ಖ್ಯಾತ ನಟಿ ಚಿತ್ರಾ ಹೃದಯಾಘಾತದಿಂದ ನಿಧನ

21-08-21 12:49 pm       Filmbeat   ಸಿನಿಮಾ

ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ ಚಿತ್ರಾ ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. 56 ವರ್ಷದ ನಟಿ ಚಿತ್ರಾ ತಮ್ಮ ಚೆನ್ನೈನ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ ಚಿತ್ರಾ ಇಂದು (ಆಗಸ್ಟ್ 21) ಹೃದಯಾಘಾತದಿಂದ ನಿಧನರಾಗಿದ್ದಾರೆ. 56 ವರ್ಷದ ನಟಿ ಚಿತ್ರಾ ತಮ್ಮ ಚೆನ್ನೈನ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ನಟಿ ಚಿತ್ರಾ ಪತಿ ವಿಜಯರಾಘವನ್ ಮತ್ತು ಪುತ್ರಿ ಮಹಾಲಕ್ಷ್ಮಿ ಅವರನ್ನು ಅಗಲಿದ್ದಾರೆ.

ನಟಿ ಚಿತ್ರಾ ಹಠಾತ್ ನಿಧನ ಭಾರತೀಯ ಸಿನಿಮಾರಂಗಕ್ಕೆ ಶಾಕ್ ನೀಡಿದೆ. ಚಿತ್ರ ಇನ್ನಿಲ್ಲ ಎನ್ನುವ ಸುದ್ದಿ ಹೊರಬೀಳುತ್ತಿದ್ದಂತೆ ಅಭಿಮಾನಿಗಳು, ಸ್ನೇಹಿತರು ಮತ್ತು ಚಿತ್ರರಂಗದ ಗಣ್ಯರು ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ಸೂಚಿಸುತ್ತಿದ್ದಾರೆ.

100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಚಿತ್ರಾ ದಕ್ಷಿಣ ಭಾರತದ ಎಲ್ಲಾ ಭಾಷೆಯಗಳಲ್ಲೂ ಅಭಿನಯಿಸಿ ಸೈ ಎನಿಸಿಕೊಂಡವರು. ನಲ್ಲೆನೈ ಎನ್ನುವ ತೈಲ ಜಾಹೀರಾತಿನಲ್ಲಿ ಕಾಣಿಸಿಕೊಂಡ ಚಿತ್ರಾ ಬಳಿಕ ನಲ್ಲೇನೈ ಚಿತ್ರಾ ಎಂದೇ ಪ್ರಸಿದ್ಧಿ ಪಡೆದಿದ್ದರು. ಇಂದಿಗೂ ಅವರನ್ನು ನಲ್ಲೇನೈ ಚಿತ್ರಾ ಎಂದೆ ಎಲ್ಲರೂ ಕರೆಯುತ್ತಿದ್ದರು.



ಬಾಲನಟಿಯಾಗಿ ಚಿತ್ರರಂಗ ಪ್ರವೇಶ ಮಾಡಿದ ನಟಿ ಚಿತ್ರಾ, 1975ರಲ್ಲಿ ಬಿಡುಗಡೆಯಾದ ಕಮಲ್ ಹಾಸನ್ ಮತ್ತು ರಜನಿಕಾಂತ್ ನಟನೆಯ ಅಪೂರ್ವ ರಾಗಂಗಳ್ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಈ ಸಿನಿಮಾದಲ್ಲಿ ನಟಿ ಶ್ರೀದೇವಿ ಕೂಡ ನಟಿಸಿದ್ದರು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದಲ್ಲದೇ ರಾಷ್ಟ್ರಪ್ರಶಸ್ತಿಯನ್ನು ಗೆದ್ದು ಬೀಗಿತ್ತು. ಮೊದಲ ಸಿನಿಮಾದಲ್ಲೇ ಸ್ಟಾರ್ ಕಲಾವಿದರ ಜೊತೆ ನಟಿಸಿದ್ದ ಚಿತ್ರಾ ಬಳಿಕ ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. 1975ರಲ್ಲಿ ಬಿಡುಗಡೆಯಾದ ಮಲಯಾಳಂನ ಕಲ್ಯಾಣಪ್ಪಂಥಾಲ್ ಸಿನಿಮಾ ಮೂಲಕ ಮೊದಲ ಬಾರಿಗೆ ಮಲಯಾಲಂ ಪ್ರೇಕ್ಷಕರಿಗೆ ಪರಿಚಿತರಾದರು.

80 ಮತ್ತು 90 ದಶಕದಲ್ಲಿ ಚಿತ್ರಾ ತಮಿಳು ಮತ್ತು ಮಲಯಾಳಂನ ಲೆಜಂಡರಿ ಕಲಾವಿದರ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದರು. ಮೋಹನ್ ಲಾಲ್ ಮತ್ತು ಪ್ರೇಮ್ ನಜೀರ್ ನಟನೆಯ 'ಅಟ್ಟಕಳಶಂ' ಸಿನಿಮಾ ಮೂಲಕ ಚಿತ್ರ ಪೂರ್ಣ ಪ್ರಮಾಣದ ನಾಯಕಿಯಾಗಿ ಮೊದಲ ಬಾರಿಗೆ ತೆರೆಮೇಲೆ ಮಿಂಚಿದರು. ಈ ಸಿನಿಮಾ 1983ರಲ್ಲಿ ಬಿಡುಗಡೆಯಾಗಿತ್ತು.

ಈ ಸಿನಿಮಾ ಬಳಿಕ ಸೂಪರ್ ಹಿಟ್ ಮಲಯಾಳಂ ಸಿನಿಮಾಗಳಾದ ಪಂಚಗಣಿ, ಒರು ವಡಕ್ಕನ್ ವೀರಗತ, ಅಮರಮ್, ಏಕಲ್ಯನ್, ಉಸ್ತಾದ್ ಸೇರಿದಂತೆ ಅನೇಕ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳಿನಲ್ಲೂ ಅನೇಕ ಹಿಟ್ ಸಿನಿಮಾಗಳನ್ನ ನೀಡಿರುವ ನಟಿ ಚಿತ್ರಾ ವೃತ್ತಿ ಜೀವನದ ಉತ್ತುಂಗದಲ್ಲಿರುವಾಗಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 1990ರಲ್ಲಿ ಉದ್ಯಮಿ ವಿಜಯರಾಘವನ್ ಜೊತೆ ಹಸೆಮಣೆ ಏರಿದರು. ಮದುವೆ ಬಳಿಕವೂ ಚಿತ್ರಾ ನಟಿಯಲ್ಲಿ ತೊಡಗಿಸಿಕೊಂಡಿದ್ದರು.

ಆದರೆ ಸಿನಿಮಾಗಳ ಸಂಖ್ಯೆ ಕಡಿಮೆಯಾಗಿತ್ತು. ವೈಯಕ್ತಿಕ ಸಮಸ್ಯೆಯಿಂದ ಚಿತ್ರಾ ಉತ್ತುಂಗದಲ್ಲೇ ಇರುವಾಗಲೇ ನಟನೆಯಿಂದ ದೂರ ಸರಿಯುವ ನಿರ್ಧಾರ ಮಾಡಿದ್ದರು. ಸದ್ಯ ಚಿತ್ರಾ ತನ್ನ ಕುಟುಂಬದ ಜೊತೆ ಚೆನ್ನೈನಲ್ಲಿ ನೆಲೆಸಿದ್ದರು. ಅಂದಹಾಗೆ ಚಿತ್ರಾ ಕನ್ನಡ ಕೆಲವು ಸಿನಿಮಾಗಳಲ್ಲೂ ನಟಿಸಿದ್ದಾರೆ. 1986ರಲ್ಲಿ ಬಿಡುಗಡೆಯಾದ ಸುಂದರ ಸ್ವಪ್ನಗಳು, ಕೃಷ್ಣ ಮೆಚ್ಚಿದ ರಾಧೆ ಮತ್ತು ಅಜಯ್ ವಿಜಯ್ ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡ ಪ್ರೇಕ್ಷಕರಿಗೂ ಪರಿಚಿತರಾಗಿದ್ದರು. ಕನ್ನಡದ ಮೊದಲ ಸಿನಿಮಾದಲ್ಲಿ ಚಿತ್ರಾ ರಮೇಶ್ ಅರವಿಂದ್ ಜೊತೆ ತೆರೆಹಂಚಿಕೊಂಡಿದ್ದರು.

ದಕ್ಷಿಣ ಭಾರತೀಯ ಸಿನಿಮಾರಂಗದ ಜೊತೆಗೆ ಚಿತ್ರಾ ಬಾಲಿವುಡ್ ನಲ್ಲೂ ನಟಿಸಿದ್ದಾರೆ. ಹಿಂದಿಯಲ್ಲಿ ರಾಜಿಯಾ ಮತ್ತು ಏಕ್ ನಹಿ ಪಹೇಲಿ ಎನ್ನುವ ಎರಡು ಸಿನಿಮಾಗಳಲ್ಲಿ ಚಿತ್ರಾ ನಟಿಸಿದ್ದಾರೆ.

(Kannada Copy of Filmbeat Kannada)