ಕೋಟೆಕಾರು ; ಸರಕಾರಿ ಭೂಮಿ ಅತಿಕ್ರಮಿಸಿ ಮನೆಗಳ ನಿರ್ಮಾಣ, ಕಣ್ಣಿದ್ದೂ ಅಧಿಕಾರಿಗಳ ಕುರುಡುತನ, ಸಬೂಬು ಹೇಳುತ್ತಿರುವ ತಹಸೀಲ್ದಾರ್ 

10-03-23 06:14 pm       Mangalore Correspondent   ಕರಾವಳಿ

ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ 14ನೇ ವಾರ್ಡಿನ ನಡುಕುಮೇರು ಎಂಬಲ್ಲಿ ಸರ್ವೆ ನಂಬರ್ 262/1ರ 2 ಎಕರೆ 40 ಸೆಂಟ್ಸ್ ಜಾಗವನ್ನ ಅತಿಕ್ರಮಿಸಿದ ನುಂಗಣ್ಣರು ಮೂರು ತಾರಸಿ ಮನೆ ನಿರ್ಮಿಸುತ್ತಿದ್ದರೂ ಉಳ್ಳಾಲ ತಹಶೀಲ್ದಾರ್ ಮತ್ತು ಕಂದಾಯ ನಿರೀಕ್ಷಕರು ಕಣ್ಣಿಗೆ ಬಟ್ಟೆ ಕಟ್ಟಿದಂತೆ ವರ್ತಿಸುತ್ತಿದ್ದಾರೆ. 

ಉಳ್ಳಾಲ, ಮಾ.10 : ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ 14ನೇ ವಾರ್ಡಿನ ನಡುಕುಮೇರು ಎಂಬಲ್ಲಿ ಸರ್ವೆ ನಂಬರ್ 262/1ರ 2 ಎಕರೆ 40 ಸೆಂಟ್ಸ್ ಜಾಗವನ್ನ ಅತಿಕ್ರಮಿಸಿದ ನುಂಗಣ್ಣರು ಮೂರು ತಾರಸಿ ಮನೆ ನಿರ್ಮಿಸುತ್ತಿದ್ದರೂ ಉಳ್ಳಾಲ ತಹಶೀಲ್ದಾರ್ ಮತ್ತು ಕಂದಾಯ ನಿರೀಕ್ಷಕರು ಕಣ್ಣಿಗೆ ಬಟ್ಟೆ ಕಟ್ಟಿದಂತೆ ವರ್ತಿಸುತ್ತಿದ್ದಾರೆ. 

ಕೋಟೆಕಾರು ಪಟ್ಟಣ ವ್ಯಾಪ್ತಿಯ ನಡುಕುಮೇರು ಎಂಬಲ್ಲಿ ಲೋಕೋಪಯೋಗಿ ಇಲಾಖೆ ರಸ್ತೆ ಅಂಚಿನಲ್ಲಿರುವ 2 ಎಕರೆ 40 ಸೆಂಟ್ಸ್ ಸರಕಾರಿ ಭೂಮಿಯನ್ನ ನುಂಗಣ್ಣರು ಅತಿಕ್ರಮಿಸಿ ಮಾರಾಟ ನಡೆಸುತ್ತಿದ್ದಾರೆ. ಸ್ಥಳದಲ್ಲಿ ಈಗಾಗಲೇ ಮೂರು ತಾರಸಿ ಮನೆಗಳು ನಿರ್ಮಾಣ ಹಂತದಲ್ಲಿದ್ದು ಮತ್ತೊಂದು ಮನೆ ನಿರ್ಮಾಣಕ್ಕೆ ಭೂಮಿಪೂಜೆ ನಡೆದು ಅಡಿಪಾಯ ಹಾಕಲು ಸಿದ್ಧತೆ ನಡೆಸಿದ್ದಾರೆ. 

ವಿಶೇಷವೆಂದರೆ ಭೂಮಿ ಅತಿಕ್ರಮಣದ ಬಗ್ಗೆ ಕೋಟೆಕಾರು ಪಟ್ಟಣ ಪಂಚಾಯತ್ ಗ್ರಾಮ ಲೆಕ್ಕಾಧಿಕಾರಿ ನವ್ಯಾ ಅವರು ಕಳೆದ ಫೆ.24 ರಂದೇ ಉಳ್ಳಾಲ ತಹಶೀಲ್ದಾರ್ ಪುಟ್ಟರಾಜು ಅವರಿಗೆ ವರದಿ‌ ಹಾಕಿದ್ದರೂ ಅತಿಕ್ರಮಣದ ವಿರುದ್ಧ ಇದುವರೆಗೆ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ. ಮಾಧ್ಯಮದವರು ತಹಶೀಲ್ದಾರ್ ಗೆ ಕರೆ ಮಾಡಿ ಕೇಳಿದಾಗ ಕಂದಾಯ ನಿರೀಕ್ಷಕರಿಗೆ ಕರೆ ಮಾಡಲು ಹೇಳಿದ್ದಾರೆ. ಕಂದಾಯ ನಿರೀಕ್ಷಕ ಮಂಜುನಾಥರನ್ನ ಕೇಳಿದಾಗ ತಾನು ನಿನ್ನೆ, ಮೊನ್ನೆ ಸ್ಥಳಕ್ಕೆ ದಾಳಿ ನಡೆಸಿ ಕಾಮಗಾರಿ ತಡೆದಿದ್ದೇನೆ, ಇವತ್ತೂ ಕಾಮಗಾರಿ ನಡೀತಿದಿಯಾ ಅಂಥ ಮಾಧ್ಯಮದವರಲ್ಲೇ ಕೇಳಿದ್ದಾರೆ. ಶುಕ್ರವಾರ ಸರ್ವೆಯರನ್ನ ಕಳಿಸಿ ನಕ್ಷೆ ನೋಡಿ ವರದಿ ತಗೊಂಡು ಕ್ರಮ ಕೈಗೊಳ್ಳುತ್ತೇನೆಂದು ಮಂಜುನಾಥ್ ಸಬೂಬು ನೀಡಿದ್ದಾರೆ.

ಸರಕಾರಿ ಜಮೀನು ಕಣ್ಣೆದುರೇ ಅತಿಕ್ರಮಣವಾಗುತ್ತಿರುವುದನ್ನ ಮನಗಂಡ ಕೋಟೆಕಾರ್ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮಾಲತಿಯವರು ಕಳೆದ ಮಾ.8 ರ ಬುಧವಾರವೇ ಸರ್ವೆ ನಂಬರ್ 262/1 ರ 2.40 ಎಕರೆ ಜಾಗವನ್ನ ಪಟ್ಟಣ ವ್ಯಾಪ್ತಿಗೆ ಸುಸಜ್ಜಿತ ಪಾರ್ಕ್, ಈಜುಕೊಳ ನಿರ್ಮಾಣಕ್ಕೆ ಕಾಯ್ದಿರಿಸುವಂತೆ ತಹಶೀಲ್ದಾರ್ ಗೆ ಪತ್ರ ಬರೆದಿದ್ದಾರೆ. 

ಕೆಲವು ಅಧಿಕಾರಿಗಳ ನೌಟಂಕಿತನದಿಂದಲೇ ಈಗಾಗಲೇ ಕೋಟೆಕಾರು ಪಟ್ಟಣ ವ್ಯಾಪ್ತಿಯ ಎಕರೆಗಟ್ಟಲೆ ಜಾಗವನ್ನ ನುಂಗಣ್ಣರು ಅತಿಕ್ರಮಿಸಿದ್ದಾರೆ. ಪಟ್ಟಣ ವ್ಯಾಪ್ತಿಯ ಸಾವಿರಕ್ಕೂ ಅಧಿಕ ಮಂದಿ ನಿವೇಶನಕ್ಕೆ ಅರ್ಜಿ ಸಲ್ಲಿಸಿದವರಿದ್ದಾರೆ. ನಿವೇಶನ ರಹಿತರಿಗೆ ಕೊಡಬೇಕಾದ ಕೋಟಿ ಬೆಲೆ ಬಾಳುವ ಸರಕಾರಿ ಭೂಮಿ ಅತಿಕ್ರಮಣವನ್ನ ಅಧಿಕಾರಿಗಳು‌ ಶೀಘ್ರವೇ ತಡೆಯಬೇಕಿದೆ.

Mangalore Government land encroached on building private homes at Kotekar illegally.