ಗ್ಯಾಲ್ವಾನ್ ಕಣಿವೆ ಸಂಘರ್ಷಕ್ಕೆ ವರ್ಷ ; ಚೀನೀಯರ ತೀರದ ದಾಹಕ್ಕೆ ತೆತ್ತಿದ್ದರು 20 ಯೋಧರು ಪ್ರಾಣ !

15-06-21 04:14 pm       Headline Karnataka News Network   ದೇಶ - ವಿದೇಶ

ಕಳೆದ ವರ್ಷ ಚೀನಾ ಜೊತೆಗಿನ ಗಡಿ ಸಂಘರ್ಷಕ್ಕೆ ಕಾರಣವಾಗಿದ್ದ ಗ್ಯಾಲ್ವಾನ್ ಕಣಿವೆಯ ಘರ್ಷಣೆ ಮತ್ತು ದುರಂತದ ಸನ್ನಿವೇಶ ನಡೆದು ಇಂದಿಗೆ ಒಂದು ವರ್ಷ ಪೂರ್ತಿಯಾಗಿದೆ.

ನವದೆಹಲಿ, ಜೂನ್ 15: ಕಳೆದ ವರ್ಷ ಚೀನಾ ಜೊತೆಗಿನ ಗಡಿ ಸಂಘರ್ಷಕ್ಕೆ ಕಾರಣವಾಗಿದ್ದ ಗ್ಯಾಲ್ವಾನ್ ಕಣಿವೆಯ ಘರ್ಷಣೆ ಮತ್ತು ದುರಂತದ ಸನ್ನಿವೇಶ ನಡೆದು ಇಂದಿಗೆ ಒಂದು ವರ್ಷ ಪೂರ್ತಿಯಾಗಿದೆ. ಚೀನಾ ಮತ್ತು ಭಾರತದ ಸೇನಾ ಯೋಧರ ನಡುವಿನ ಘರ್ಷಣೆಯಲ್ಲಿ ಕರ್ನಲ್ ಸಂತೋಷ್ ಬಾಬು ಸೇರಿ 20 ಮಂದಿ ಭಾರತೀಯ ಯೋಧರು ಪ್ರಾಣ ಕಳಕೊಂಡಿದ್ದರು.

ಗ್ಯಾಲ್ವಾನ್ ಕಣಿವೆಯ ಘರ್ಷಣೆಯಲ್ಲಿ ಭಾರತೀಯ ಯೋಧರು ಪ್ರಾಣ ಕಳಕೊಂಡಿದ್ದು ದೇಶಾದ್ಯಂತ ಚೀನಾ ವಿರುದ್ಧ ಆಕ್ರೋಶದ ಜ್ವಾಲೆ ಎದ್ದಿತ್ತು. ಚೀನಾ ವಿರುದ್ಧ ಯುದ್ಧ ಸಾರುವಂತೆಯೂ ಒತ್ತಡಗಳು ಕೇಳಿಬಂದಿದ್ದವು. ಆನಂತರ ತಿಂಗಳ ಕಾಲ ಚೀನಾ ಗಡಿಯುದ್ದಕ್ಕೂ ಯುದ್ಧ ಸನ್ನಿವೇಶ ಏರ್ಪಟ್ಟು ಲಡಾಖ್ ಪ್ರಾಂತದಲ್ಲಿ 50 ಸಾವಿರಕ್ಕೂ ಹೆಚ್ಚು ಯೋಧರನ್ನು ನಿಯೋಜನೆ ಮಾಡಲಾಗಿತ್ತು. ಆನಂತರ ಚೀನಾ ಮತ್ತು ಭಾರತದ ಸೇನಾಧಿಕಾರಿಗಳ ಮಟ್ಟದಲ್ಲಿ ಹನ್ನೊಂದು ಬಾರಿ ನಡೆದ ಮಾತುಕತೆಯ ಬಳಿಕ ಸಂಘರ್ಷದ ವಾತಾವರಣಕ್ಕೆ ತೆರೆ ಬಿದ್ದಿತ್ತು.

ಏನಾಗಿತ್ತು ಗ್ಯಾಲ್ವಾನ್ ಕಣಿವೆಯ ಸಂಘರ್ಷ ?

ಅಂದು ಎಂದಿನಂತೆ ವಾಸ್ತವ ನಿಯಂತ್ರಣ ರೇಖೆಯ ಉದ್ದಕ್ಕೂ ಯೋಧರು ಗಸ್ತು ನಿರತರಾಗಿದ್ದರು. ಭಾರತೀಯ ಯೋಧರು ಗಡಿಯಲ್ಲಿ ಗಸ್ತಿನಲ್ಲಿದ್ದಾಗ ಚೀನಾ ಯೋಧರು ಜಟಾಪಟಿಗೆ ಮುಂದಾಗಿದ್ದು ರಾತ್ರೋರಾತ್ರಿ ಆರು ಗಂಟೆಗಳ ಕಾಲ ಕಾದಾಟ ನಡೆಸಿದ್ದಾರೆ. ಆದರೆ, ನಿರಾಯುಧರಾಗಿ ಕಲ್ಲು , ಕಬ್ಬಿಣದ ರಾಡ್ ಗಳಿಂದಲೇ ಹಲ್ಲೆ, ಪ್ರತಿ ದಾಳಿಯ ಸಂಘರ್ಷ ನಡೆದಿದ್ದು, ಭಾರತದ ಕರ್ನಲ್ ಸಂತೋಷ್ ಬಾಬು ಸೇರಿ 20 ಮಂದಿ ಯೋಧರನ್ನು ಹಿಮದಂತೆ ಶೀತಲವಾಗಿದ್ದ ನದಿಗೆ ನೂಕಿ ಕ್ರೌರ್ಯ ಮೆರೆದಿದ್ದಾರೆ. ನೂರಕ್ಕೂ ಹೆಚ್ಚು ಮಂದಿ ಯೋಧರು ಚೀನಾ ಯೋಧರ ಜೊತೆ ಸಂಘರ್ಷದಲ್ಲಿ ತೊಡಗಿದ್ದರು.

ಭಾರತದ ಕಡೆಯಿಂದ ಪ್ರಮುಖವಾಗಿ 16ನೇ ಬಿಹಾರ ರೆಜಿಮೆಂಟಿನ ಯೋಧರು ಅಲ್ಲಿ ಗಸ್ತಿನಲ್ಲಿದ್ದರು. ರೆಜಿಮೆಂಟಿನ ಕಮಾಂಡಿಂಗ್ ಆಫೀಸರ್ ಆಗಿದ್ದ ಸಂತೋಷ್ ಬಾಬು ಸೇರಿ 20 ಮಂದಿ ದುರಂತದಲ್ಲಿ ಸಾವು ಕಂಡಿದ್ದರು. ಚೀನಾ ಕಡೆಯಲ್ಲಿ 43 ಯೋಧರು ಇದೇ ಸಂಘರ್ಷದಲ್ಲಿ ಸಾವನ್ನಪ್ಪಿದ್ದರು ಅನ್ನುವ ಮಾಹಿತಿಯನ್ನು ಭಾರತದ ಸೇನೆ ಹೇಳಿತ್ತು. ಆದರೆ, ಭಾರತೀಯ ಯೋಧರ ಮಾಹಿತಿಯನ್ನು ಚೀನಾ ನಿರಾಕರಿಸಿತ್ತು. ಕೇವಲ ನಾಲ್ಕು ಮಂದಿ ಯೋಧರು ಸಾವನ್ನಪ್ಪಿದ್ದಾಗಿ ಹೇಳಿ ವಾಸ್ತವ ಮರೆಮಾಚಿತ್ತು.

ಕಲ್ಲು, ಭರ್ಚಿಯನ್ನೊಳಗೊಂಡ ಮುಷ್ಟಿ ಕಾಳಗ ಚೀನಾ ಮತ್ತು ಭಾರತದ ಯೋಧರ ತಾಕತ್ತನ್ನು ಹಿಮಶಿಖರಗಳ ನಡುವೆ ಒರೆಗೆ ಹಚ್ಚಿತ್ತು. ಭಾರತೀಯ ಯೋಧರು ನಿರಾಯುಧರಾಗಿದ್ದಾಗ ಉದ್ದೇಶಪೂರ್ವಕವಾಗಿ ಈ ರೀತಿಯ ಹಲ್ಲೆ ನಡೆಸಲಾಗಿತ್ತು ಎನ್ನುವ ಆರೋಪ ಸೇನೆಯಿಂದ ಕೇಳಿಬಂದಿದ್ದರಿಂದ ಭಾರತ ಸರಕಾರ ಚೀನಾ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ಚೀನಾ ಜೊತೆಗೆ ವ್ಯಾಪಾರ ಸಂಬಂಧ ಮುಂದುವರಿಸಬಾರದು, ಚೀನಾ ವಸ್ತುಗಳನ್ನು ಬಹಿಷ್ಕರಿಸಬೇಕೆಂಬ ಒತ್ತಾಯ ದೇಶಾದ್ಯಂತ ಮೊಳಗಿತ್ತು. ಇದರ ಮೊದಲ ಹೆಜ್ಜೆಯಾಗಿ ಚೀನಾ ಮೂಲದ ವಿವಿಧ ಮಾದರಿಯ ವಿಡಿಯೋ ಗೇಮ್ಸ್ ಏಪ್ಸ್ ಸೇರಿ 100ಕ್ಕೂ ಮಿಕ್ಕಿದ ಕಂಪನಿಗಳ ಉತ್ಪನ್ನಗಳಿಗೆ ಭಾರತ ನಿಷೇಧ ಹೇರಿತ್ತು. 

June 15 marks one year of the deadly Galwan Valley clash in eastern Ladakh which resulted in the death of 20 Indian soldiers, including Commanding Officer Colonel Santosh Babu, and an unspecified number of Chinese troops.