ಕೇಂದ್ರ ಸಂಪುಟ ವಿಸ್ತರಣೆಗೆ ಕಸರತ್ತು ; ಸರಣಿ ಸಭೆ ನಡೆಸುತ್ತಿರುವ ಮೋದಿ, ಅಮಿತ್ ಷಾ

16-06-21 12:37 pm       Headline Karnataka News Network   ದೇಶ - ವಿದೇಶ

ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಕೇಂದ್ರದ ಸಂಪುಟ ಸಚಿವರು ಹಾಗೂ ಬಿಜೆಪಿ ವರಿಷ್ಠರೊಂದಿಗೆ ಮ್ಯಾರಥಾನ್‌ ಸಭೆಗಳನ್ನು ನಡೆಸುತ್ತಿದ್ದಾರೆ. 

ನವದೆಹಲಿ, ಜೂನ್ 16: ಎರಡು ವರ್ಷಗಳ ಬಳಿಕ ಕೇಂದ್ರ ಸಂಪುಟ ವಿಸ್ತರಣೆ ಪಕ್ಕಾ ಆಗಿದೆ. ಇದಕ್ಕಾಗಿ ಕಳೆದ ಐದು ದಿನಗಳಿಂದಲೂ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಕೇಂದ್ರದ ಸಂಪುಟ ಸಚಿವರು ಹಾಗೂ ಬಿಜೆಪಿ ವರಿಷ್ಠರೊಂದಿಗೆ ಮ್ಯಾರಥಾನ್‌ ಸಭೆಗಳನ್ನು ನಡೆಸುತ್ತಿದ್ದಾರೆ. 

ಈಗಾಗ್ಲೇ ಉತ್ತರ ಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್‌ ಸೇರಿದಂತೆ ಹಲವು ರಾಜ್ಯಗಳ ಬಿಜೆಪಿ ಸಂಸದರೊಂದಿಗೆ ಅಮಿತ್ ಷಾ ಸಭೆ ನಡೆಸಿದ್ದಾರೆ. ಸುಮಾರು 30 ಸಂಸದರು ಸಭೆಯಲ್ಲಿ ಪಾಲ್ಗೊಂಡಿದ್ದರೆಂದು ತಿಳಿದುಬಂದಿದೆ. ಪ್ರಸ್ತುತ ಕೇಂದ್ರ ಸಂಪುಟದಲ್ಲಿ 28 ಸ್ಥಾನಗಳು ಖಾಲಿ ಇದ್ದು, ಸಂಸದರು ತಮ್ಮ ಕ್ಷೇತ್ರಗಳಲ್ಲಿ ಕೋವಿಡ್‌ ನಿರ್ವಹಣೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಲ್ಲಿ ತೋರಿದ ದಕ್ಷತೆ ಆಧರಿಸಿ ಅಂಕಗಳನ್ನು ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಕಳೆದ ಎರಡು ವರ್ಷಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ರಾಜ್ಯಗಳಿಂದ ಕೇಂದ್ರ ಸಂಪುಟದಲ್ಲಿ ಪ್ರಾತಿನಿಧ್ಯಕ್ಕೆ ಒತ್ತಡ ಹೆಚ್ಚಿದ್ದರಿಂದ ಸಂಪುಟ ವಿಸ್ತರಣೆಗೆ ಮೋದಿ ಕೈ ಹಾಕಿದ್ದಾರೆ ಎಂದು ಹೇಳಲಾಗಿದೆ. ಬಿಹಾರ ಸಿಎಂ ನಿತೀಶ್‌ ನೇತೃತ್ವದ ಜೆಡಿಯು ಕೇಂದ್ರ ಸಂಪುಟದಲ್ಲಿ ಸ್ಥಾನಕ್ಕಾಗಿ ಮೊದಲಿನಿಂದಲೂ ಬೇಡಿಕೆ ಇಟ್ಟಿದೆ. 

ಎಲ್‌ಜೆಪಿ ಪಕ್ಷದಿಂದಲೂ ಕೇಂದ್ರ ಸಂಪುಟ ಸೇರಲು ಬೇಡಿಕೆಯಿದೆ. ಇತ್ತ ಮಧ್ಯಪ್ರದೇಶದಲ್ಲಿ ಬೆಂಬಲಿಗರೊಂದಿಗೆ ಬಿಜೆಪಿಗೆ ಜಿಗಿದ ಜ್ಯೋತಿರಾದಿತ್ಯ ಸಿಂಧಿಯಾಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಪಶ್ಚಿಮ ಬಂಗಾಳದ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್‌ ಘೋಷ್‌ಗೂ ಸಂಪುಟ ಸ್ಥಾನ ಸಿಗುವ ಸಾಧ್ಯತೆಯಿದೆ. ಈ ಮಧ್ಯೆ, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ ಸಂಪುಟದ ಪುನಾರಚನೆಗೂ ಭಾರಿ ಲೆಕ್ಕಾಚಾರಗಳು ನಡೆಯುತ್ತಿವೆ. ಇತ್ತೀಚೆಗೆ ಪ್ರಧಾನಿ ಮೋದಿ ಜತೆ ಸಿಎಂ ಆದಿತ್ಯನಾಥ್‌ ಖುದ್ದು ಭೇಟಿ ಬಳಿಕ ಈ ಪ್ರಕ್ರಿಯೆ ಮತ್ತಷ್ಟು ವೇಗ ಪಡೆದಿದೆ.

Amit Shah had met MPs from Uttar Pradesh, Maharashtra, Rajasthan, Gujarat, and some other states on Saturday and Sunday at his residence.