ತೆರೆಮೇಲೆ ಸೌರವ್ ಗಂಗೂಲಿ ಜೀವನಚರಿತ್ರೆ: ದಾದಾ ಪಾತ್ರದಲ್ಲಿ ಸ್ಟಾರ್ ನಟ

14-07-21 01:21 pm       Filmbeat : Shruthi K   ಸಿನಿಮಾ

ಟೀಂ ಇಂಡಿಯಾದ ಮಾಜಿ ನಾಯಕ, ಖ್ಯಾತ ಕ್ರಿಕೆಟಿಗ, ದಾದಾ ಎಂದೇ ಖ್ಯಾತಿಗಳಿಸಿರುವ ಸೌರವ್ ಗಂಗೂಲಿ ಜೀವನಚರಿತ್ರೆ ತೆರೆಮೇಲೆ ಬರಲು ಸಜ್ಜಾಗುತ್ತಿದೆ.

ಟೀಂ ಇಂಡಿಯಾದ ಮಾಜಿ ನಾಯಕ, ಖ್ಯಾತ ಕ್ರಿಕೆಟಿಗ, ದಾದಾ ಎಂದೇ ಖ್ಯಾತಿಗಳಿಸಿರುವ ಸೌರವ್ ಗಂಗೂಲಿ ಜೀವನಚರಿತ್ರೆ ತೆರೆಮೇಲೆ ಬರಲು ಸಜ್ಜಾಗುತ್ತಿದೆ. ತನ್ನ ಜೀವನವನ್ನು ಸಿನಿಮಾ ಮಾಡಲು ದಾದಾ ಗಂಗೂಲಿ ಅನುಮತಿ ನೀಡಿದ್ದಾರೆ.

ಈಗಾಗಲೇ ಸಾಕಷ್ಟು ಕ್ರಿಕೆಟ್ ಆಟಗಾರರ ಜೀವನ ತೆರೆಮೇಲೆ ಬಂದಿದೆ ಮತ್ತು ಬರಲು ಸಿದ್ಧವಾಗುತ್ತಿದೆ. ಇದೀಗ ಗಂಗೂಲಿ ಬಯೋಪಿಕ್ ಕೂಡ ಸೇರಿಕೊಂಡಿದ್ದಾರೆ. ಇತ್ತೀಚಿಗೆ ಮತ್ತೋರ್ವ ಖ್ಯಾತ ಆಟಗಾರ ಸುರೇಶ್ ರೈನಾ ಬಯೋಪಿಕ್ ಸುದ್ದಿಯಲ್ಲಿತ್ತು. ಅಲ್ಲದೆ ತನ್ನ ಬಯೋಪಿಕ್ ಸೌತ್ ಸ್ಟಾರ್ ಸೂರ್ಯ ಅಥವಾ ದುಲ್ಕರ್ ಸಲ್ಮಾನ್ ನಟಿಸಬೇಕೆಂದು ಸುರೇಶ್ ರೈನಾ ಬಹಿರಂಗವಾಗಿ ಹೇಳಿದ್ದರು.

ಇದರ ಬೆನ್ನಲ್ಲೇ ಈಗ ಗಂಗೂಲಿ ಬಯೋಪಿಕ್ ಸುದ್ದಿ ಮಾಡುತ್ತಿದೆ. ಅಂದಹಾಗೆ ಗಂಗೂಲಿಯಾಗಿ ತೆರೆಮೇಲೆ ಯಾರು ಮಿಂಚಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ. ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಗಂಗೂಲಿ ಪಾತ್ರದಲ್ಲಿ ಬಾಲಿವುಡ್ ಸ್ಟಾರ್ ನಟ ರಣ್ಬೀರ್ ಕಪೂರ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ತನ್ನ ಪಾತ್ರದಲ್ಲಿ ರಣ್ಬೀರ್ ನಟಿಸಲಿ ಎಂದು ದಾದಾ ಶಿಫಾರಸು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಚಿತ್ರದಲ್ಲಿ ಗಂಗೂಲಿ ಬಾಲ್ಯ, ಜೀವನ, ಕ್ರಿಕೆಟ್ ಮತ್ತು ಬಿಸಿಸಿಐ ಅಧ್ಯಕ್ಷರಾಗುವವರೆಗಿನ ಜೀವನ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲಿದೆ. ಈಗಾಗಲೇ ಸ್ಕ್ರಿಪ್ಟ್ ಕೆಲಸಗಳು ನಡೆಯುತ್ತಿದ್ದು, ಬಾಲಿವುಡ್‌ನ ದೊಡ್ಡ ನಿರ್ಮಾಣ ಸಂಸ್ಥೆ ಈ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ದೊಡ್ಡ ಬಜೆಟ್‌ನಲ್ಲಿ ಸಿನಿಮಾ ಮಾಡಲು ಮುಂದಾಗಿದ್ದು, ಸುಮಾರು 200 ರಿಂದ 250 ಕೋಟಿ ರೂ. ಈಚಿತ್ರಕ್ಕಾಗಿ ಮೀಸಲಿಡಲಾಗಿದೆಯಂತೆ. ಈಗಾಗಲೇ ಗಂಗೂಲಿ ಜೊತೆ ಅನೇಕ ಸುತ್ತಿನ ಮಾತುಕತೆ ನಡೆದಿದ್ದು, ಅಂತಿಮವಾಗಿ ಸಿನಿಮಾ ಘೋಷಣೆ ಮಾತ್ರ ಬಾಕಿ ಇದೆ ಎನ್ನುವ ಮಾಹಿತಿ ಕೇಳಿಬರುತ್ತಿದೆ.ಈ ಬಗ್ಗೆ ನ್ಯೂಸ್ 18 ಜೊತೆ ಮಾತನಾಡಿದ ಗಂಗೂಲಿ, ''ಹೌದು, ನಾನು ನನ್ನ ಸಿನಿಮಾ ಮಾಡಲು ಒಪ್ಪಿದ್ದೇನೆ. ಆದರೆ ಈಗಲೇ ನಿರ್ದೇಶಕರ ಹೆಸರನ್ನು ಹೇಳಲು ಸಾಧ್ಯವಿಲ್ಲ. ಎಲ್ಲವನ್ನೂ ವ್ಯವಸ್ಥೆಗೊಳಿಸಲು ಇನ್ನು ಕೆಲವು ದಿನಗಳು ಬೇಕಾಗುತ್ತೆ" ಎಂದಿದ್ದಾರೆ. ಈಗಾಗಲೇ ಕ್ರಿಕೆಟ್ ಆಟಗಾರರಾದ ಎಂ.ಎಸ್ ಧೋನಿ, ಮೊಹಮ್ಮದ್ ಅಜರುದ್ದೀನ್ ಬಯೋಪಿಕ್ ತೆರೆಗೆ ಬಂದಿವೆ.

ಸುಶಾಂತ್ ಸಿಂಗ್ ನಟನೆಯ ಎಂ ಎಸ್ ಧೋನಿ ಬಯೋಪಿಕ್ ಸೂಪರ್ ಸಕ್ಸಸ್ ಕಂಡಿತ್ತು. ಮೊಹಮ್ಮದ್ ಅಜರುದ್ದೀನ್ ಬಯೋಪಿಕ್ ನಲ್ಲಿ ಇಮ್ರಾನ್ ಹಶ್ಮಿ ಕಾಣಿಸಿಕೊಂಡಿದ್ದರು. ಇನ್ನು ಮಿಥಾಲಿ ರಾಜ್ ಆಗಿ ನಟಿ ತಾಪ್ಸಿ ಪನ್ನು ನಟಿಸುತ್ತಿದ್ದಾರೆ. ಜೊತೆಗೆ ಭಾರತ ಮೊದಲ ಬಾರಿಗೆ ವಿಶ್ವಕಪ್ ಗೆದ್ದು ಬೀಗಿದ ಕ್ಷಣ ಕೂಡ ತೆರೆಮೇಲೆ ಬರುತ್ತಿದ್ದು, ಕಪಿಲ್ ದೇವ್ ಪಾತ್ರದಲ್ಲಿ ರಣ್ವೀರ್ ಸಿಂಗ್ ನಟಿಸುತ್ತಿದ್ದಾರೆ.

ಸಾಲು ಸಾಲು ಬಯೋಪಿಕ್ ನಡುವೆ ಈಗ ದಾದಾ ಗಂಗೂಲಿ ಬಯೋಪಿಕ್ ಎಲ್ಲರ ಗಮನ ಸೆಳೆಯುತ್ತಿದೆ. ತೆರೆಮೇಲೆ ಹೇಗೆ ಮೂಡಿರಲಿದೆ, ಯಾರು ನಿರ್ದೇಶಕ ಮಾಡಲಿದ್ದಾರೆ ಎಂದು ಕಾದುನೋಡಬೇಕು ಅಷ್ಟೆ.

(Kannada Copy of Filmbeat Kannada)