ಜಾರಕಿಹೊಳಿಯಿಂದ ಹಣ ಪಡೆದು ಹೊಂದಾಣಿಕೆ ಮಾಡಿಲ್ಲ ; ಆರೋಪಕ್ಕೆ ನೊಂದು ಧರ್ಮಸ್ಥಳದಲ್ಲಿ ಆಣೆ ಮಾಡಿದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ! 

06-03-23 06:02 pm       Mangalore Correspondent   ಕರಾವಳಿ

ಗೋಕಾಕ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಅಶೋಕ ಪೂಜಾರಿ ಸಾವಿರಕ್ಕೂ ಅಧಿಕ ಬೆಂಬಲಿಗರೊಂದಿಗೆ ಧರ್ಮಸ್ಥಳಕ್ಕೆ ಆಗಮಿಸಿ, ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಆಣೆ ಪ್ರಮಾಣ ಮಾಡಿದ್ದಾರೆ. 

ಬೆಳ್ತಂಗಡಿ, ಮಾ.6 : ಗೋಕಾಕ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಅಶೋಕ ಪೂಜಾರಿ ಸಾವಿರಕ್ಕೂ ಅಧಿಕ ಬೆಂಬಲಿಗರೊಂದಿಗೆ ಧರ್ಮಸ್ಥಳಕ್ಕೆ ಆಗಮಿಸಿ, ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಆಣೆ ಪ್ರಮಾಣ ಮಾಡಿದ್ದಾರೆ. 

ತನ್ನ ವಿರುದ್ಧ ಕೊನೆ ಕ್ಷಣದಲ್ಲಿ ಹಣ ಪಡೆದು ಸುಮ್ಮನಾಗುತ್ತಾನೆ ಎಂಬ ಪ್ರತಿಪಕ್ಷದ ಕೆಲವರ ಆರೋಪದಿಂದ ನೊಂದು ಈ ಬಾರಿ ಅಶೋಕ್ ಪೂಜಾರಿ ಕುಟುಂಬ ಸಮೇತ ಬಂದು ಚುನಾವಣೆ ಮೊದಲೇ ಆಣೆ ಪ್ರಮಾಣ ಮಾಡಿದ್ದಾರೆ. 2008 ಹಾಗೂ 2013ರ ಚುನಾವಣೆಯಲ್ಲಿ ಜೆ.ಡಿ.ಎಸ್ ಪಕ್ಷದಿಂದ ಸ್ಪರ್ಧಿಸಿದ್ದೆ. 2018 ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲು ಕಂಡಿದ್ದೆ. 2019ರಲ್ಲಿ ಜಾರಕಿಹೊಳಿ ಬಿಜೆಪಿಗೆ ಬಂದು ಉಪ ಚುನಾವಣೆ ನಡೆದಾಗ ಜೆ.ಡಿ.ಎಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದೆ. ಈ ಬಾರಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುತ್ತೇನೆ ಎಂದರು. 

ಪದೇ‌ ಪದೇ ಪಕ್ಷ ಬದಲಾವಣೆ ಯಾಕೆ ಮಾಡುತ್ತೇನೆಂದರೆ, ಗೋಕಾಕ್ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಗೆಲ್ಲೋದು ಹಣ ಬಲ‌ ಮತ್ತು ತೋಳ್ಬಲದಿಂದ. ಇದನ್ನು ತೊಲಗಿಸಲು ಸಮರ್ಥ ಪಕ್ಷವೇ ಬೇಕು. ನಮ್ಮದು ಮಧ್ಯಮ ವರ್ಗದ ಕುಟುಂಬವಾಗಿದ್ದರಿಂದ ಆರೋಪ ಎದುರಿಸುತ್ತೇನೆ. ನಾನು ಜನರೊಂದಿಗೆ ಬೆರೆತು ಚುನಾವಣೆ ಎದುರಿಸುವ ಅನಿವಾರ್ಯತೆ ಇದೆ. ಈ ಹಿಂದೆ ಮೂರು ಬಾರಿ ಸ್ಪರ್ಧಿಸುವಾಗಲೂ ಚುನಾವಣೆಯ ಕೊನೆಯ ಘಳಿಗೆಯಲ್ಲಿ ನನ್ನ ವಿರುದ್ದ ವಿರೋಧ ಪಕ್ಷದವರು ಹಾಗೂ ನನ್ನ ಜತೆ ಇದ್ದವರೇ ಗುಲ್ಲು ಎಬ್ಬಿಸಿದ್ದರು. 

ಅಶೋಕ್ ಪೂಜಾರ ಚುನಾವಣೆ ಕೊನೆಯ ವರೆಗೂ ಹೋರಾಟ ಮಾಡುತ್ತಾನೆ. ಕೊನೆಯ ಮೂರು ದಿನಗಳಲ್ಲಿ ಎದುರಾಳಿಗಳೊಂದಿಗೆ ಅಂದರೆ ನನ್ನ ಪ್ರತಿಸ್ಪರ್ಧಿ ರಮೇಶ್ ಜಾರಕಿಹೊಳಿ ಜೊತೆಗೆ ಹೊಂದಾಣಿಕೆ ರಾಜಕಾರಣ ಮಾಡುತ್ತಾನೆ ಎಂಬ ಆರೋಪ ನನ್ನ ಮೇಲಿದೆ. 2008 ರಲ್ಲಿ ಪ್ರಾರಂಭವಾದ ಆರೋಪ 2023 ರ ಚುನಾವಣೆಗೂ ಮಾಡುತ್ತಿದ್ದಾರೆ ಎಂದರು.

40 ವರ್ಷಗಳಿಂದ ನೈತಿಕತೆಯ ರಾಜಕಾರಣ ಮಾಡುತ್ತಾ ಬಂದವನು. ಅದನ್ನು ನನ್ನ ಕ್ಷೇತ್ರದ ಮತದಾರರಿಗೆ ತಿಳಿಸಬೇಕು ಎಂಬ ಕಾರಣದಿಂದ ಬಂದಿದ್ದೇನೆ. ದೈವೀಶಕ್ತಿ ಮಂಜುನಾಥನ ಮುಂದೆ ನನ್ನ ಕ್ಷೇತ್ರದ ಮತದಾರರ ಎದುರಿನಲ್ಲಿ ರಾಜಕೀಯ ಜೀವನದಲ್ಲಿ ಎಂದೂ ಎದುರಾಳಿಯಿಂದ ದುಡ್ಡು ತೆಗೆದುಕೊಂಡು‌ ಹೊಂದಾಣಿಕೆ ರಾಜಕಾರಣ ಮಾಡಿಲ್ಲ ಎಂಬುದಾಗಿ ಮಂಜುನಾಥ ದೇವರ ಮುಂದೆ ಆಣೆ ಪ್ರಮಾಣ ಮಾಡಿದ್ದೇನೆ, ನಾವು ಒಟ್ಟು ಐದು ಮಂದಿ ಕಾಂಗ್ರೇಸ್ ಟಿಕೆಟ್ ಗೆ ಅರ್ಜಿ ಸಲ್ಲಿಸಿದ್ದೇವೆ. ನನ್ನ ಹೋರಾಟ ಹಾಗೂ ಅನುಭವದ ಹಿನ್ನೆಲೆಯಲ್ಲಿ ನನಗೆ ಟಿಕೆಟ್ ಸಿಗುವ ಭರವಸೆ ಇದೆ ಎಂದು ಹೇಳಿದರು.

Ashok Pujari takes oath Dharmasthala after he was alleged of taking money from Ramesh Jarkiholi.