ಉಳ್ಳಾಲ ದರ್ಗಾದಲ್ಲಿ ಏಳು ವರ್ಷಗಳ ಸರ್ವಾಧಿಕಾರ ಅಂತ್ಯ ; ನೂತನ ಅಧ್ಯಕ್ಷರಾಗಿ ಬಾವಾ ಗುಲಾಮ್ ಹನೀಫ್ ಆಯ್ಕೆ 

06-03-23 10:11 pm       Mangalore Correspondent   ಕರಾವಳಿ

ಉಳ್ಳಾಲ ದರ್ಗಾದಲ್ಲಿ ಏಳು ವರ್ಷದ ಸರ್ವಾಧಿಕಾರ ಅಂತ್ಯಗೊಂಡಿದ್ದು, ನೂತನ ಅಧ್ಯಕ್ಷರಾಗಿ ಬಾವಾ ಗುಲಾಮ್ ಹನೀಫ್ ಮತ್ತು ಉಪಾಧ್ಯಕ್ಷರಾಗಿ ರೈಟ್ ವೇ ಅಶ್ರಫ್ ಅಹ್ಮದ್ ಆಯ್ಕೆಯಾಗಿದ್ದಾರೆ.

ಮಂಗಳೂರು, ಮಾ.6: ಉಳ್ಳಾಲ ದರ್ಗಾದಲ್ಲಿ ಏಳು ವರ್ಷದ ಸರ್ವಾಧಿಕಾರ ಅಂತ್ಯಗೊಂಡಿದ್ದು, ನೂತನ ಅಧ್ಯಕ್ಷರಾಗಿ ಬಾವಾ ಗುಲಾಮ್ ಹನೀಫ್ ಮತ್ತು ಉಪಾಧ್ಯಕ್ಷರಾಗಿ ರೈಟ್ ವೇ ಅಶ್ರಫ್ ಅಹ್ಮದ್ ಆಯ್ಕೆಯಾಗಿದ್ದಾರೆ.

ಉಳ್ಳಾಲ ಜುಮಾ ಮಸ್ಜಿದ್ ಮತ್ತು ಸೈಯದ್ ಮುಹಮ್ಮದ್ ಶರೀಫುಲ್ ಮದನಿ ದರ್ಗಾದ ನೂತನ ಆಡಳಿತ ಸಮಿತಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಸೋಮವಾರ ದ.ಕ. ಜಿಲ್ಲಾ ವಕ್ಫ್ ಕಚೇರಿಯಲ್ಲಿ ನಡೆಯಿತು. ಅಧ್ಯಕ್ಷರಾಗಿ ಬಾವಾ ಗುಲಾಮ್ ಹನೀಫ್, ಉಪಾಧ್ಯಕ್ಷರಾಗಿ ರೈಟ್ ವೇ ಅಶ್ರಫ್ ಅಹ್ಮದ್ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಮೇಲಂಗಡಿಯ ಶಿಹಾಬುದ್ದೀನ್ ಸಖಾಫಿ, ಕೋಶಾಧಿಕಾರಿಯಾಗಿ ಮುಕ್ಕಚೇರಿ ಮೊಹಲ್ಲಾದ ನಾಝಿಂ ಕೋಟೆಪುರ ಆಯ್ಕೆಗೊಂಡಿದ್ದು , ಕಾರ್ಯಕಾರಿ‌ ಸಮಿತಿ ಸದಸ್ಯರ ಆಯ್ಕೆ ಪ್ರಕ್ರಿಯೆಯೂ ನಡೆದಿದೆ. 

ಉಳ್ಳಾಲ ದರ್ಗಾ ಆಡಳಿತ ಸಮಿತಿಯ ಆಯ್ಕೆಗಾಗಿ ಇತ್ತೀಚೆಗೆ ವಕ್ಫ್ ಬೋರ್ಡ್ ಚುನಾವಣೆ ನಡೆಸಿತ್ತು. ಫೆ.25ರಂದು ಕೋಟೆಪುರ, ಮೇಲಂಗಡಿ, ಮುಕ್ಕಚೇರಿ, ಅಳೇಕಲ, ಕಲ್ಲಾಪು ಹೀಗೆ 5 ವಲಯಗಳಿಂದ ತಲಾ 11 ಮಂದಿಯಂತೆ 55 ಮಂದಿ ಸದಸ್ಯರ ಆಯ್ಕೆಗೆ ಚುನಾವಣೆ ನಡೆದಿತ್ತು.
ದ.ಕ. ಜಿಲ್ಲಾ ವಕ್ಫ್ ಅಧಿಕಾರಿ ಹಾಗೂ ಚುನಾವಣಾಧಿಕಾರಿ ಸೈಯದ್ ಮೊಹಝಂ ಪಾಶಾ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಇಂದು‌ ನಡೆಸಿಕೊಟ್ಟರು. ಸದಸ್ಯ ಫಾರೂಕ್ ಯು.ಎಚ್. ಅಧ್ಯಕ್ಷತೆ ವಹಿಸಿದ್ದರು. ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಮತ್ತು ಸದಸ್ಯರು ಉಪಸ್ಥಿತರಿದ್ದರು.

2016-17 ನೇ ಸಾಲಿನಲ್ಲಿ ನ್ಯಾಯಯುತ ಚುನಾವಣೆ ನಡೆಯದೆ ಅನಧಿಕೃತ ಸಮಿತಿ ಆಡಳಿತವನ್ನು ವಶಪಡಿಸಿಕೊಂಡು ಸ್ವಯಂಘೋಷಿತ ಪದಾಧಿಕಾರಿಗಳನ್ನು ನೇಮಿಸಿ ಏಳು ವರ್ಷಗಳ ಕಾಲ ಸರ್ವಾಧಿಕಾರದ ಆಡಳಿತ ನಡೆಸುತ್ತ ಬಂದಿತ್ತು. ಕರ್ನಾಟಕ ಸರಕಾರದ 2011 ರ ಸುತ್ತೋಲೆ ಮತ್ತು ಕರ್ನಾಟಕ ವಕ್ಫ್ ಮಂಡಳಿಯ ನಿರ್ಣಯ ಮತ್ತು ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿ ಮದ್ರಸಾ ಪಠ್ಯ ಪುಸ್ತಕಗಳನ್ನು ಬದಲಿಸಿ, ಗೊಂದಲ ಗಲಾಟೆಗಳಿಗೆ ಸ್ವಯಂಘೋಷಿತ ಸಮಿತಿ ಕಾರಣವಾಗಿತ್ತು.

ವಕ್ಫ್ ಇಲಾಖೆಯಿಂದ ದಿಢೀರ್ ಚುನಾವಣೆ ; ಉಳ್ಳಾಲ ದರ್ಗಾ ಎಸ್ಸೆಸ್ಸೆಫ್ ತೆಕ್ಕೆಗೆ,  ಎಂಟು ವರ್ಷದ ಸರ್ವಾಧಿಕಾರಕ್ಕೆ ಬ್ರೇಕ್ ! ಕೋರ್ಟ್ ಮೆಟ್ಟಿಲೇರಿದ ಹಳೆ ಆಡಳಿತ

Mangalore Ullal dargah gets new president after seven years, Bava Gulam Hanif new president.