ಸಂಪುಟಕ್ಕೆ ಸರ್ಜರಿ ; ಮೋದಿ ಕರೆದಿದ್ದ ಸಭೆ ದಿಢೀರ್ ರದ್ದು, ಜುಲೈ 8ರಂದು ವಿಸ್ತರಣೆ ಸಾಧ್ಯತೆ

06-07-21 01:01 pm       Headline Karnataka News Network   ದೇಶ - ವಿದೇಶ

ಹಿರಿಯ ಸಚಿವರು ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರೊಂದಿಗೆ ಆಯೋಜಿಸಲಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಸಭೆಯನ್ನು ದಿಢೀರ್ ರದ್ದು ಮಾಡಲಾಗಿದೆ.

ನವದೆಹಲಿ, ಜುಲೈ  6 : ಕೇಂದ್ರ ಸಚಿವ ಸಂಪುಟ ವಿಸ್ತರಣೆ ಕುರಿತು ಊಹಾಪೋಹಗಳು ಎದ್ದಿರುವ ನಡುವೆಯೇ ಮಂಗಳವಾರ ಸಂಜೆ 5 ಗಂಟೆಗೆ ಹಿರಿಯ ಸಚಿವರು ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರೊಂದಿಗೆ ಆಯೋಜಿಸಲಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಸಭೆಯನ್ನು ದಿಢೀರ್ ರದ್ದು ಮಾಡಲಾಗಿದೆ.

ಸಚಿವರ ಕಾರ್ಯದಕ್ಷತೆ ಮತ್ತು ಭವಿಷ್ಯದ ಯೋಜನೆಗಳ ಕುರಿತು ಚರ್ಚಿಸಲು ಸಭೆ ಆಯೋಜಿಸಲಾಗಿತ್ತು ಎನ್ನಲಾಗಿದೆ. ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಧರ್ಮೇಂದ್ರ ಪ್ರಧಾನ್, ಪಹ್ಲಾದ ಜೋಷಿ, ಪಿಯೂಷ್ ಗೋಯಲ್ ಮತ್ತು ನರೇಂದ್ರ ಸಿಂಗ್ ತೋಮರ್ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿತ್ತು. 

ಇದಕ್ಕೂ ಮುನ್ನ ಸೋಮವಾರ, ಪ್ರಧಾನಿ ಮೋದಿ ಅವರು ಅಮಿತ್ ಶಾ ಹಾಗೂ ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಜೊತೆಗೆ ಸುದೀರ್ಘ ಮಾತುಕತೆ ನಡೆಸಿದ್ದರು. ಇದು ಸಂಪುಟ ವಿಸ್ತರಣೆ ಕುರಿತಾದ ಸುದೀರ್ಘ ಚಟುವಟಿಕೆಗಳಿಗೆ ಅಂತಿಮ ಸ್ಪರ್ಶ ನೀಡುವ ಉದ್ದೇಶದ ಸಭೆ ಎನ್ನಲಾಗಿದೆ.

ಜೂನ್ 20ರಿಂದಲೂ ಪ್ರಧಾನಿ ಮೋದಿ, ವಿವಿಧ ಸಚಿವಾಲಯಗಳ ಕಾರ್ಯವೈಖರಿ, ಪ್ರದರ್ಶನಗಳ ಪರಾಮರ್ಶನಾ ಸಭೆಗಳನ್ನು ನಡೆಸಿದ್ದರು. ಸಂಪುಟ ವಿಸ್ತರಣೆಗೆ ತಯಾರಿ ಪೂರ್ಣಗೊಂಡಿದ್ದು ಯಾವ ರಾಜ್ಯದಿಂದ ಯಾರನ್ನು ಸಚಿವರನ್ನಾಗಿ ಮಾಡಬೇಕು ಮತ್ತು ಯಾರನ್ನು ಕೈಬಿಡಬೇಕು ಎನ್ನುವ ಬಗ್ಗೆ ನಿರ್ಣಯ ಆಗಿದೆ. 2019ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಇದೇ ಮೊದಲ ಬಾರಿ ಸಂಪುಟ ವಿಸ್ತರಣೆ ಚಟುವಟಿಕೆ ನಡೆಯುತ್ತಿದೆ. ಒಟ್ಟು 28 ಸಚಿವ ಸ್ಥಾನಗಳು ಖಾಲಿ ಇದ್ದು, ಇದರಲ್ಲಿ ಕನಿಷ್ಠ 18 ಸ್ಥಾನ ಭರ್ತಿಯಾಗುವ ನಿರೀಕ್ಷೆಯಿದೆ. ಜುಲೈ 7 ಅಥವಾ 8ರಂದು ಸಂಪುಟ ವಿಸ್ತರಣೆ ಖಚಿತ ಎಂದು ಹೇಳಲಾಗುತ್ತಿದೆ.

PM Modi’s meeting with Amit Shah, JP Nadda, top ministers Rajnath Singh and others on Tuesday evening on the likely plans of Cabinet expansion has been canceled.