ಕೇರಳದಲ್ಲಿ ಕೊರೊನಾ ಲಸಿಕೆ ಪಡೆಯದವರಿಗೆ ಸರಕಾರದ ಉಚಿತ ಚಿಕಿತ್ಸೆ ಇಲ್ಲ ; ಸಿಎಂ ಪಿಣರಾಯಿ  

30-11-21 10:09 pm       HK Desk news   ದೇಶ - ವಿದೇಶ

ಕೇರಳದಲ್ಲಿ ಕೊರೊನಾ ಲಸಿಕೆ ಪಡೆಯದೇ ನಿರ್ಲಕ್ಷ್ಯ ವಹಿಸಿದವರಿಗೆ ಪ್ರತಿಯಾಗಿ ಸರಕಾರದ ಉಚಿತ ಚಿಕಿತ್ಸೆಯನ್ನು ಕಡಿತ ಮಾಡಲು ಸರಕಾರ ನಿರ್ಧರಿಸಿದೆ.

ತಿರುವನಂತಪುರ, ನ.30: ಕೇರಳದಲ್ಲಿ ಕೊರೊನಾ ಲಸಿಕೆ ಪಡೆಯದೇ ನಿರ್ಲಕ್ಷ್ಯ ವಹಿಸಿದವರಿಗೆ ಪ್ರತಿಯಾಗಿ ಸರಕಾರದ ಉಚಿತ ಚಿಕಿತ್ಸೆಯನ್ನು ಕಡಿತ ಮಾಡಲು ಸರಕಾರ ನಿರ್ಧರಿಸಿದೆ. ಕೋವಿಡ್ ಹತೋಟಿಗಾಗಿ ಲಸಿಕಾ ಕಾರ್ಯಕ್ಕೆ ಸಹಕರಿಸದೇ ಇದ್ದವರಿಗೆ ಸರಕಾರ ಈ ಮೂಲಕ ಹೊಸ ಟ್ರೀಟ್ಮೆಂಟ್ ನೀಡಿದೆ.

ಲಸಿಕೆ ಪಡೆಯದೇ ಕೊರೊನಾ ಸೋಂಕಿಗೆ ತುತ್ತಾದಲ್ಲಿ ಅಂಥವರಿಗೆ ಸರಕಾರದಿಂದ ಉಚಿತ ಚಿಕಿತ್ಸೆಯನ್ನು ನೀಡಲಾಗುವುದಿಲ್ಲ ಎಂದು ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ. ಅಲ್ಲದೆ, ಆರೋಗ್ಯ ತೊಂದರೆಯಿಂದ ಲಸಿಕೆ ಪಡೆಯದೇ ಇದ್ದರೆ ಅಂಥವರು ವೈದ್ಯರಿಂದ ಸರ್ಟಿಫಿಕೇಟ್ ಹೊಂದಿರಬೇಕು. ಶಿಕ್ಷಕರು, ಶಿಕ್ಷಕೇತರ ಸಿಬಂದಿಯೂ ಇದೇ ರೀತಿ ಆರೋಗ್ಯ ತೊಂದರೆಯಿಂದಾಗಿ ಲಸಿಕೆ ಪಡೆಯದೇ ಇದ್ದರೆ, ಅಂಥವರು ವೈದ್ಯರ ಸರ್ಟಿಫಿಕೇಟನ್ನು ಸರಕಾರಕ್ಕೆ ಸಲ್ಲಿಸಬೇಕು ಎಂದು ಹೇಳಿದ್ದಾರೆ.

ಲಸಿಕೆ ಪಡೆದಿರುವ ಶಿಕ್ಷಕ ಸಿಬಂದಿ ಮತ್ತು ಇತರೇ ಸರಕಾರಿ ಸಿಬಂದಿ ಏಳು ದಿನಗಳಿಗೊಮ್ಮೆ ಆರ್ ಟಿಪಿಸಿಆರ್ ಟೆಸ್ಟ್ ಮಾಡಿಸಿ, ಕೋವಿಡ್ ನೆಗೆಟಿವ್ ವರದಿಯನ್ನು ಹೊಂದಿರಬೇಕು. ಇದರ ವೆಚ್ಚವನ್ನು ಅವರೇ ಭರಿಸಬೇಕು ಎಂದು ಸಿಎಂ ಸೂಚನೆ ನೀಡಿದ್ದಾರೆ. ಶಾಲೆ, ಕಾಲೇಜು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ನಿರ್ಧಾರಕ್ಕೆ ಬರಲಾಗಿದೆ.

ಇದಲ್ಲದೆ, ಓಮಿಕ್ರಾನ್ ವೈರಸ್ ಭೀತಿ ಹಿನ್ನೆಲೆಯಲ್ಲಿ ವಿದೇಶಗಳಿಂದ ಬರುವ ಮಂದಿಯನ್ನು ಸೂಕ್ತವಾಗಿ ತಪಾಸಣೆ ನಡೆಸಬೇಕು. ಟ್ರಾವೆಲ್ ಹಿಸ್ಟರಿಯನ್ನು ಪರಿಶೀಲನೆ ನಡೆಸಬೇಕು ಎಂದು ಸಿಎಂ ಸೂಚನೆ ನೀಡಿದ್ದಾರೆ. ಡಿಸೆಂಬರ್ 1ರಿಂದ 15ರ ವರೆಗೆ ಕೇರಳ ರಾಜ್ಯದಾದ್ಯಂತ ಕೊರೊನಾ ಲಸಿಕೆಯ ಅಭಿಯಾನ ಜಾಗೃತಿ ನಡೆಸಲು ಮುಖ್ಯಮಂತ್ರಿ ಮುಂದಾಗಿದ್ದಾರೆ.

Kerala Chief Minister Pinarayi Vijayan on Tuesday said that those not cooperating with the covid prevention activities will not be given free treatment in case of infection. “The treatment expense of those turning Covid-19 positive without having taken the vaccine will not be borne by the government," Vijayan said.