ಟಾಲಿವುಡ್‌ನಲ್ಲಿ ಡ್ರಗ್ಸ್ ; ರಕುಲ್, ರಾಣಾ, ರವಿತೇಜಗೆ ED ನೋಟಿಸ್

26-08-21 11:30 am       Filmbeat: Bharath Kumar K   ಸಿನಿಮಾ

ಡ್ರಗ್ಸ್ ಕೇಸ್‌ ಸಂಬಂಧಿಸಿದಂತೆ ತೆಲುಗಿನ ಸ್ಟಾರ್ ಕಲಾವಿದರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ ಎಂಬ ವಿಚಾರ ಹೊರಬಿದ್ದಿದೆ.

ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಕೇಸ್ ಸಂಚಲನ ಸೃಷ್ಟಿಸಿದ್ದು ನಟಿ ರಾಗಿಣಿ, ಸಂಜನಾಗೆ ಸಂಕಷ್ಟ ತಂದೊಡ್ಡಿದೆ. ಆ ಕಡೆ ಬಾಲಿವುಡ್‌ನಲ್ಲೂ ಡ್ರಗ್ಸ್ ಕೇಸ್ ತಣ್ಣಗಾಗಿಲ್ಲ. ಇದೀಗ, ನಾಲ್ಕು ವರ್ಷದ ಹಿಂದಿನ ಡ್ರಗ್ಸ್ ಪ್ರಕರಣ ಟಾಲಿವುಡ್‌ನಲ್ಲಿ ಮತ್ತೆ ಜೀವ ಪಡೆದುಕೊಂಡಿದೆ.

ಡ್ರಗ್ಸ್ ಕೇಸ್‌ ಸಂಬಂಧಿಸಿದಂತೆ ತೆಲುಗಿನ ಸ್ಟಾರ್ ಕಲಾವಿದರಿಗೆ ಜಾರಿ ನಿರ್ದೇಶನಾಲಯ (ED-Enforcement Directorate) ಸಮನ್ಸ್ ಜಾರಿ ಮಾಡಿದೆ ಎಂಬ ವಿಚಾರ ಹೊರಬಿದ್ದಿದೆ. 

ತೆಲುಗಿನ ಖ್ಯಾತನಾಮರಾದ ರಕುಲ್ ಪ್ರೀತ್ ಸಿಂಗ್, ರಾಣಾ ದಗ್ಗುಬಾಟಿ, ಪೂರಿ ಜಗನ್ನಾಥ್, ರವಿತೇಜ, ಚಾರ್ಮಿ ಕೌರ್, ಮುಮೈತ್ ಖಾನ್ ಸೇರಿದಂತೆ ಒಟ್ಟು 12 ಜನರಿಗೆ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿ ಬುಧವಾರ (ಆಗಸ್ಟ್ 25) ಸಮನ್ಸ್ ಜಾರಿ ಮಾಡಿದೆ.



ಪೂರಿ ಜಗನ್ನಾಥ್‌ಗೆ ಆಗಸ್ಟ್ 31 ರಂದು, ರಕುಲ್ ಪ್ರೀತ್ ಸಿಂಗ್‌ಗೆ ಸೆಪ್ಟೆಂಬರ್ 6, ರಾಣಾ ದಗ್ಗುಬಾಟಿಗೆ ಸೆಪ್ಟೆಂಬರ್ 8, ರವಿತೇಜಗೆ ಸೆಪ್ಟೆಂಬರ್ 9, ಮುಮೈತ್ ಖಾನ್‌ಗೆ ನವೆಂಬರ್ 15 ರಂದು ಹಾಗೂ ಚಾರ್ಮಿ ಕೌರ್‌ಗೆ ಹಾಜರಾಗಲು ಸೂಚಿಸಲಾಗಿದೆ. ಡ್ರಗ್ಸ್ ಪ್ರಕರಣದಲ್ಲಿ 2017ರಲ್ಲಿ ಹೈದರಾಬಾದ್ ಅಬಕಾರಿ ಇಲಾಖೆಯ ವಿಶೇಷ ತನಿಖಾ ತಂಡ (ಎಸ್‌ಐಟಿ) ಟಾಲಿವುಡ್‌ನ 12 ಸೆಲೆಬ್ರಿಟಿಗಳನ್ನು ವಿಚಾರಣೆಗೆ ಒಳಪಡಿಸಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಇಲಾಖೆಯೂ ಮನಿ ಲಾಂಡರಿಂಗ್ ಪ್ರಕರಣ ದಾಖಲಿಸಿಕೊಂಡಿತ್ತು. ಇಂಡಿಯಾ ಟುಡೆ ವರದಿ ಪ್ರಕಾರ, ಈ ಪ್ರಕರಣದಲ್ಲಿ ಸೆಲೆಬ್ರಿಟಿಗಳನ್ನು ಸಾಕ್ಷಿಯಾಗಿ ಕರೆಸಿಕೊಳ್ಳಲು ಮುಂದಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿ ಮಾಡಿದೆ.

ಡ್ರಗ್ಸ್ ಪ್ರಕರಣದಲ್ಲಿ ಎಸ್‌ಐಟಿ ತಂಡವೂ ಸೆಲೆಬ್ರಿಟಿಗಳು ಸೇರಿದಂತೆ 62 ಶಂಕಿತರ ಕೂದಲು ಮತ್ತು ಉಗುರಿನ ಮಾದರಿಗಳನ್ನು ಸಂಗ್ರಹಿಸಿತ್ತು. ಆದರೆ ಇಲ್ಲಿಯವರೆಗೆ ಯಾವುದೇ ಖ್ಯಾತ ವ್ಯಕ್ತಿಯ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್ ಸಲ್ಲಿಸಿಲ್ಲ. ಡ್ರಗ್ ಕಳ್ಳಸಾಗಣೆ ಅಥವಾ ಸೇವನೆಯಲ್ಲಿ ಸೆಲೆಬ್ರಿಟಿಗಳು ಭಾಗವಾಗಿದ್ದರೆ ಎಂದು ಇಲ್ಲಿಯವರೆಗೆ ಎಸ್‌ಐಟಿ ಎಲ್ಲಿಯೂ ಹೇಳಿಲ್ಲ. ಹಾಗಾಗಿ, ಎಲ್ಲಾ ಸೆಲೆಬ್ರಿಟಿಗಳು ಡ್ರಗ್ಸ್ ಕೇಸ್‌ನಿಂದ ಕ್ಲೀನ್ ಚಿಟ್ ಸಿಕ್ಕಿದೆ ಎಂದು ನಂಬಲಾಗಿತ್ತು. ಮುಂಬೈನಿಂದ ಹೈದರಾಬಾದ್‌ಗೆ ಕೊಕೇನ್ ಪೂರೈಸಿದ ಆರೋಪದ ಮೇಲೆ 2017 ರ ಆಗಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾದ ಪ್ರಜೆ ರಾಫೆಲ್ ಅಲೆಕ್ಸ್ ವಿಕ್ಟರ್‌ನನ್ನು ಎಸ್‌ಐಟಿ ಬಂಧಿಸಿದ್ದರು. ಅದಾದ ಮೇಲೆಯೇ ತೆಲುಗು ಚಿತ್ರರಂಗದ ನಂಟು ಇರುವ ಬಗ್ಗೆ ಅನುಮಾನ ವ್ಯಕ್ತವಾಗಿತ್ತು.

(Kannada Copy of Filmbeat Kannada)