ಕನ್ನಡದ ಹಿರಿಯ ನಟ ಬಿಎಂ ಕೃಷ್ಣೇಗೌಡ ನಿಧನ

25-05-21 02:28 pm       Filmbeat : Bharath Kumar K   ಸಿನಿಮಾ

ಸಿನಿಮಾ ಕ್ಷೇತ್ರದಲ್ಲಿ ದಶಕಗಳಿಂದಲೂ ತೊಡಗಿಕೊಂಡಿದ್ದ ಕನ್ನಡದ ಹಿರಿಯ ಕಲಾವಿದ ಬಿಎಂ ಕೃಷ್ಣೇಗೌಡ ಸೋಮವಾರ ಕೊನೆಯುಸಿರೆಳೆದರು.

ರಂಗಭೂಮಿ, ಕಿರುತೆರೆ ಹಾಗೂ ಸಿನಿಮಾ ಕ್ಷೇತ್ರದಲ್ಲಿ ದಶಕಗಳಿಂದಲೂ ತೊಡಗಿಕೊಂಡಿದ್ದ ಕನ್ನಡದ ಹಿರಿಯ ಕಲಾವಿದ ಬಿಎಂ ಕೃಷ್ಣೇಗೌಡ ಸೋಮವಾರ ಕೊನೆಯುಸಿರೆಳೆದರು.

80 ವರ್ಷದ ಕೃಷ್ಣೇಗೌಡರಿಗೆ ಇತ್ತೀಚಿಗಷ್ಟೆ ಕೊರೊನಾ ಸೋಂಕು ತಗುಲಿತ್ತು. ನಂತರ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕೃಷ್ಣೇಗೌಡರು ಈಗ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕೃಷ್ಣೇಗೌಡರ ನಿಧನಕ್ಕೆ ಹಿರಿಯ ಕಲಾವಿದ ಮುಖ್ಯಮಂತ್ರಿ ಚಂದ್ರು ಸಂತಾಪ ಸೂಚಿಸಿದ್ದಾರೆ. ''ಇತ್ತೀಚಿಗೆ ಐದಾರು ವರ್ಷಗಳವರೆಗೂ ನಾಟಕ ಮಾಡ್ತಿದ್ರು. ಆಮೇಲೆ ಆರೋಗ್ಯದ ಕೆಟ್ಟ ಕಾರಣ ನಟನೆ ನಿಲ್ಲಿಸಿದರು. ಬಹಳ ಸಜ್ಜನ ವ್ಯಕ್ತಿ ಕೊರೊನಾ ಸೋಂಕು ತಗುಲಿತ್ತು. ನಂತರ ಚೇತರಿಸಿಕೊಂಡಿದ್ದರು. ಆದ್ರೀಗ, ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದಾರೆ. 40 ವರ್ಷದ ಗೆಳೆಯನನ್ನು ಕಳೆದಕೊಂಡಿದ್ದೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ'' ಎಂದು ಮುಖ್ಯಮಂತ್ರಿ ಚಂದ್ರು ಬೇಸರ ವ್ಯಕ್ತಪಡಿಸಿದರು.



ಇತ್ತೀಚಿಗಷ್ಟೆ ಕೃಷ್ಣೇಗೌಡರ ಮಗ ಕೊರೊನಾದಿಂದ ಮೃತಪಟ್ಟಿದ್ದರು. ಮಗ ಸಾವನ್ನಪ್ಪಿದ ಕೆಲವೇ ದಿನದಲ್ಲಿ ಕೃಷ್ಣೇಗೌಡರು ವಿಧಿವಶರಾಗಿರುವುದು ಕುಟುಂಬ ಮತ್ತು ಆಪ್ತರಲ್ಲಿ ದುಃಖ ತಂದಿದೆ.

ಬಿಎಂ ಕೃಷ್ಣೇಗೌಡ ಕುರಿತು ಕರ್ನಾಟಕ ರಾಜ್ಯದ ಅಕೌಂಟೆಂಟ್ ಜನರಲ್ ಕಚೇರಿಯಲ್ಲಿ ಉದ್ಯೋಗದಲ್ಲಿದ್ದುಕೊಂಡು ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದವರು. ಅಬ್ಬೂರು ಜಯತೀರ್ಥ, ಆರ್.ನಾಗೇಶ್, ಶ್ರೀನಿವಾಸ ಪ್ರಭು, ಡಾ.ಬಿ.ವಿ.ರಾಜಾರಾಂ ಮುಂತಾದ ನಿರ್ದೇಶಕರ ನಿರ್ದೇಶನದಲ್ಲಿ ಅಭಿನಯಿಸಿದ್ದರು.

ಮುಖ್ಯಮಂತ್ರಿ ನಾಟಕದಲ್ಲಿನ ಪಾತ್ರ ಇವರಿಗೆ ಖ್ಯಾತಿ ತಂದಿತ್ತು. ಚಿತ್ರರಂಗದಲ್ಲಿ ಪೋಷಕ ನಟನೆಗೆ ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆದಿದ್ದರು. ಕೃಷ್ಣೇಗೌಡರು ಕ್ರೀಡಾ ಕ್ಷೇತ್ರದಲ್ಲೂ ಹೆಸರು ಮಾಡಿದ್ದರು. ರಾಜ್ಯ ಮಟ್ಟದ ಉತ್ತಮ ವಾಲಿಬಾಲ್ ಪಟು ಆಗಿದ್ದವರು.

(Kannada Copy of  film beat Kannada)