ಕೆನರಾ ಬ್ಯಾಂಕ್-ಸಿಂಡಿಕೇಟ್ ಬ್ಯಾಂಕ್ ಗ್ರಾಹಕರಿಗೆ ಮಹತ್ವ ಸೂಚನೆ

12-06-21 03:17 pm       Headline Karnataka News Network   ದೇಶ - ವಿದೇಶ

ಕೆನರಾ ಬ್ಯಾಂಕ್-ಸಿಂಡಿಕೇಟ್ ಬ್ಯಾಂಕ್ ತನ್ನ ಗ್ರಾಹಕರಿಗೆ ಮಹತ್ವ ಸೂಚನೆ ನೀಡಿದ್ದು, ಜುಲೈ 1ರಿಂದ ಸಂಸ್ಥೆಯ ಐಎಫ್ಎಸ್‌ಸಿ ಕೋಡ್ ಬದಲಾಗಲಿದೆ.

ಬೆಂಗಳೂರು, ಜೂನ್ 12: ಕೆನರಾ ಬ್ಯಾಂಕ್-ಸಿಂಡಿಕೇಟ್ ಬ್ಯಾಂಕ್ ತನ್ನ ಗ್ರಾಹಕರಿಗೆ ಮಹತ್ವ ಸೂಚನೆ ನೀಡಿದ್ದು, ಜುಲೈ 1ರಿಂದ ಸಂಸ್ಥೆಯ ಐಎಫ್ಎಸ್‌ಸಿ ಕೋಡ್ ಬದಲಾಗಲಿದೆ. ಹೊಸ ಕೋಡ್ ಬಗ್ಗೆ ಅಧಿಕೃತ ವೆಬ್ ತಾಣದಲ್ಲಿ ಮಾಹಿತಿ ಪಡೆದುಕೊಳ್ಳಿ ಎಂದು ಹೇಳಿದೆ.'

ಕೆನರಾ ಬ್ಯಾಂಕ್ ಜೊತೆ ವಿಲೀನಗೊಂಡಿರುವ ಸಿಂಡಿಕೇಟ್ ಬ್ಯಾಂಕ್ ಗ್ರಾಹಕರು ಮುಖ್ಯವಾಗಿ ಇಂಡಿಯ ಫೈನಾನ್ಶಿಯಲ್ ಸಿಸ್ಟಮ್ ಕೋಡ್(IFSC), swift ಕೋಡ್, ಚೆಕ್ ಬುಕ್ ಬಗ್ಗೆ ಗಮನ ಹರಿಸಿ, ಬದಲಾವಣೆ ಬಗ್ಗೆ ತಿಳಿದುಕೊಂಡು ವ್ಯವಹರಿಸಲು ಸೂಚಿಸಲಾಗಿದೆ. ಇಲ್ಲದಿದ್ದರೆ, ಹಳೆ ಚೆಕ್ ಬುಕ್, ಕೋಡ್ ಜುಲೈ 1ರಿಂದ ಕಾರ್ಯನಿರ್ವಹಿಸುವುದಿಲ್ಲ.

ವಿಲೀನದ ಬಳಿಕ ಸಿಂಡಿಕೇಟ್ ಬ್ಯಾಂಕ್ IFSC ಕೋಡ್ (SYNB) ಇನ್ಮುಂದೆ ಕೆನರಾಬ್ಯಾಂಕಿನ CNRB ಆಗಿ ಬದಲಾಗಲಿದೆ. NEFT/RTGS/IMPS ಮೂಲಕ ವ್ಯವಹರಿಸುವಾಗ ದಯವಿಟ್ಟು ಹೊಸ IFSC ಕೋಡ್(CNRB) ಎಂದು ತನ್ನ ಗ್ರಾಹಕರಿಗೆ ಕೆನರಾಬ್ಯಾಂಕ್ ಸೂಚಿಸಿದೆ.



IFSC ಕೋಡ್ ಏನು ಬದಲಾವಣೆ

ಸಿಂಡಿಕೇಟ್ ಬ್ಯಾಂಕ್ ಹಳೆ IFSC ಕೋಡ್ (SYNB) ಕಾರ್ಯನಿರ್ವಹಿಸುವುದಿಲ್ಲ ಕೆನರಾಬ್ಯಾಂಕಿನ CNRB ಮಾತ್ರ ಬಳಕೆಯಲ್ಲಿರಲಿದೆ. ಉದಾಹರಣೆಗೆ ಈ ಮುಂಚೆ SYNB 0003687 ಎಂದಿದ್ದರೆ, ಹೊಸ ಬದಲಾವಣೆ ನಂತರ CNRB 0013687 ಎಂದಾಗಲಿದೆ. ಮಿಕ್ಕ IFSC ಕೋಡ್ ಕೂಡಾ ಇದೇ ರೀತಿ (ಹಳೆ ಕೋಡ್‌ಗೆ 10,000 ಸೇರಿಸಿ) ಬದಲಾಗಲಿದೆ.



ಹೆಚ್ಚಿನ ಮಾಹಿತಿ ಎಲ್ಲಿ ಸಿಗಲಿದೆ

ಹಳೆ IFSC ಕೋಡ್ ಹಾಗೂ ಬದಲಾದ IFSC ಕೋಡ್ ವಿವರಗಳು ಕೆನರಾ ಬ್ಯಾಂಕಿನ ಅಧಿಕೃತ ವೆಬ್ ತಾಣ (www.canarabank.com) ದಲ್ಲಿ ಸಿಗಲಿದೆ. ಮುಖಪುಟದಲ್ಲಿ KIND ATTN: E SYNDICATE CUSTOMERS: KNOW YOUR NEW IFSC ಎಂಬ ಲಿಂಕ್ ಕ್ಲಿಕ್ ಮಾಡಿದರೆ ಮಾಹಿತಿ ಸಿಗಲಿದೆ. ಅಥವಾ ನಿಮ್ಮ ಸಮೀಪದ ಕೆನರಾ ಬ್ಯಾಂಕ್ ಶಾಖೆಗೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗೆ ಸಹಾಯವಾಣಿ 1800 425 0018ಗೆ ಕರೆ ಮಾಡಬಹುದು.

ಸ್ವಿಫ್ಟ್ ಕೋಡ್ ಬದಲಾವಣೆ

ವಿದೇಶಿ ವಿನಿಮಯ ವ್ಯವಹಾರಕ್ಕಾಗಿ ಬಳಸಲಾಗುವ ಸ್ವಿಫ್ಟ್ ಕೋಡ್ ಕೂಡಾ ಬದಲಾಗಲಿದೆ. SYNBINBBXXX ರೀತಿ ಬಳಸುತ್ತಿದ್ದ ಸ್ವಿಫ್ಟ್ ಕೋಡ್ ಜುಲೈ 1 ರಿಂದ ಕಾರ್ಯ ನಿರ್ವಹಿಸುವುದಿಲ್ಲ. ಎಲ್ಲಾ ಗ್ರಾಹಕರು ಇನ್ಮುಂದೆ ಹೊಸ ಸ್ವಿಫ್ಟ್ ಕೋಡ್ ಬಳಸಿ, ವಿದೇಶಿ ವಿನಿಮಯ ವ್ಯವಹಾರ ನಡೆಸಬೇಕಾಗುತ್ತದೆ. ಹೊಸ ಸ್ವಿಫ್ಟ್ ಕೋಡ್ CNRBINBBBFD ಮಾತ್ರ ಬಳಸಬೇಕು ಎಂದು ಬ್ಯಾಂಕ್ ಸೂಚಿಸಿದೆ.



ಚೆಕ್ ಬುಕ್ ಏನು ಬದಲಾವಣೆ

IFSC, swift ಕೋಡ್ ಅಲ್ಲದೆ ಸಿಂಡಿಕೇಟ್ ಬ್ಯಾಂಕ್ ಗ್ರಾಹಕರ ಚೆಕ್ ಬುಕ್ ಕೂಡಾ ಬದಲಾಗಲಿದೆ. ಹಳೆ ಎಂಐಸಿಆರ್ ಹಾಗೂ ಐ ಎಫ್ ಎಸ್ ಸಿ ಕೋಡ್ ಇರುವ ಇಸಿಂಡಿಕೇಟ್ ಬ್ಯಾಂಕ್ ಚೆಕ್ ಬುಕ್ ಜೂನ್ 30, 2021ರಿಂದ ಕಾರ್ಯ ನಿರ್ವಹಿಸುವುದಿಲ್ಲ. ಥರ್ಡ್ ಪಾರ್ಟಿ ಹಳೆ ಚೆಕ್‌ಗಳನ್ನು ಜೂನ್ 30, 2021ರೊಳಗೆ ಬದಲಾಯಿಸಿಕೊಳ್ಳಲು ಸೂಚಿಸಲಾಗಿದೆ.