ಹುಟ್ಟೂರಿನ ಸ್ನೇಹಿತನ ತೋಟದಲ್ಲಿ ಸಂಚಾರಿ ವಿಜಯ್ ಅಂತ್ಯಕ್ರಿಯೆ

15-06-21 10:40 am       Filmbeat : Bharath Kumar K   ಸಿನಿಮಾ

ಸಂಚಾರಿ ವಿಜಯ್ ಹುಟ್ಟೂರಿನಲ್ಲಿ ಆಪ್ತ ಸ್ನೇಹಿತರೊಬ್ಬರ ತೋಟದಲ್ಲಿ ಅಂತ್ಯ ಸಂಸ್ಕಾರ ನಡೆಸಲು ನಿರ್ಧರಿಸಲಾಗಿದೆ.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಬೆಳಗ್ಗೆ 10 ಗಂಟೆವರೆಗೂ ಸಂಚಾರಿ ವಿಜಯ್ ಪಾರ್ಥಿವ ಶರೀರ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಅಲ್ಲಿಂದ ನೇರವಾಗಿ ಹುಟ್ಟೂರು ಪಂಚನಹಳ್ಳಿ ಗ್ರಾಮಕ್ಕೆ ವಿಜಯ್ ಪಾರ್ಥಿವ ಶರೀರ ತೆಗೆದುಕೊಂಡು ಹೋಗಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ. ಬೆಂಗಳೂರಿನಿಂದ ತುಮಕೂರು ಮಾರ್ಗವಾಗಿ ಸಂಚಾರಿ ವಿಜಯ್ ಪಾರ್ಥಿವ ಶರೀರ ಸಾಗಿಸಲು ಯೋಜಿಸಲಾಗಿದೆ. ತುಮಕೂರು, ಶಿರಾ ಫ್ಲೈ ಓವರ್‌ಗೂ ಮುಂಚೆ ಎಡಗಡೆ ಹುಳಿಯಾರ್ ಮಾರ್ಗವಾಗಿ ಪಂಚನಹಳ್ಳಿ ಗ್ರಾಮಕ್ಕೆ ತಲುಪಲು ನಿರ್ಧರಿಸಲಾಗಿದೆ ಎಂದು ಕಡೂರು ಕ್ಷೇತ್ರದ ಮಾಜಿ ಶಾಸಕ ವೈಎಸ್‌ವಿ ದತ್ತಾ ಮಾಹಿತಿ ನೀಡಿದರು.

ಹುಟ್ಟೂರಿನಲ್ಲಿ ಸಂಚಾರಿ ವಿಜಯ್ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂಬ ಮಾಹಿತಿ ಹಿನ್ನೆಲೆ ಸಾವಿರಾರು ಜನರು ಅಲ್ಲಿ ಜಮಾಯಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.



ಹುಟ್ಟೂರಿನಲ್ಲಿ ಆಪ್ತ ಸ್ನೇಹಿತರೊಬ್ಬರ ತೋಟದಲ್ಲಿ ಸಂಚಾರಿ ವಿಜಯ್ ಅಂತ್ಯ ಸಂಸ್ಕಾರ ನಡೆಸಲು ನಿರ್ಧರಿಸಲಾಗಿದೆ. ಈಗಾಗಲೇ ಅಂತ್ಯಕ್ರಿಯೆಗೆ ತಯಾರಿ ನಡೆಸಲಾಗಿದೆ. ಕೋವಿಡ್ ಲಾಕ್‌ಡೌನ್ ನಿಯಮದ ಹಿನ್ನೆಲೆ ಅಂತ್ಯಕ್ರಿಯೆ ವೇಳೆ 20 ಜನರಿಗೆ ಮಾತ್ರ ಅವಕಾಶ ಇದೆ. ಹೀಗಾಗಿ, ಜಿಲ್ಲಾಡಳಿತದ ಜೊತೆ ಮಾಜಿ ಶಾಸಕ ದತ್ತಾ ಸಂಪರ್ಕದಲ್ಲಿದ್ದಾರೆ.

ಅಂತ್ಯಕ್ರಿಯೆಗೂ ಮುನ್ನ ಪಂಚನಹಳ್ಳಿಯಲ್ಲಿ ಸುಮಾರು ಒಂದು ಗಂಟೆಗಳ ಕಾಲ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಬಳಿಕವಷ್ಟೇ ಅಂತಿಮ ವಿಧಿ ವಿಧಾನ ನೆರವೇರಿಸಲಾಗುವುದು.

38ನೇ ವರ್ಷದಲ್ಲಿ ತಮ್ಮ ನಟನೆ ಮೂಲಕ ಕನ್ನಡಿಗರ ಮನೆ ಮಾತಾಗಿದ್ದ ಸಂಚಾರಿ ವಿಜಯ್‌ 'ನಾನು ಅವನಲ್ಲ ಅವಳು' ಚಿತ್ರದ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ಕನ್ನಡ ಚಿತ್ರರಂಗಕ್ಕೆ ಹಮ್ಮೆಯ ವಿಚಾರವಾಗಿದ್ದ ಸಂಚಾರಿ ವಿಜಯ್‌ಗೆ ಸರ್ಕಾರಿ ಗೌರವ ಸಮೇತ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ.

(Kannada Copy of Filmbeat Kannada)