿಟ್ಟನ್ನು ಹೇಳಿಕೊಂಡಿದ್ದರು.

ಗೂಗಲ್ ಇಂಡಿಯಾ ಸಂಸ್ಥೆಗೂ ನೂರಾರು ಮಂದಿ ಟ್ವೀಟ್ ಮಾಡಿದ್ದರು. ಇದರ ಜೊತೆ ಜೊತೆಗೇ ಗೂಗಲ್ ಸರ್ಚ್ ಇಂಜಿನ್ನಿಗೇ ನೇರವಾಗಿ ಫೀಡ್ ಬ್ಯಾಕ್ ಬರೆಯುವ ಮೂಲಕ ಎಚ್ಚರಿಸುವ ಕೆಲಸ ಮಾಡಿದ್ದರು. ಯಾವುದೇ ವಿಚಾರದಲ್ಲಿ ಗೂಗಲ್ ಫೀಡ್ ಬ್ಯಾಕಲ್ಲಿ ವಿರುದ್ಧವಾಗಿ ಕಮೆಂಟ್ ಮಾಡಿದರೆ, ಅದು ತನ್ನಷ್ಟಕ್ಕೆ ಡಿಲೀಟ್ ಆಗುವ ಆಪ್ಶನ್ ಗೂಗಲಲ್ಲಿದೆ. ಎಲ್ಲ ಕಡೆಯಿಂದ ಕೇಳಿಬಂದ ಒತ್ತಡ, ಆಕ್ರೋಶದ ಕಾರಣವೋ ಏನೋ, ಈ ಬೆಳವಣಿಗೆ ವರದಿಯಾದ ಕೇವಲ ಐದಾರು ಗಂಟೆಯ ಒಳಗೆ ಗೂಗಲ್ ಸಂಸ್ಥೆ ತಪ್ಪು ಸರಿಪಡಿಸಿದೆ. ಈಗ ಗೂಗಲ್ ಸರ್ಚ್ ಇಂಜಿನಲ್ಲಿ ಈ ಕುರಿತಾಗಿ ಪ್ರಶ್ನೆ ಮಾಡಿದರೆ, ಕೊಳಕು ಭಾಷೆಯೆಂಬ ಪ್ರತಿಕ್ರಿಯೆ ಬರುತ್ತಿಲ್ಲ. ಕೊಳಕು ಭಾಷೆ ಬಗ್ಗೆ ಹಲವು ಸುದ್ದಿ ಮಾಧ್ಯಮಗಳು ಬಿತ್ತರಿಸಿದ್ದ ಸುದ್ದಿಗಳಷ್ಟೇ ಕಂಡುಬರುತ್ತಿವೆ.

ಈ ಬಗ್ಗೆ ಪ್ರತಿಕ್ರಿಯಿಸಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗಾಭರಣ, ಕನ್ನಡ ಭಾಷೆಯನ್ನು ಅವಮಾನಿಸಿರುವ ಗೂಗಲ್ ಸಂಸ್ಥೆಯ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದೇವೆ. ಗೂಗಲ್ ಸಂಸ್ಥೆಗೆ ಈ ಬಗ್ಗೆ ಕಾರಣ ಕೇಳಿ ಲೀಗಲ್ ನೋಟೀಸ್ ಕಳಿಸಿದ್ದೇವೆ. ಇದೊಂದು ಬಗೆ ವ್ಯವಸ್ಥಿತ ಸಂಚು ಎನ್ನುವುದು ಸ್ಪಷ್ಟವಾಗಿದೆ ಎಂದಿದ್ದರು. 

A recent Google search result showed south Indian language Kannada as the 'ugliest language in India' and this did not sit well with netizens.