ಉದಯೋನ್ಮುಖ ನಟ ಸಂಚಾರಿ ವಿಜಯ್ ಇನ್ನಿಲ್ಲ

14-06-21 01:14 pm       Headline Karnataka News Network   ಸಿನಿಮಾ

ರಸ್ತೆ ಅಪಘಾತಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಸಂಚಾರಿ ವಿಜಯ್ ವಿಧಿವಶರಾಗಿದ್ದಾರೆ.

ಬೆಂಗಳೂರು, ಜೂನ್ 14: ರಸ್ತೆ ಅಪಘಾತಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ವಿಧಿವಶರಾಗಿದ್ದಾರೆ.

ಅಪಘಾತ ನಡೆದಾಗ ಮೆದುಳಿಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಅವರಿಗೆ ತಕ್ಷಣ ಶಸ್ತ್ರ ಚಿಕಿತ್ಸೆ ಮಾಡಿ, ಐಸಿಯುನಲ್ಲಿ ಇರಿಸಲಾಗಿತ್ತು. ಆದರೆ ಅವರು ಚಿಕಿತ್ಸೆಗೆ ಯಾವುದೇ ರೀತಿಯಲ್ಲೂ ಸ್ಪಂದಿಸದೆ, ಕೊನೆಯುಸಿರೆಳೆದಿದ್ದಾರೆ.

ಇಂದು ಬೆಳಗ್ಗೆ ನಟನ ಆರೋಗ್ಯದ ಬಗ್ಗೆ ಅಪೊಲೋ ಆಸ್ಪತ್ರೆ ವೈದ್ಯ ಡಾ. ಅರುಣ್ ಕುಮಾರ್ ನಾಯ್ಕ್ ಮಾತನಾಡಿ, ಸಂಚಾರಿ ವಿಜಯ್ ಗೆ ಚಿಕಿತ್ಸೆ ಶುರುವಾಗಿ 36 ಗಂಟೆಗೆ ಆಗಿದೆ. ಆಸ್ಪತ್ರೆಗೆ ಬಂದಾಗ ಅವರ ಪರಿಸ್ಥಿತಿ ತುಂಬಾ ಚಿಂತಾಜನಕವಾಗಿತ್ತು. ಆಸ್ಪತ್ರೆಗೆ ಬಂದ ಕೆಲವೇ ನಿಮಿಷದಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಯ್ತು. ಸದ್ಯ ಅವರ ಬ್ರೈನ್ ಫೇಲ್ಯೂರ್ ಆಗಿದೆ. 36 ಗಂಟೆಯಾದ್ರೂ ವಿಜಯ್ ಸ್ಪಂದಿಸ್ತಿಲ್ಲ. ಎಷ್ಟೇ ಚಿಕಿತ್ಸೆ ಕೊಟ್ರು ಸ್ಪಂದಿಸ್ತಿಲ್ಲ. ಮೆದುಳು ಚಿಕಿತ್ಸೆಗೆ ಸ್ಪಂದಿಸ್ತಿಲ್ಲ. ಎಲ್ಲಾ ಚಿಕಿತ್ಸೆ ಕೊಡಲಾಗ್ತಿದೆ. ವಿಜಯ್ ಉಸಿರಾಟ ಕೂಡ ಕ್ಷೀಣವಾಗಿದೆ. ಚಿಕಿತ್ಸೆ ಕೊಟ್ರೂ ರಿಕವರಿ ಕಷ್ಟ ಎಂಬುದಾಗಿ ವೈದ್ಯರು ಮಾಹಿತಿ ನೀಡಿದ್ದಾರೆ.

ನಾನು ಅವನಲ್ಲ ಅವಳು ಸಿನಿಮಾಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದಿರುವ ನಟ ಸಂಚಾರಿ ವಿಜಯ್, ಅಲ್ಲಮ, ವಿಲನ್, ಗೋಧಿ ಬಣ್ಣ ಸಾಧಾರಣ ಮೈಕಟ್ಟು,ಒಗ್ಗರಣೆ, ಕೃಷ್ಣ ತುಳಸಿ, ಕಿಲ್ಲಿಂಗ್ ವೀರಪ್ಪನ್, ಮುಂತಾದ ಅನೇಕ ಸಿನಿಮಾಗಳಲ್ಲಿ ತಮ್ಮ ನಟನ ಪ್ರತಿಭೆಯನ್ನು ತೋರಿಸಿದ್ದರು.

ಸ್ಯಾಂಡಲ್ ವುಡ್ ಮಾತ್ರವಲ್ಲದೆ ಕಾಲಿವುಡ್ ಚಿತ್ರರಂಗದಲ್ಲೂ ವಿಜಯ್ ನಟಿಸಿದ್ದಾರೆ. ಕೋವಿಡ್ ಮೊದಲ ಅಲೆಯಿಂದಾಗಿ ಆಗಿದ್ದ ಲಾಕ್​ಡೌನ್​ ತೆರೆವುಗೊಂಡ ನಂತರ ರಿಲೀಸ್ ಆಗಿದ್ದ ಸಿನಿಮಾ ಆಕ್ಟ್ 1978 ಚಿತ್ರದಲ್ಲೂ ನಟಿಸಿದ್ದಾರೆ. 2011ರಲ್ಲಿ ತೆರೆಕಂಡ ರಂಗಪ್ಪ ಹೋಗ್ಬಿಟ್ನಾ ಚಿತ್ರದ ಮೂಲಕ ಸಂಚಾರಿ ವಿಜಯ್​ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು.

ಅಪಘಾತವಾಗಿದ್ದು ಹೇಗೆ?
ಶನಿವಾರ ರಾತ್ರಿ ಗೆಳೆಯನ ಮನೆಯಲ್ಲಿ ಊಟ ಮಾಡಿಕೊಂಡು ಬೈಕ್ ನಲ್ಲಿ ಹಿಂದಿರುಗಿತ್ತಿದ್ದರು. ಬೈಕ್ ಗೆಳೆಯ ನವೀನ್ ಓಡಿಸುತ್ತಿದ್ದರು. ವಿಜಯ್ ಹಿಂಬದಿಯಲ್ಲಿ ಕುಳಿತಿದ್ದರು. ಜೆಪಿ ನಗರದ 7ನೇ ಹಂತದಲ್ಲಿ ಬೈಕ್ ಸ್ಕಿಡ್ ಆಗಿದ್ದರಿಂದ ಅಪಘಾತ ಸಂಭವಿಸಿದೆ. ಕೂಡಲೇ ಸ್ಥಳೀಯರು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬೈಕ್ ವೇಗವಾಗಿದ್ದರಿಂದ ಸ್ಕಿಡ್ ಆಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.

ವಿಜಯ್ ಬಲ ತೊಡೆ ಭಾಗ ಮುರಿದಿದ್ದು, ಮೆದುಳಿನ ಭಾಗದಲ್ಲಿ ತೀವ್ರ ರಕ್ತಸ್ರಾವವಾಗಿದೆ. ತಲೆಗೆ ಪೆಟ್ಟು ಬಿದ್ದ ಪರಿಣಾಮ ತೀವ್ರ ರಕ್ತಸ್ರಾವವಾಗಿದ್ದರಿಂದ ರಾತ್ರಿಯೇ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಮೆದುಳಿನ ರಕ್ತಸ್ತ್ರಾವ ತಡೆಗೆ ಸರ್ಜರಿ ನಡೆದಿದೆ. ಡಾ.ಅರುಣ್.ಎಲ್.ನಾಯ್ಕ್ ಟೀಂ ಸಂಚಾರಿ ವಿಜಯ್ ಅವರಿಗೆ ಚಿಕಿತ್ಸೆ ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

Kichcha Sudeepa took to Twitter to share a piece of unfortunate news with his followers. The actor informed his followers that Kannada actor Sanchari Vijay has passed away after a tragic car accident. The actor was 38.