ಡ್ರಗ್ಸ್ ಕೇಸ್: ಸೋನಿಯಾ ಅಗರ್‌ವಾಲ್ ವಶಕ್ಕೆ ಪಡೆದ ಪೊಲೀಸರು

30-08-21 03:13 pm       Filmbeat: Manjunatha C   ಸಿನಿಮಾ

ಗೋವಿಂದಪುರ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಹಲವು ಸೆಲೆಬ್ರಿಟಿಗಳ ಮನೆ ಮೇಲೆ ಸೋಮವಾರ ಪೊಲೀಸರು ದಾಳಿ ನಡೆಸಿದ್ದಾರೆ.

ಗೋವಿಂದಪುರ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಹಲವು ಸೆಲೆಬ್ರಿಟಿಗಳ ಮನೆ ಮೇಲೆ ಸೋಮವಾರ (ಆಗಸ್ಟ್ 30) ಪೊಲೀಸರು ದಾಳಿ ನಡೆಸಿದ್ದಾರೆ. ನಟಿ-ಮಾಡೆಲ್ ಸೋನಿಯಾ ಅಗರ್‌ವಾಲ್ ನಿವಾಸದ ಮೇಲೆಯೂ ದಾಳಿ ಆಗಿದೆ ಎಂದು ವರದಿಯಾಗಿತ್ತು.

ಸೋನಿಯಾ ಮನೆ ಪರಿಶೀಲನೆ ವೇಳೆ ಗಾಂಜಾ ಪತ್ತೆಯಾಗಿದ್ದು, ನಟಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಬೆಂಗಳೂರು ಪೂರ್ವ ವಿಭಾಗದ ಪೊಲೀಸರು ಈ ಸೋಮವಾರ ಬೆಳ್ಳಂಬೆಳಗ್ಗೆ ಉದ್ಯಮಿ ಹಾಗೂ ಸೆಲೆಬ್ರಿಟಿಗಳ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಪರಿಶೀಲನೆ ಬಳಿಕ ಉದ್ಯಮಿ ಭರತ್, ಡಿಜೆ ವಚನ್ ಚಿನ್ನಪ್ಪ ಹಾಗೂ ನಟಿ-ಮಾಡೆಲ್ ಸೋನಿಯಾ ಅವರನ್ನು ಡಿಜೆ ಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಬೆಳಗ್ಗೆ ಸೋನಿಯಾ ಮನೆಯ ಪೊಲೀಸರು ಭೇಟಿ ನೀಡಿದ ಸಂದರ್ಭದಲ್ಲಿ ನಟಿ ಮನೆಯಲ್ಲಿ ಇರಲಿಲ್ಲ. ಅವರ ತಂದೆಯಿಂದ ಮನೆ ಕೀ ತೆಗೆಸಿ ಪರಿಶೀಲನೆ ನಡೆಸಿದರು. ನಂತರ ಈ ವಿಷಯ ತಿಳಿದ ಸೋನಿಯಾ ತಂದೆಗೆ ಫೋನ್ ಮಾಡಿ 12 ಗಂಟೆಗೆ ಮನೆಗೆ ಬರುವೆ ಎಂದು ಹೇಳಿದ್ದರು. ಆದರೆ, ಆ ಸಮಯಕ್ಕೆ ಬರಲಿಲ್ಲ. ನಂತರ ಆಕೆ ಖಾಸಗಿ ಹೋಟೆಲ್‌ನಲ್ಲಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ಹೋಟೆಲ್‌ಗೆ ತೆರಳಿ ಬಂಧಿಸಿದ್ದಾರೆ ಎಂದು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.



ಈ ಹಿಂದೆ ಡ್ರಗ್ಸ್ ಪೆಡ್ಲರ್ ಥಾಮಸ್ ಎಂಬ ನೈಜೀರಿಯ ಪ್ರಜೆಯನ್ನು ಪೊಲೀಸರು ಬಂಧಿಸಿದ್ದರು. ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಕೆಲವು ಉದ್ಯಮಿಗಳಿಗೆ ಹಾಗೂ ಸೆಲೆಬ್ರಿಟಿಗಳಿಗೆ ನೇರವಾಗಿ ಡ್ರಗ್ಸ ಸರಬರಾಜು ಮಾಡ್ತಿದ್ದೆ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾನೆ. ಥಾಮಸ್ ಹೇಳಿಕೆ ಹಿನ್ನೆಲೆ ಸೋನಿಯಾ, ಭರತ್, ವಚನ್ ಚಿನ್ನಪ್ಪ ಮನೆ ಮೇಲೆ ದಾಳಿ ನಡೆಸಲಾಗಿದೆ.

ಸ್ಯಾಂಡಲ್‌ವುಡ್ ಬೆನ್ನು ಬಿಡದ ಡ್ರಗ್ಸ್ ಕೇಸ್ ಡ್ರಗ್ಸ್ ಕೇಸ್ ಚಿತ್ರರಂಗವನ್ನು ಬೆನ್ನು ಬಿಡದ ಭೂತದಂತೆ ಕಾಡುತ್ತಿದೆ. ಟಾಲಿವುಡ್, ಬಾಲಿವುಡ್ ಜೊತೆಗೆ ಸ್ಯಾಂಡಲ್‌ವುಡ್‌ನಲ್ಲೀ ಡ್ರಗ್ಸ್ ಆಧರಿತ ಕೇಸ್‌ಗಳು ದಾಖಲಾಗಿದೆ. ಕಳೆದ ವರ್ಷ ಡ್ರಗ್ಸ್ ಪ್ರಕರಣದಲ್ಲಿ ನಟಿ ಸಂಜನಾ ಹಾಗೂ ರಾಗಿಣಿ ಸೇರಿದಂತೆ ಅವರ ಆಪ್ತರು ಅರೆಸ್ಟ್ ಆಗಿದ್ದರು. ತಿಂಗಳುಗಳ ಕಾಲ ಜೈಲಿನಲ್ಲಿದ್ದರು. ಆಮೇಲೆ ಜಾಮೀನು ಪಡೆದ ಹೊರಬಂದಿದ್ದರು. ರಾಗಿಣಿ ಮತ್ತು ಸಂಜನಾ ಮಾತ್ರವಲ್ಲದೇ ಹಲವು ಸೆಲೆಬ್ರಿಟಿಗಳನ್ನು ವಿಚಾರಣೆಗೆ ಒಳಪಡಿಸಿದ್ದರು ಬೆಂಗಳೂರು ಸಿಸಿಬಿ ಪೊಲೀಸರು.

ಆ ಕಡೆ ಬಾಲಿವುಡ್‌ನಲ್ಲಿ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಡ್ರಗ್ಸ್ ಪ್ರಕರಣ ಬೆಳಕಿಗೆ ಬಂತು. ಅದಾದ ಬಳಿಕ ಸ್ಟಾರ್ ನಟ-ನಟಿಯರನ್ನು ಮುಂಬೈ ಪೊಲೀಸರು ವಿಚಾರಣೆ ಮಾಡಿದ್ದರು. ರಕುಲ್ ಪ್ರೀತ್ ಸಿಂಗ್, ಸಾರಾ ಅಲಿ ಖಾನ್, ದೀಪಿಕಾ ಪಡುಕೋಣೆ, ಅರ್ಜುನ್ ರಾಂಪಾಲ್ ಸೇರಿದಂತೆ ಹಲವು ತಾರೆಯರ ಹೆಸರು ತಳುಕು ಹಾಕಿಕೊಂಡಿತ್ತು.

ನಾಲ್ಕು ವರ್ಷದ ಹಿಂದಿನ ಟಾಲಿವುಡ್ ಪ್ರಕರಣ ನಾಲ್ಕು ವರ್ಷದ ಹಿಂದಿನ ಡ್ರಗ್ಸ್ ಪ್ರಕರಣ ಟಾಲಿವುಡ್‌ನಲ್ಲಿ ಮತ್ತೆ ಜೀವ ಪಡೆದುಕೊಂಡಿದೆ. ಡ್ರಗ್ಸ್ ಕೇಸ್‌ ಸಂಬಂಧಿಸಿದಂತೆ ತೆಲುಗಿನ ಸ್ಟಾರ್ ಕಲಾವಿದರಿಗೆ ಜಾರಿ ನಿರ್ದೇಶನಾಲಯ (ED-Enforcement Directorate) ಸಮನ್ಸ್ ಜಾರಿ ಮಾಡಿದೆ. ತೆಲುಗಿನ ಖ್ಯಾತನಾಮರಾದ ರಕುಲ್ ಪ್ರೀತ್ ಸಿಂಗ್, ರಾಣಾ ದಗ್ಗುಬಾಟಿ, ಪೂರಿ ಜಗನ್ನಾಥ್, ರವಿತೇಜ, ಚಾರ್ಮಿ ಕೌರ್, ಮುಮೈತ್ ಖಾನ್ ಸೇರಿದಂತೆ ಒಟ್ಟು 12 ಜನರಿಗೆ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿ ಬುಧವಾರ (ಆಗಸ್ಟ್ 25) ಸಮನ್ಸ್ ಜಾರಿ ಮಾಡಿದೆ.

ಡ್ರಗ್ಸ್ ಪ್ರಕರಣದಲ್ಲಿ 2017ರಲ್ಲಿ ಹೈದರಾಬಾದ್ ಅಬಕಾರಿ ಇಲಾಖೆಯ ವಿಶೇಷ ತನಿಖಾ ತಂಡ (ಎಸ್‌ಐಟಿ) ಟಾಲಿವುಡ್‌ನ 12 ಸೆಲೆಬ್ರಿಟಿಗಳನ್ನು ವಿಚಾರಣೆಗೆ ಒಳಪಡಿಸಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಇಲಾಖೆಯೂ ಮನಿ ಲಾಂಡರಿಂಗ್ ಪ್ರಕರಣ ದಾಖಲಿಸಿಕೊಂಡಿತ್ತು.