19 ವರ್ಷಕ್ಕೇ ಆರು ತಿಂಗಳ ಕೂಸಿನ ಜೊತೆ ಬೀದಿಗೆ ಬಿದ್ದ ಹುಡುಗಿಯೀಗ ಪೊಲೀಸ್ ಅಧಿಕಾರಿ ! ಇದು ರೀಲ್ ಅಲ್ಲ, ರಿಯಲ್ !

28-06-21 03:31 pm       Headline Karnataka News Network   ದೇಶ - ವಿದೇಶ

ಹತ್ತು ವರ್ಷಗಳ ಹಿಂದೆ ಅದೇ ಬೀದಿಯಲ್ಲಿ ನಿಂಬೆ ಪಾನಕ ಮಾರುತ್ತಿದ್ದ 31 ವರ್ಷದ ಹೆಣ್ಮಗಳೀಗ ಅದೇ ಊರಿನ ಪೊಲೀಸ್ ಠಾಣೆಯಲ್ಲಿ ಅಧಿಕಾರಿಯಾಗಿ ಸೇವೆ ಆರಂಭಿಸಿದ್ದಾಳೆ.  

ತಿರುವನಂತಪುರ, ಜೂನ್ 28: ಸಾಧಿಸಿದರೆ ಜೀವನದಲ್ಲಿ ಯಾವುದು ಕೂಡ ಅಸಾಧ್ಯವಲ್ಲ ಎನ್ನುವ ಮಾತಿದೆ. ಈ ಹೆಣ್ಮಗಳ ಪಾಲಿಗೆ, ಈ ರೀತಿಯ ಗಾದೆ ಮಾತುಗಳೇ ಅಸಾಧ್ಯವನ್ನು ಸಾಧ್ಯವಾಗಿಸಿದೆ. ಹೌದು.. ಹತ್ತು ವರ್ಷಗಳ ಹಿಂದೆ ಅದೇ ಬೀದಿಯಲ್ಲಿ ನಿಂಬೆ ಪಾನಕ ಮಾರುತ್ತಿದ್ದ 31 ವರ್ಷದ ಹೆಣ್ಮಗಳೀಗ ಅದೇ ಊರಿನ ಪೊಲೀಸ್ ಠಾಣೆಯಲ್ಲಿ ಅಧಿಕಾರಿಯಾಗಿ ಸೇವೆ ಆರಂಭಿಸಿದ್ದಾಳೆ.  

ಹೌದು.. ಕೇರಳದ ರಾಜಧಾನಿ ತಿರುವನಂತಪುರ ಜಿಲ್ಲೆಯ ವರ್ಕಳ ಠಾಣೆಯಲ್ಲಿ ಜೂನ್ 25ರಂದು ಎಸ್ಐ ಆಗಿ ಅಧಿಕಾರ ವಹಿಸಿಕೊಂಡ ಅನ್ನಿ ಶಿವಾ ಎಂಬ ಹೆಣ್ಮಗಳ ಜೀವನ ಗಾಥೆಯೇ ಸ್ಫೂರ್ತಿಯ ಚಿಲುಮೆ. ತಿರುವನಂತಪುರ ಜಿಲ್ಲೆಯ ಕಂಜಿರಾಮ್ಕುಳಂ ಎನ್ನುವ ಗ್ರಾಮದ ನಿವಾಸಿಯಾಗಿರುವ ಅನ್ನಿ, ಮೊದಲ ವರ್ಷದ ಪದವಿ ಓದುತ್ತಿದ್ದಾಗ ಪ್ರೀತಿಯಲ್ಲಿ ಬಿದ್ದು ತನ್ನ ಸಹಪಾಠಿಯನ್ನೇ ಮದುವೆಯಾಗಿದ್ದಳು. ಹೆತ್ತವರ ವಿರೋಧದ ಮಧ್ಯೆ ಮದುವೆಯಾಗಿದ್ದು ಇಡೀ ಸಮಾಜವನ್ನೇ ಎದುರು ಹಾಕ್ಕೊಳ್ಳುವಂತಾಗಿತ್ತು. ದುರಂತ, ಅಂದ್ರೆ, ಮದುವೆಯಾಗಿ ಕೂಸು ಹುಟ್ಟುವಷ್ಟರಲ್ಲಿ ಅನ್ನೀ ಶಿವಾ ಬೀದಿಗೆ ಬಿದ್ದಿದ್ದಳು. ಕಟ್ಟಿಕೊಂಡ ಒಂದೇ ವರ್ಷದಲ್ಲಿ ಹುಡುಗ ಆಕೆಯನ್ನು ಮನೆಯಿಂದ ಹೊರಕ್ಕಟ್ಟಿದ್ದ.

ಮರಳಿ ಮನೆಗೆ ತೆರಳಿದ ಅನ್ನಿಯನ್ನು ಹೆತ್ತವರು ಒಳಗೆ ಸೇರಿಸಿಕೊಂಡಿರಲಿಲ್ಲ. ಆರು ತಿಂಗಳ ಮಗುವಿನ ಜೊತೆ ಅಕ್ಷರಶಃ ಬೀದಿಗೆ ಬಿದ್ದಿದ್ದ ಹದಿಹರೆಯದ ಹುಡುಗಿ ಅನ್ನಿಗೆ ದಿಕ್ಕೇ ತೋಚಲಿಲ್ಲ. ಕೂಸನ್ನು ಹೆಗಲಿಗೇರಿಸಿಕೊಂಡು ಬೀದಿ ಅಲೆದಿದ್ದ ಹುಡುಗಿ ಕೊನೆಗೆ ಅಜ್ಜಿ ಮನೆಯ ಹತ್ತಿರ ಸಣ್ಣ ಗುಡಿಸಲು ಕಟ್ಟಿಕೊಂಡು ಜೀವನ ಆರಂಭಿಸಿದ್ದಳು. ತಿನ್ನುವುದಕ್ಕೇ ಗತಿಯಿಲ್ಲ. ಇನ್ನು ಕೂಸಿಗೇನು ಕೊಡುವುದು.. ದುರ್ಗತಿಯ ಮಧ್ಯೆಯೇ ಜೀವನದಲ್ಲಿ ಏನಾದ್ರೂ ಸಾಧಿಸಲೇಬೇಕೆಂಬ ಛಲ ಹೊತ್ತು ಮನೆಯಿಂದ ಹೊರಕ್ಕೆ ಕಾಲಿಟ್ಟಿದ್ದಳು ಅನ್ನಿ.

ವರ್ಕಳದ ಶಿವಗಿರಿ ಆಶ್ರಮದ ಬಳಿ ನಿಂತು ಪ್ರವಾಸಿಗರನ್ನು ಕರೆಯುತ್ತಾ ನಿಂಬೆ ಪಾನಕ, ಐಸ್ ಕ್ರೀಮ್, ಎಳನೀರು ಮಾರುತ್ತಾ ಜೀವನದ ಬಂಡಿ ಆರಂಭಿಸಿದ್ದಳು. ಇದರ ಬಗ್ಗೆ ಆಕೆಯೇ ತನ್ನ ಫೇಸ್ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾಳೆ. ನಾನು ಮೊದಲಿಗೆ ಮೀನು ಪದಾರ್ಥ ಮಾಡುವ ಪೌಡರ್, ಸೋಪ್ ಮಾರಲು ಆರಂಭಿಸಿದ್ದೆ. ಆಬಳಿಕ ಇನ್ ಶೂರೆನ್ಸ್ ಏಜಂಟ್ ಕೂಡ ಆಗಿದ್ದೆ. ಬಳಿಕ ಸಣ್ಣ ಮೋಟರ್ ಸೈಕಲ್ ಪಡೆದು, ಮನೆ ಮನೆಗೆ ಅಗತ್ಯ ಸಾಮಗ್ರಿಗಳನ್ನು ತಲುಪಿಸುವ ಕೆಲಸ ಮಾಡುತ್ತಿದ್ದೆ. ಹೀಗೆ ಗಳಿಸಿದ ಹಣದಲ್ಲಿ ಸಮಾಜ ಶಾಸ್ತ್ರದಲ್ಲಿ ಪದವಿಯನ್ನೂ ಪೂರೈಸಿದೆ.

ಈ ರೀತಿಯ ಬದುಕಿನ ಹೋರಾಟದ ಸಂದರ್ಭದಲ್ಲೇ 2014ರಲ್ಲಿ ಸ್ನೇಹಿತರೊಬ್ಬರು ನೀಡಿದ್ದ ಸಲಹೆ ನನ್ನ ಬದುಕಿಗೆ ತಿರುವು ಕೊಟ್ಟಿತು. ಎಸ್ಐ ಪರೀಕ್ಷೆ ಬರೆಯುವಂತೆ ಅವರು ನೀಡಿದ್ದ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ, ತರಬೇತಿ ಕೇಂದ್ರಕ್ಕೆ ಸೇರಿದ್ದೆ. ಅಲ್ಲಿ ತರಬೇತಿಯಲ್ಲಿ ಇದ್ದಾಗಲೇ 2016ರಲ್ಲಿ ಮಹಿಳಾ ಪೇದೆಯಾಗಿ ಪೊಲೀಸ್ ಇಲಾಖೆಯನ್ನು ಸೇರುವ ಅವಕಾಶ ದೊರಕಿತು. ಮೂರು ವರ್ಷ ಪೇದೆಯಾಗಿದ್ದಾಗಲೇ 2019ರಲ್ಲಿ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಪರೀಕ್ಷೆ ಬರೆದು ಪಾಸ್ ಆಗಿದ್ದೆ.

ಆನಂತರ ಒಂದೂವರೆ ವರ್ಷ ಪ್ರೊಬೇಶನರಿ ಅವಧಿ ಮುಗಿಸಿದ ಅನ್ನಿ ಶಿವಾ ಮೊನ್ನೆ ಜೂನ್ 25ರಂದು ವರ್ಕಳ ಠಾಣೆಯಲ್ಲಿ ಎಸ್ಐ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಹಳೆಯದನ್ನು ಹೇಗೆ ಮರೆಯೋಕೆ ಸಾಧ್ಯ. ಇದೇ ಬೀದಿಯಲ್ಲಿ ನಿಂತು ನಿಂಬೆ ಪಾನಕ ಮಾರಿದ್ದೆ ಎಂದು ಹೇಳುವ ಅನ್ನಿ ಬಗ್ಗೆ ಕೇರಳದ ಪೊಲೀಸ್ ಇಲಾಖೆಯೇ ಹೆಮ್ಮೆಯ ಮಾತುಗಳನ್ನಾಡಿದೆ. ಆತ್ಮವಿಶ್ವಾಸ, ವಿಲ್ ಪವರ್ ಏನು ಅನ್ನೋದಕ್ಕೆ ಅನ್ನಿಯೇ ನಿಜವಾದ ರೋಲ್ ಮಾಡೆಲ್ ಎಂದು ಪೊಲೀಸ್ ಇಲಾಖೆಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮೆಚ್ಚುಗೆ ಸೂಚಿಸಲಾಗಿದೆ.

ಕೆಲವು ದಿನಗಳ ಹಿಂದೆಯಷ್ಟೇ ನನಗೆ ವರ್ಕಳ ಸ್ಟೇಶನ್ನಿಗೆ ಮೊದಲ ಪೋಸ್ಟಿಂಗ್ ಆಗ್ತಿರೋದು ತಿಳಿದುಬಂತು. ಆ ಸ್ಟೇಶನ್ ಎದುರುಗಡೆ ಕುಳಿತು, ಸಣ್ಣ ಕೂಸನ್ನು ಹಿಡಿದು ಅದೆಷ್ಟು ಕಣ್ಣೀರು ಹಾಕಿದ್ದೆ. ಅಂದು ನನಗೆ ಯಾರೂ ನೆರವಿಗೆ ಬಂದಿರಲಿಲ್ಲ ಎಂದು ಎಎನ್ಐ ಸುದ್ದಿಸಂಸ್ಥೆಗೆ ನೀಡಿರುವ ಹೇಳಿಕೆಯೇ ಎಲ್ಲವನ್ನೂ ಹೇಳುತ್ತದೆ.

ಇತ್ತೀಚೆಗೆ ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಸಾವಿಗೆ ಶರಣಾದ ಹೆಣ್ಮಕ್ಕಳಿಗೂ ಆಕೆ ಸಂದೇಶ ನೀಡಿದ್ದಾಳೆ. ಗಂಡನಿಂದ ಬೇರ್ಪಟ್ಟೋ, ಕಿರುಕುಳದಿಂದಲೋ ಮನೆಗೆ ಬರುವ ಹುಡುಗಿಯನ್ನು ಹೆತ್ತವರು ಸ್ವೀಕರಿಸದೆ ತಪ್ಪು ಮಾಡುತ್ತಾರೆ. ಸಮಾಜ ಏನು ಹೇಳುತ್ತೋ, ಯಾರು ಏನು ಹೇಳ್ತಾರೋ ಅನ್ನುವ ಭಯದಲ್ಲಿ ಆಕೆಯನ್ನು ಗಂಡನ ಮನೆಯಲ್ಲಿ ಕೊಳೆಯಲು ಬಿಡುತ್ತಾರೆ. ಇಂತಹ ಮನಸ್ಥಿತಿ ಮೊದಲು ಬದಲಾಗಬೇಕು ಎಂದು ಉಪದೇಶ ನೀಡುತ್ತಾರೆ, ಅನ್ನಿ ಶಿವಾ. 

An 19-year-old girl who was left on the streets with her 6-month-old baby after being abandoned by her husband and family has become sub-inspector at Varkala police station here. A true model of willpower and confidence, Kanjiramkulam native Anie Siva built her life within 14 years.