ಡಿ.27ರಂದು 9ನೇ ವರ್ಷದ ಮಂಗಳೂರು ಕಂಬಳ ; ನವ ವರ್ಷ- ನವ ವಿಧ ಪರಿಕಲ್ಪನೆ, ಬ್ಯಾಕ್ ಟು ಊರು ಉದ್ಯಮಿಗಳಿಗೆ ಗೌರವ, ರಾಣಿ ಅಬ್ಬಕ್ಕ ಚಿತ್ರಕಲಾ ಪ್ರದರ್ಶನ, ಎಐ ಕ್ರಿಯೇಟಿವ್ ಯೋಧ ಸ್ಪರ್ಧೆ 

24-12-25 10:30 pm       Mangalore Correspondent   ಕರಾವಳಿ

ನಗರದ ಬಂಗ್ರಕೂಳೂರಿನ ಗೋಲ್ಡ್ ಪಿಂಚ್ ಸಿಟಿಯ ರಾಮ-ಲಕ್ಷ್ಮಣ ಜೋಡುಕರೆಯಲ್ಲಿ ಡಿ.27ರಂದು 9ನೇ ವರ್ಷದ 'ಮಂಗಳೂರು ಕಂಬಳ' ನವ ಮಾದರಿಯ ಕಾರ್ಯಕ್ರಮಗಳೊಂದಿಗೆ ವೈಶಿಷ್ಟ್ಯಪೂರ್ಣವಾಗಿ ನಡೆಯಲಿದೆ ಎಂದು ಕಂಬಳ ಸಮಿತಿ ಅಧ್ಯಕ್ಷರು ಹಾಗೂ ದಕ್ಷಿಣ ಕನ್ನಡ ಸಂಸದರಾದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.  

ಮಂಗಳೂರು, ಡಿ.24 : ನಗರದ ಬಂಗ್ರಕೂಳೂರಿನ ಗೋಲ್ಡ್ ಪಿಂಚ್ ಸಿಟಿಯ ರಾಮ-ಲಕ್ಷ್ಮಣ ಜೋಡುಕರೆಯಲ್ಲಿ ಡಿ.27ರಂದು 9ನೇ ವರ್ಷದ 'ಮಂಗಳೂರು ಕಂಬಳ' ನವ ಮಾದರಿಯ ಕಾರ್ಯಕ್ರಮಗಳೊಂದಿಗೆ ವೈಶಿಷ್ಟ್ಯಪೂರ್ಣವಾಗಿ ನಡೆಯಲಿದೆ ಎಂದು ಕಂಬಳ ಸಮಿತಿ ಅಧ್ಯಕ್ಷರು ಹಾಗೂ ದಕ್ಷಿಣ ಕನ್ನಡ ಸಂಸದರಾದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.  
 
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 'ಡಿ.27ರಂದು ಬೆಳಗ್ಗೆ 8.30ಕ್ಕೆ ಕಂಕನಾಡಿ ಶ್ರೀ ಬ್ರಹ್ಮಬೈದರ್ಕಳ ಗರಡಿಯ ಅಧ್ಯಕ್ಷ ಕೆ. ಚಿತ್ತರಂಜನ್‌ ಮಂಗಳೂರು ಕಂಬಳವನ್ನು ದೀಪ ಪ್ರಜ್ವಲನೆ ಮಾಡುವುದರೊಂದಿಗೆ ಉದ್ಘಾಟಿಸಲಿದ್ದಾರೆ. ಕಂಬಳವು ಕರಾವಳಿಯ ವಿಶಿಷ್ಟ ಸಂಸ್ಕೃತಿಯ ಪ್ರತೀಕ. ಕಂಬಳದ ಅಸ್ಮಿತೆಗೆ ಧಕ್ಕೆ ತರುವ ಪ್ರಯತ್ನಗಳು ನಡೆದಾಗ ಅದರ ವಿರುದ್ದ ಸಿಡಿದೆದ್ದು ಆರಂಭವಾದ ಸಣ್ಣ ಪ್ರಯತ್ನವೇ ಮಂಗಳೂರು ಕಂಬಳವಾಗಿದ್ದು ಕಳೆದ 9 ವರ್ಷಗಳಿಂದ ಸಂಭ್ರಮದ ಕೂಟವಾಗಿ ಮುನ್ನಡೆಯುತ್ತಿದೆ. ಡಿ.27ರಂದು ಸಂಜೆ 6 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಆರ್.ಜಿ. ಗ್ರೂಪ್ ನ ಸಿ.ಎಂ.ಡಿ ಹಾಗೂ ಮಂಗಳೂರು ಕಂಬಳ ಸಮಿತಿಯ ಗೌರವಾಧ್ಯಕ್ಷರಾದ ಡಾ.ಕೆ. ಪ್ರಕಾಶ್ ಶೆಟ್ಟಿ ವಹಿಸಲಿದ್ದಾರೆ. ಜತೆಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಸೇರಿದಂತೆ ರಾಜ್ಯದ ಅನೇಕ ಶಾಸಕರು, ಸಂಸದರು, ಮಾಜಿ ಶಾಸಕರು, ಧಾರ್ಮಿಕ -ಸಾಮಾಜಿಕ ಕ್ಷೇತ್ರಗಳ ಮುಖಂಡರು, ಉದ್ಯಮಿಗಳು, ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಮಂಗಳೂರು ಈಗಾಗಲೇ 'ಕ್ಲೀನ್ ಮತ್ತು ಸೇಫ್ ಸಿಟಿ' ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೇ ಶಿಸ್ತನ್ನು ನಮ್ಮ ಕಂಬಳದ ವೇದಿಕೆಯಲ್ಲೂ ಮುಂದುವರಿಸಿ ಪರಿಸರಕ್ಕೆ ಹಾನಿಯಾಗುವ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ, ಪರಿಸರ ಸ್ನೇಹಿಯಾದ ಕಂಬಳ ಆಯೋಜನೆಗೆ ಪ್ರಯತ್ನ ಮಾಡಲಾಗುವುದು. ಈ ಬಾರಿಯ ಕಂಬಳದಲ್ಲಿ 160ರಿಂದ 170 ಜತೆ ಕೋಣಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.

ನವ ವರ್ಷ - ನವ ವಿಧ ಪರಿಕಲ್ಪನೆ 

ಮಂಗಳೂರು ಕಂಬಳಕ್ಕೆ ಒಂಬತ್ತು ವರ್ಷಗಳ ಸಂಭ್ರಮವಾಗಿರುವ ಹಿನ್ನೆಲೆಯಲ್ಲಿ ನವ ವರ್ಷ -ನವ ವಿಧ ಪರಿಕಲ್ಪನೆಯಡಿ ಕಂಬಳ ಕೂಟವನ್ನು ಆಯೋಜಿಸಲಾಗಿದೆ. ಐದು ಚಟುವಟಿಕೆ ಹಾಗೂ ನಾಲ್ಕು ಸ್ಪರ್ಧೆಗಳು ನಡೆಯಲಿರುವುದು ಈ ಬಾರಿಯ ಕಂಬಳದ ವಿಶೇಷತೆ. 

ರಾಣಿ ಅಬ್ಬಕ್ಕ ಚಿತ್ರಕಲಾ ಪ್ರದರ್ಶನ 

ತುಳುನಾಡಿನ ಹೆಮ್ಮಯ ವೀರ ವನಿತೆ ರಾಣಿ ಅಬ್ಬಕ್ಕಳ 500ನೇ ಜನ್ಮ ವರ್ಷಾಚರಣೆ ಪ್ರಯುಕ್ತ ರಾಣಿ ಅಬ್ಬಕ್ಕ ತುಳು ಅಧ್ಯಯನ ಪೀಠದ ಡಾ.ತುಕಾರಾಂ ಪೂಜಾರಿಯವರ ಸಹಯೋಗದೊಂದಿಗೆ ಆಕೆಯ ಶೌರ್ಯವನ್ನು ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ "ರಾಣಿ ಅಬ್ಬಕ್ಕ ಚರಿತ್ರಾ ಚಿತ್ರಕಲಾ ಪ್ರದರ್ಶನʼ  ಆಯೋಜಿಸಲಾಗಿದೆ. 

ವಂದೇ ಮಾತರಂ 150ನೇ ವರ್ಷಾಚರಣೆ 

ಕಂಬಳ ಉದ್ಘಾಟನೆ ವೇಳೆ ವಂದೇ ಮಾತರಂ ಗೀತೆಗೆ 150ನೇ ವರ್ಷದ ಸವಿನೆನಪಿಗೆ ಒಟ್ಟು 150 ವಿದ್ಯಾರ್ಥಿನಿಯರಿಂದ ವಂದೇ ಮಾತರಂ ಸಮೂಹ ಗಾಯನ ಕೂಡ ನಡೆಯಲಿದೆ. ಏಕ್ ಪೆಡ್ ಮಾ ಕೆ ನಾಮ್ ಎನ್ನುವ ಪ್ರಧಾನಿ ನರೇಂದ್ರ ಮೋದಿಯವರ ಪರಿಸರ ಸಂರಕ್ಷಣೆಯ ಪರಿಕಲ್ಪನೆಯಂತೆ ಕಂಬಳದಲ್ಲಿ ಗಿಡಗಳ ವಿತರಣೆ ಮಾಡಲಾಗುವುದು. ತಾಯಿ ಹೆಸರಲ್ಲಿ ಒಂದು ಗಿಡ ನೆಟ್ಟು ಪೋಷಿಸುವಂತೆ ಪ್ರೇರಣೆ ನೀಡಲಾಗುವುದು.

ಬ್ಯಾಕ್ ಟು ಊರು ಉದ್ಯಮಿಗಳಿಗೆ ಗೌರವ 

ದೇಶ- ವಿದೇಶದಲ್ಲಿ ಯಶಸ್ವಿಯಾದ ಮಂಗಳೂರಿಗರು ’ಬ್ಯಾಕ್ ಟು ಊರು' ಎನ್ನುವ ವಿಶಿಷ್ಟ ಪರಿಕಲ್ಪನೆಯಡಿ ಊರಿಗೆ ವಾಪಾಸ್ಸಾಗಿ ನಮ್ಮೂರಿನಲ್ಲಿಯೇ ಉದ್ಯಮ ಸ್ಥಾಪಿಸಿರುವ 9 ಮಂದಿ ಉದ್ಯಮಿಗಳಿಗೆ ಅಂದು ಸಂಜೆ ಸನ್ಮಾನಿಸಲಾಗುವುದು. 

ಹಿರಿಯ ಚೇತನಗಳಿಗೆ ಕಂಬಳ ಸಂಭ್ರಮ 

ಮಂಗಳೂರಿನ ಹಲವು ವೃದ್ಧಾಶ್ರಮದ ಹಿರಿಯ ಚೇತನಗಳನ್ನು ಕಂಬಳ ಸಂಭ್ರಮಕ್ಕೆ ಕರೆಸಿಕೊಂಡು ವೀಕ್ಷಣೆಗೆ ಅವಕಾಶ ನೀಡಲಾಗುವುದು. ಸಮಾಜವು ಸದಾ ನಿಮ್ಮೊಂದಿಗಿದೆ ಎನ್ನುವ ಮಮತೆಯ ಕಲ್ಪನೆಯಡಿ, ಹಿರಿಯರಿಗೆ ನಮ್ಮ ಸಂಸ್ಕೃತಿಯ ಕ್ರೀಡೆಯನ್ನು ಹತ್ತಿರದಿಂದ ನೋಡುವ ಅವಕಾಶ ನೀಡುವುದು ಇದರ ಉದ್ದೇಶ.

ಮಕ್ಕಳಿಗೆ ಹಲವು ಸ್ಪರ್ಧೆಗಳು 

ರಂಗ್ ದ ಕೂಟ ಡ್ರಾಯಿಂಗ್ ಸ್ಪರ್ಧೆ - 10 ವರ್ಷದ ವರೆಗಿನ ಮಕ್ಕಳು 'ರಂಗ್‌ದ ಎಲ್ಯ', 10ರಿಂದ 15 ವರ್ಷದೊಳಗಿನ ಮಕ್ಕಳು 'ರಂಗ್‌ದ ಮಲ್ಲ' ವಿಭಾಗದಲ್ಲಿ
ಭಾಗವಹಿಸಬಹುದು. ಇನ್ನು ರಂಗ್‌ ಕೂಟ ವಿಭಾಗದಲ್ಲಿ ವಯೋಮಿತಿಯ ನಿರ್ಬಂಧ ಇಲ್ಲ. ಮಂಗಳೂರು ಕಂಬಳ ಕುರಿತು  ಫೋಟೊಗ್ರಫಿ ಸ್ಪರ್ಧೆಗೆ ಅವಕಾಶವಿದ್ದು ಉತ್ತಮ ಛಾಯಾಚಿತ್ರಕ್ಕೆ ನಗದು ಬಹುಮಾನ ನೀಡಲಾಗುವುದು.

ಎಐ ಕ್ರಿಯೇಟಿವ್ ಯೋಧ ಸ್ಪರ್ಧೆ 

ಕೃತಕ ಬುದ್ಧಿಮತ್ತೆಯನ್ನು (AI) ಕ್ರಿಯಾತ್ಮಕವಾಗಿ ಬಳಸಿಕೊಂಡು ಮಂಗಳೂರು ಕಂಬಳದ ಗತ್ತನ್ನು ಪರಿಚಯಿಸಲು ವೇದಿಕೆ ಸೃಷ್ಟಿಸಲಾಗಿದೆ. ಎಐ ಬಳಸಿ ಮಂಗಳೂರು ಕಂಬಳವನ್ನು ಕೃತಕವಾಗಿ ಸೃಷ್ಟಿಸುವ ವಿಡಿಯೋಗಳಿಗೆ ಬಹುಮಾನ ಇರಲಿದೆ. ಕಂಬಳ ಕುರಿತು ರೀಲ್ಸ್ ಸಿದ್ಧಪಡಿಸಲು ಅವಕಾಶಗಳಿದ್ದು ಸ್ಪರ್ಧಾಳುಗಳು ತಾವು ಸಿದ್ಧಪಡಿಸಿದ ರೀಲ್ಸ್‌ಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವಾಗ #mangalurukambala ಹ್ಯಾಶ್‌ಟ್ಯಾಗ್ ಬಳಸಿ, ಅಧಿಕೃತ ಖಾತೆಯೊಂದಿಗೆ Collaboration ಮಾಡಬೇಕು ಎಂದು ಮಾಹಿತಿ ನೀಡಿದ್ದಾರೆ. 

ಸುದ್ದಿಗೋಷ್ಟಿಯಲ್ಲಿ ಕಂಬಳ ಸಮಿತಿಯ ಗೌರವ ಸಲಹೆಗಾರರಾದ ಪ್ರಸಾದ್ ಕುಮಾರ್ ಶೆಟ್ಟಿ, ವಿಜಯ್ ಕುಮಾರ್ ಕೆಂಗಿನಮನೆ, ಉಪಾಧ್ಯಕ್ಷರಾದ ಕಿರಣ್ ಕುಮಾರ್ ಕೋಡಿಕಲ್, ಸಂಜಯ್ ಪ್ರಭು, ಜೋಯಲೆಸ್ ಡಿಸೋಜ, ವಸಂತ್ ಜೆ. ಪೂಜಾರಿ, ನಂದನ್ ಮಲ್ಯ, ಅಜಿತ್ ಬೋಪಯ್ಯ, ಗುರುಚಂದ್ರ ಹೆಗಡೆ, ಅಭಿಷೇಕ್ ರೈ, ಈಶ್ವರ್ ಪ್ರಸಾದ್, ಸಾಕ್ಷತ್ ಶೆಟ್ಟಿ, ಪ್ರಕಾಶ್ ಗರೋಡಿ, ಸಂಚಾಲಕರಾದ ಸಾಂತ್ಯಗುತ್ತು ಸಚಿನ್ ಶೆಟ್ಟಿ, ಕಾರ್ಯದರ್ಶಿ ಅವಿನಾಶ್ ಸುವರ್ಣ, ಸುಜಿತ್ ಪ್ರತಾಪ್ ಮುಂತಾದವರು ಉಪಸ್ಥಿತರಿದ್ದರು.

The 9th edition of Mangaluru Kambala will be held on December 27 at Gold Finch City’s Rama–Lakshmana Jodukere with several new attractions. The event features the Rani Abbakka art exhibition, AI Creative Warrior contest, Back to Ooru entrepreneur felicitation, and multiple children’s competitions. Around 160–170 Kambala buffalo pairs are expected to participate. Celebrations will include a 150-student chorus for the 150th year of Vande Mataram and a green initiative to promote sapling planting.