ಹೆದ್ದಾರಿ ಇಲಾಖೆಗೆ ಸಂತ್ರಸ್ತರ ಮುತ್ತಿಗೆ ; ಮಂಗಳೂರು-ಮೂಡುಬಿದ್ರೆ ಹೆದ್ದಾರಿ ಹೆಸರಲ್ಲಿ ಭಾರೀ ಮೋಸ, ಬೇನಾಮಿ ಆಸ್ತಿಗೆ ಬೆಲೆ ಗಿಟ್ಟಿಸಲು ಅಡ್ಡೂರಿಗೆ ಒಯ್ದ ಹೆದ್ದಾರಿ ! ರಸ್ತೆ ಓರೆಕೋರೆಗೆ ನಾನು ಹೊಣೆಯಲ್ಲ ಎಂದ ಅಧಿಕಾರಿ !  

07-03-23 06:14 pm       Mangalore Correspondent   ಕರಾವಳಿ

ಮಂಗಳೂರು- ಮೂಡುಬಿದ್ರೆ- ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಹೆಸರಲ್ಲಿ ಭಾರೀ ಭ್ರಷ್ಟಾಚಾರ ನಡೀತಿದೆ, ಹೆದ್ದಾರಿ ಅಧಿಕಾರಿಗಳು ಜನಪ್ರತಿನಿಧಿಗಳ ಜೊತೆ ಸೇರಿ ಮೋಸ ಮಾಡುತ್ತಿದ್ದಾರೆಂದು ಆರೋಪಿಸಿ ಹೆದ್ದಾರಿಗೆ ಭೂಮಿ ಕಳಕೊಳ್ಳುತ್ತಿರುವ ರೈತರು ನಗರದ ನಂತೂರಿನಲ್ಲಿರುವ ಹೆದ್ದಾರಿ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ.

ಮಂಗಳೂರು, ಮಾ.7: ಮಂಗಳೂರು- ಮೂಡುಬಿದ್ರೆ- ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಹೆಸರಲ್ಲಿ ಭಾರೀ ಭ್ರಷ್ಟಾಚಾರ ನಡೀತಿದೆ, ಹೆದ್ದಾರಿ ಅಧಿಕಾರಿಗಳು ಜನಪ್ರತಿನಿಧಿಗಳ ಜೊತೆ ಸೇರಿ ಮೋಸ ಮಾಡುತ್ತಿದ್ದಾರೆಂದು ಆರೋಪಿಸಿ ಹೆದ್ದಾರಿಗೆ ಭೂಮಿ ಕಳಕೊಳ್ಳುತ್ತಿರುವ ರೈತರು ನಗರದ ನಂತೂರಿನಲ್ಲಿರುವ ಹೆದ್ದಾರಿ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ.

ಮರಿಯಮ್ಮ ಥೋಮಸ್ ಮತ್ತು ಬೃಜೇಶ್ ಶೆಟ್ಟಿ ಮಿಜಾರು ನೇತೃತ್ವದಲ್ಲಿ ಭೂಮಿ ಕಳಕೊಳ್ಳುವ ನೂರಾರು ಮಂದಿ ತಮಗೆ ಪರಿಹಾರ ನೀಡದೆ ಭೂಮಿಯನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದ್ದಾರೆ. ಏಳು ವರ್ಷಗಳ ಹಿಂದೆ 2016ರಲ್ಲಿ ಹೆದ್ದಾರಿ ವಿಸ್ತರಣೆಯ ಭೂಸ್ವಾಧೀನಕ್ಕೆ ಅಧಿಸೂಚನೆ ಆಗಿತ್ತು. ಆದರೆ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ವಿನಾಕಾರಣ ಸಮಯ ತಳ್ಳುತ್ತಿದ್ದಾರೆ. ಹೈಕೋರ್ಟಿನಲ್ಲಿ ಪರಿಹಾರಕ್ಕಾಗಿ ಅರ್ಜಿ ಹಾಕಿದರೆ, ಅದಕ್ಕೆ ಪ್ರತಿಕ್ರಿಯೆ ನೀಡುವುದಕ್ಕೂ ಮುಂದಾಗಿರಲಿಲ್ಲ. ಕೇವಲ 45 ಕಿಮೀ ಉದ್ದದ ಕಾರ್ಕಳದ ಸಾಣೂರಿನಿಂದ ಮಂಗಳೂರಿನ ಕುಲಶೇಖರದ ವರೆಗಿನ ಹೆದ್ದಾರಿ ಕಾಮಗಾರಿಗೆ ಎಷ್ಟು ವರ್ಷ ಬೇಕು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಹೆದ್ದಾರಿ ಕೆಲಸ ಆಗುತ್ತಿಲ್ಲ. ಪರಿಹಾರವನ್ನೂ ಕೊಡದೆ ವಂಚಿಸುತ್ತಿದ್ದಾರೆ.

ಈಗ ಚುನಾವಣೆ ವೇಳೆಗೆ ಕಾಮಗಾರಿ ಮಾಡಿಸಿದ್ದೇವೆಂದು ತೋರಿಸಿಕೊಳ್ಳಲು ಕೇವಲ ಸರಕಾರಿ ಜಾಗ ಇರುವಲ್ಲಿ ಕಾಮಗಾರಿ ಮಾಡುತ್ತಿದ್ದಾರೆ. ಉಳಿದಂತೆ, 80 ಶೇಕಡಾ ಭೂಮಿಯನ್ನು ಸ್ವಾಧೀನ ಪಡಿಸಿಲ್ಲ. ಹೆದ್ದಾರಿ ಪ್ರಾಧಿಕಾರದಿಂದ ಪರಿಹಾರವನ್ನೂ ಕೊಟ್ಟಿಲ್ಲ ಎಂದು ಬೃಜೇಶ್ ಶೆಟ್ಟಿ ಮಿಜಾರು ದೂರಿದರು. ಒಂದು ಹಂತದಲ್ಲಿ ಹೆದ್ದಾರಿ ಪ್ರಾಧಿಕಾರದ ಯೋಜನಾಧಿಕಾರಿ ಲಿಂಗೇಗೌಡ ಮತ್ತು ಸಂತ್ರಸ್ತರ ನಡುವೆ ಭಾರೀ ವಾಗ್ವಾದ ನಡೆಯಿತು. ಪರಿಹಾರ ಯಾವಾಗ ಕೊಡುತ್ತೀರಿ ಎಂದು ಕೂಡಲೇ ದಿನಾಂಕ ತಿಳಿಸಬೇಕು. ಇಲ್ಲದೇ ಇದ್ದರೆ, ರಾಷ್ಟ್ರೀಯ ಹೆದ್ದಾರಿಯನ್ನೇ ಬಂದ್ ಮಾಡುತ್ತೇವೆ ಎಂದು ಎಚ್ಚರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ, ನಮಗೆ ಒಟ್ಟು 45 ಕಿಮೀ ಉದ್ದದ ಹೆದ್ದಾರಿಗೆ 480 ಕೋಟಿಗೆ ಟೆಂಡರ್ ಆಗಿರುವುದು. ಕುಲಶೇಖರದ ಎರಡು ಗುಂಟೆ ಜಾಗದಲ್ಲಿ ಪರಿಹಾರ ಹೆಚ್ಚು ನೀಡಬೇಕೆಂದು ಕೇಳುತ್ತಿದ್ದಾರೆ. ಒಂದು ಸೆಂಟ್ಸ್ ಗೆ ಎರಡೂವರೆ ಲಕ್ಷ ರೂಪಾಯಿ ಕೊಡಲು ಸಿದ್ಧರಿದ್ದೇವೆ ಎಂದು ಹೇಳಿದಾಗ, ಅದಕ್ಕೆ ಕುಲಶೇಖರದ ನಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ಈ ವೇಳೆ, ಹೆದ್ದಾರಿ ಅಧಿಕಾರಿಗಳನ್ನು ರೈತ ಮುಖಂಡರು ತರಾಟೆಗೆತ್ತಿಕೊಂಡಿದ್ದು, ನೀವು ಭ್ರಷ್ಟರಿದ್ದೀರಿ, ಉದ್ದೇಶ ಪೂರ್ವಕ ವಿಳಂಬ ಮಾಡುತ್ತಿದ್ದೀರಿ, ನೀವು ಹೈಕೋರ್ಟಿನಲ್ಲಿ ವಿಳಂಬ ಆಗುವಂತೆ ಮಾಡಿದ್ದೀರಿ, ಹೈಕೋರ್ಟ್ ಭೂಮಿಗೆ ಸೂಕ್ತ ಪರಿಹಾರ ನೀಡಲು ಆದೇಶ ಮಾಡಿದ್ದರೂ, ಮತ್ತೆ ಜಿಲ್ಲಾಧಿಕಾರಿ ಕೋರ್ಟಿಗೆ ಯಾಕೆ ತಂದಿದ್ದೀರಿ ಎಂದು ಪ್ರಶ್ನೆ ಮಾಡಿದರು. ಇದೇ ವೇಳೆ, 45 ಕಿಮೀ ಉದ್ದದ ರಸ್ತೆಯನ್ನು ಓರೆಕೋರೆಯಾಗಿಸಿ 5 ಕಿಮೀ ಹೆಚ್ಚುವರಿ ಮಾಡಿದ್ದೀರಿ. ಇದರಿಂದ ನಿಮಗೆ ನಷ್ಟ ಆಗುವುದಿಲ್ಲವೇ.. ಇದಕ್ಕೆ ಯಾರು ಹೊಣೆ ಎಂದು ಪ್ರಶ್ನೆ ಮಾಡಿದರು. ನಾಲ್ಕು ವರ್ಷಗಳ ಮೊದಲೇ ರಸ್ತೆಯ ವಿನ್ಯಾಸ ಆಗಿದೆ, ರಸ್ತೆ ಓರೆ ಕೋರೆಯಾಗಿದ್ದಕ್ಕೆ ನಾನು ಹೊಣೆಯಲ್ಲ. ನಾನು ವರ್ಷದ ಹಿಂದಷ್ಟೇ ಬಂದಿದ್ದೇನೆ ಎಂದು ಲಿಂಗೇಗೌಡ ಹೇಳಿದರು.

ಬಳಿಕ, ಹೆದ್ದಾರಿ ವಿಭಾಗದ ಬೆಂಗಳೂರಿನ ಅಧಿಕಾರಿಯನ್ನು ಕರೆಸುತ್ತೇನೆ, 45 ದಿನಗಳ ಟೈಮ್ ಕೊಡಿ ಎಂದು ಲಿಂಗೇಗೌಡ ಕೇಳಿದಾಗ ಆಕ್ಷೇಪ ವ್ಯಕ್ತಪಡಿಸಿದ ಮರಿಯಮ್ಮ ಥೋಮಸ್, ಒಂದೂವರೆ ತಿಂಗಳು ಟೈಮ್ ಕೊಡಲು ಸಾಧ್ಯವಿಲ್ಲ. ಕೇವಲ 15 ದಿನ ಸಮಯ ಕೊಡುತ್ತೇವೆ, ಹೆದ್ದಾರಿ ಅಧಿಕಾರಿಯನ್ನು ಇಲ್ಲಿಗೇ ಕರೆಸಿ. ನಾವೆಲ್ಲ ಬರುತ್ತೇವೆ ಎಂದು ಹೇಳಿದರು. ಕೊನೆಗೆ, ಮಾ.20-24ರ ಒಳಗೆ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಯನ್ನು ಕರೆಸುತ್ತೇನೆ ಎಂದು ಲಿಂಗೇಗೌಡ ಭರವಸೆ ನೀಡಿದರು.  ಬೃಜೇಶ್ ಶೆಟ್ಟಿ ಮಾತನಾಡಿ, ಇವರಿಗೆ ಹೆದ್ದಾರಿ ಕಾಮಗಾರಿ ಮುಗಿಸಬೇಕೆಂಬ ಇರಾದೆ ಇಲ್ಲ. ಉಪ್ಪಿನಂಗಡಿಯಲ್ಲಿ ಆಗಿರುವ ರೀತಿ ಭೂಸ್ವಾಧೀನ ಮಾಡಿಕೊಡದೆ ವಿಳಂಬ ಮಾಡಿ, ಕಂಟ್ರಾಕ್ಟ್ ಪಡೆದವರನ್ನೇ ಓಡಿಸುವ ಹುನ್ನಾರದಲ್ಲಿದ್ದಾರೆ. ಆನಂತರ, ಮತ್ತೆ ಹೆಚ್ಚುವರಿ ಮೊತ್ತಕ್ಕೆ ಟೆಂಡರ್ ಕರೆದು 40 ಪರ್ಸೆಂಟ್ ಜೇಬಿಗಿಳಿಸುವ ಇರಾದೆ ಹೊಂದಿದ್ದಾರೆ.  ದಕ್ಷಿಣ ಕನ್ನಡ ಮತ್ತು ಉಡುಪಿಯ ಇಬ್ಬರು ಸಂಸದರು ಪ್ರತಿನಿಧಿಸುವ ಕ್ಷೇತ್ರದ ವ್ಯಾಪ್ತಿಯಲ್ಲಿ ಹೆದ್ದಾರಿ ಹಾದು ಹೋಗುತ್ತದೆ. 20 ಹಳ್ಳಿಗಳ ಜನರು ಸಂಕಷ್ಟದಲ್ಲಿದ್ದಾರೆ. ಮಂಗಳೂರಿನ ಸಂಸದ ಆಡಳಿತ ಪಕ್ಷದ ರಾಜ್ಯಾಧ್ಯಕ್ಷನಾಗಿದ್ದರೂ, ಜನರ ಸಮಸ್ಯೆ ಪರಿಹರಿಸುವ ಇರಾದೆ ಹೊಂದಿಲ್ಲ. ಉಡುಪಿ ಸಂಸದೆ ಕೇಂದ್ರದಲ್ಲಿ ಸಚಿವರಾಗಿದ್ದರೂ, ಸ್ಪಂದನೆ ಮಾಡುತ್ತಿಲ್ಲ ಎಂದರು.

ಅಡ್ಡೂರಿನಲ್ಲಿ ರಾಜಕಾರಣಿಗಳ ಬೇನಾಮಿ ಆಸ್ತಿ  

ಮಂಗಳೂರು – ಮೂಡುಬಿದ್ರೆ ನಡುವಿನ ರಸ್ತೆಯನ್ನು ಕೈಕಂಬದಿಂದ ಪೊಳಲಿ- ಅಡ್ಡೂರು ಮೂಲಕ ವಾಮಂಜೂರಿಗೆ ಸಂಪರ್ಕ ಮಾಡುವಂತೆ ಹೆದ್ದಾರಿ ಮಾಡುತ್ತಿದ್ದಾರೆ. ಈಗ ಇರುವ ಗುರುಪುರ ರಸ್ತೆಯನ್ನು ಬದಿಗಿಟ್ಟು ಬೇರೆಯದ್ದೇ ರಸ್ತೆ ಮಾಡುತ್ತಿದ್ದಾರೆ. ಹೆದ್ದಾರಿ ಅಡ್ಡೂರು- ಪೊಳಲಿ ಮಾರ್ಗವಾಗಿ ಹೋಗುವುದರಿಂದ ಐದು ಕಿಮೀ ಹೆಚ್ಚುವರಿ ಉದ್ದವಾಗುತ್ತದೆ. ಅಡ್ಡೂರಿನಲ್ಲಿ ರಾಜಕಾರಣಿಗಳು ಮತ್ತು ಖಾಸಗಿ ಉದ್ಯಮಿಗಳು ಸಾವಿರ ಎಕ್ರೆ ಜಾಗ ಮಾಡಿಕೊಂಡಿದ್ದು, ಅದರ ನಡುವಿನಿಂದ ಹೆದ್ದಾರಿ ಸಾಗಿದಲ್ಲಿ ಅಲ್ಲಿನ ಭೂಮಿಯ ಬೆಲೆ ಹತ್ತು ಪಟ್ಟು ಹೆಚ್ಚುತ್ತದೆ ಎನ್ನುವ ದೂರದ ಪ್ಲಾನ್ ಇಟ್ಟುಕೊಂಡು ರಸ್ತೆ ಮಾಡುತ್ತಿದ್ದಾರೆ. ಆಮೂಲಕ ಜನಸಾಮಾನ್ಯರ ಕಣ್ಣಿಗೆ ಮಣ್ಣೆರಚಿ ತಮ್ಮ ಲಾಭಕ್ಕಾಗಿ ರಸ್ತೆಯನ್ನೇ ತಿರುವು ಮುರುವಾಗಿ ಒಯ್ಯುತ್ತಿದ್ದಾರೆ. ಇದರಲ್ಲಿ ಮಂಗಳೂರಿನ ಪ್ರಭಾವಿ ರಾಜಕಾರಣಿ ಕೈಯಾಡಿಸಿರುವ ಆರೋಪವನ್ನು ಸಂತ್ರಸ್ತರೇ ಮಾಡಿದ್ದಾರೆ.

ಗುರುಪುರ ಸೇತುವೆಯೇ ಯೂಸ್ ಲೆಸ್

ಗುರುಪುರದ ಬದಲು ರಸ್ತೆಯನ್ನು ಅಡ್ಡೂರಿಗೆ ಒಯ್ಯುವ ಯೋಜನೆಯಿಂದ ಎರಡು ವರ್ಷಗಳ ಹಿಂದೆ ಗುರುಪುರದಲ್ಲಿ ಹೊಸತಾಗಿ ಕಟ್ಟಿಸಿದ್ದ ಸೇತುವೆ ನಿಷ್ಪ್ರಯೋಜಕ ಆಗಲಿದೆ. 45 ಕೋಟಿ ವೆಚ್ಚದಲ್ಲಿ ಸೇತುವೆ ಮಾಡಿ, ಈಗ ಅದು ಬೇಡವೆಂದು ಹೆದ್ದಾರಿ ಅಡ್ಡೂರಿಗೆ ಸಾಗಲು ಪ್ರತ್ಯೇಕ ಸೇತುವೆ ಮಾಡುತ್ತಿದ್ದಾರೆ. ಹೆದ್ದಾರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜನರ ದುಡ್ಡಿನಲ್ಲಿ ಹಗಲು ದರೋಡೆ ನಡೆಸುತ್ತಿದ್ದಾರೆ ಅನ್ನುವುದಕ್ಕೆ ಇದೇ ಸಾಕ್ಷಿ.

Mangalore Farmers gherao and protest at NHAI National highway authority office opposing their lands being encroached for stretching the highway illegally. The protest was led under the leadership of Mariamma K Thomas and Brujesh shetty.