'ಲವ್ ಯು ರಚ್ಚು' ದುರಂತ: ಮೃತನ ಕುಟುಂಬಕ್ಕೆ ಚೆಕ್ ನೀಡಿದ ಗುರು ದೇಶಪಾಂಡೆ

02-09-21 02:36 pm       Filmbeat Kannada   ಸಿನಿಮಾ

ಲವ್ ಯು ರಚ್ಚು' ಸಿನಿಮಾದ ದುರಂತದ ಬಳಿಕ ಪೊಲೀಸರಿಂದ ತಲೆ ಮರೆಸಿಕೊಂಡಿದ್ದ ನಿರ್ಮಾಪಕ ಗುರು ದೇಶಪಾಂಡೆ ಇಂದು ಮೃತ ವಿವೇಕ್ ಕುಟುಂಬದವರನ್ನು ಭೇಟಿಯಾಗಿ ಪರಿಹಾರ ಚೆಕ್ ಹಸ್ತಾಂತರಿಸಿದರು.

ಲವ್ ಯು ರಚ್ಚು' ಸಿನಿಮಾದ ದುರಂತದ ಬಳಿಕ ಪೊಲೀಸರಿಂದ ತಲೆ ಮರೆಸಿಕೊಂಡಿದ್ದ ನಿರ್ಮಾಪಕ ಗುರು ದೇಶಪಾಂಡೆ ಇಂದು ಮೃತ ವಿವೇಕ್ ಕುಟುಂಬದವರನ್ನು ಭೇಟಿಯಾಗಿ ಪರಿಹಾರ ಚೆಕ್ ಹಸ್ತಾಂತರಿಸಿದರು.

ಕೆಲವು ದಿನಗಳ ಹಿಂದೆ ಬಿಡದಿ ಬಳಿಯ ಜೋಗಿಪಾಳ್ಯ ಗ್ರಾಮದಲ್ಲಿ 'ಲವ್ ಯು ರಚ್ಚು' ಸಿನಿಮಾದ ಚಿತ್ರೀಕರಣ ನಡೆವ ವೇಳೆ ನಡೆದ ವಿದ್ಯುತ್ ಅವಘಡದಲ್ಲಿ ಫೈಟರ್ ವಿವೇಕ್ ಮೃತಪಟ್ಟಿದ್ದರು. ಘಟನೆ ಕುರಿತು ಬಿಡದಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಿನಿಮಾದ ನಿರ್ದೇಶಕ ಶಂಕರ್, ಫೈಟ್ ಮಾಸ್ಟರ್ ವಿನೋದ್, ಕ್ರೇನ್ ಚಾಲಕ ಮಹದೇವಯ್ಯ ಅವರುಗಳನ್ನು ಬಂಧಿಸಿದ್ದರು. ನಿರ್ಮಾಪಕ ಗುರು ದೇಶಪಾಂಡೆ ವಿರುದ್ಧವೂ ಪ್ರಕರಣ ದಾಖಲಾಗಿತ್ತು. ಆದರೆ ಪೊಲೀಸರ ಕೈಗೆ ಸಿಗದೆ ಗುರು ದೇಶಪಾಂಡೆ ತಲೆ ಮರೆಸಿಕೊಂಡಿದ್ದರು.



ಇದೀಗ ಎಲ್ಲ ಆರೋಪಿಗಳಿಗೆ ಜಾಮೀನು ದೊರೆತಿದ್ದು ಗುರು ದೇಶಪಾಂಡೆ ಸಹ ಬಹಿರಂಗವಾಗಿ ಕಾಣಿಸಿಕೊಂಡಿದ್ದಾರೆ. ಇದೀಗ ಮೃತ ವಿವೇಕ್ ಮನೆಗೆ ಭೇಟಿ ನೀಡಿ ಮೃತನ ಕುಟುಂಬದವರನ್ನು ಮಾತನಾಡಿಸಿರುವ ಗುರು ದೇಶಪಾಂಡೆ ವಿವೇಕ್ ಕುಟುಂಬಕ್ಕೆ ಹತ್ತು ಲಕ್ಷ ರೂಪಾಯಿ ಚೆಕ್ ಅನ್ನು ನಿರ್ಮಾಣ ಸಂಸ್ಥೆಯ ಕಡೆಯಿಂದ ವಿತರಣೆ ಮಾಡಿದರು.

ಘಟನೆ ನಡೆದ ಕೆಲವು ದಿನಗಳಲ್ಲಿಯೇ ಗುರು ದೇಶಪಾಂಡೆ ಪತ್ನಿ ಪ್ರೀತಿಕಾ ಸುದ್ದಿಗೋಷ್ಠಿ ನಡೆಸಿ ಹತ್ತು ಲಕ್ಷ ಹಣವನ್ನು ಪರಿಹಾರವಾಗಿ ನೀಡುವುದಾಗಿ ಘೋಷಿಸಿದ್ದರು. ಐದು ಲಕ್ಷ ಪರಿಹಾರ ನೀಡಿದ್ದರು. ಇನ್ನುಳಿದ ಹಣವನ್ನು ಆರೋಪಿಗಳಿಗೆ ಜಾಮೀನು ಸಿಕ್ಕ ಬಳಿಕ ನೀಡುವುದಾಗಿ ಹೇಳಿದ್ದರು. ಅಂತೆಯೇ ಇಂದು ಸ್ವತಃ ಗುರು ದೇಶಪಾಂಡೆ ತೆರಳಿ ಬಾಕಿ ಮೊತ್ತದ ಚೆಕ್ ವಿತರಣೆ ಮಾಡಿದ್ದಾರೆ.



ಈ ಸಂದರ್ಭದಲ್ಲಿ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಗುರು ದೇಶಪಾಂಡೆ, ''ಅಚಾನಕ್ಕಾಗಿ ಘಟನೆ ನಡೆದು ಹೋಗಿದೆ. ಘಟನೆ ನಡೆದಾಗ ನಾನು ಸ್ಥಳದಲ್ಲಿ ಇರಲಿಲ್ಲ. ಯಾರು ಈಗ ಏನೇ ಹೇಳಿದರು ಕುಟುಂಬಕ್ಕೆ ವಿವೇಕ್‌ರನ್ನು ಮರಳಿ ತಂದುಕೊಡಲಾಗುವುದಿಲ್ಲ'' ಎಂದಿದ್ದಾರೆ ಗುರು ದೇಶಪಾಂಡೆ.

ವಿವೇಕ್ ಕುಟುಂಬಕ್ಕೆ ಹತ್ತು ಲಕ್ಷ ಕೊಡುವುದಾಗಿ ಹೇಳಿದ್ದೆ, ಇಂದು ಐದು ಲಕ್ಷ ಕೊಟ್ಟಿದ್ದೀನಿ. ಸಿನಿಮಾ ಬಿಡುಗಡೆ ಆದ ಬಳಿಕ ಮೊದಲ ಎರಡು ದಿನದ ಕಲೆಕ್ಷನ್‌ನಲ್ಲಿ ಐದು ಲಕ್ಷ ಕೊಡ್ತೀನಿ. ವಿವೇಕ್ ತಮ್ಮನ ವಿದ್ಯಾಭ್ಯಾಸದ ಹೊಣೆ ಹೊತ್ತುಕೊಳ್ಳುವುದಾಗಿ ಹೇಳಿದ್ದೀನಿ. ವಿವೇಕ್ ಕುಟುಂಬದ ಜೊತೆಗೆ ಇರುವುದಾಗಿ ನಾನು ಭರವಸೆ ನೀಡಿದ್ದೇನೆ ಎಂದಿದ್ದಾರೆ ಗುರು ದೇಶಪಾಂಡೆ. ಆಗಸ್ಟ್ 9 ರಂದು 'ಲವ್ ಯು ರಚ್ಚು' ಸಿನಿಮಾದ ಚಿತ್ರೀಕರಣದ ವೇಳೆ ಅವಘಡ ನಡೆದಿತ್ತು. ಕ್ರೇನ್‌ಗೆ ಕಬ್ಬಿಣದ ರೋಪ್ ಕಟ್ಟಿ ರಂಜಿತ್ ಎಂಬಾತನನ್ನು ಮೇಲಕ್ಕೆ ಎಳೆಯಲಾಗಿತ್ತು.

ಆತ ತೊಟ್ಟಿಯಲ್ಲಿ ಬೀಳುವ ದೃಶ್ಯವನ್ನು ಚಿತ್ರೀಕರಿಸುವುದು ಚಿತ್ರತಂಡದ ಉದ್ದೇಶವಾಗಿತ್ತು. ಕಬ್ಬಿಣದ ರೋಪ್‌ನ ಇನ್ನೊಂದು ತುದಿಯನ್ನು ವಿವೇಕ್ ಹಿಡಿದುಕೊಂಡಿದ್ದರು. ರೋಪ್‌ ಅನ್ನು ಕಟ್ಟಲಾಗಿದ್ದ ಕ್ರೇನ್ ಅವಶ್ಯಕತೆಗಿಂತಲೂ ಮೇಲಕ್ಕೆ ಎತ್ತಿದ್ದರಿಂದ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿ ಸ್ಪರ್ಷಿಸಿ ವಿದ್ಯುತ್ ಪ್ರಹವಿಸಿ ವಿವೇಕ್ ಸಾವನ್ನಪ್ಪಿದ್ದ. ಈ ಪ್ರಕರಣ ಭಾರಿ ಸದ್ದು ಮಾಡಿತ್ತು.

ಸಿಎಂ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಅರಗ ಜ್ಞಾನೇಂದ್ರ ಅವರುಗಳು ಸಹ ಪ್ರಕರಣದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಲ್ಲದೆ, ತಪ್ಪಿತಸ್ಥರಿಗೆ ಶಿಕ್ಷೆ ಆಗಲೇ ಬೇಕು ಎಂದಿದ್ದರು. ಜೊತೆಗೆ ನಟ ಅಜಯ್ ರಾವ್ ಮಾತನಾಡಿ, ಮುನ್ನೆಚ್ಚರಿಕೆ ಇಲ್ಲದ್ದೆ ಅಪಘಾತಕ್ಕೆ ಕಾರಣ ಎಂದು ಆರೋಪಿಸಿದ್ದು ಪ್ರಕರಣಕ್ಕೆ ಬೇರೆಯದ್ದೇ ಆಯಾಮ ನೀಡಿತ್ತು.